ADVERTISEMENT

ರಹಾನೆಗೆ ಮರಳಿ ಅರಳುವ ’ಟೆಸ್ಟ್‌‘

ಪಿಟಿಐ
Published 4 ಜೂನ್ 2023, 23:35 IST
Last Updated 4 ಜೂನ್ 2023, 23:35 IST
ರಹಾನೆ
ರಹಾನೆ   

ಲಂಡನ್: ಮುಂಬೈಕರ್ ಅಜಿಂಕ್ಯ ರಹಾನೆ  ಒಂದೂವರೆ ವರ್ಷದ ನಂತರ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದಾರೆ.

ಇದೇ 7ರಿಂದ ದ  ಓವಲ್‌ನಲ್ಲಿ ಆರಂಭವಾಗಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ.  ಇತ್ತೀಚೆಗೆ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಮಿಂಚಿದ್ದ ಅವರು ಟಿ20 ಮಾದರಿಯಿಂದ ಟೆಸ್ಟ್‌ಗೆ ಹೊಂದಿಕೊಳ್ಳುವ ಸವಾಲನ್ನು ಎದುರಿಸುತ್ತಿದ್ದಾರೆ.

2022ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಸೋಲಿನ ನಂತರ ರಹಾನೆ ಮತ್ತು ಚೇತೇಶ್ವರ್ ಪೂಜಾರ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೆ ಪೂಜಾರ ಇಂಗ್ಲಿಷ್ ಕೌಂಟಿಯಲ್ಲಿ ಆಡಿ ರನ್‌ ಗಳಿಸಿದ್ದರು.  ಆ ಮೂಲಕ ಅದೇ ವರ್ಷ ಮತ್ತೆ ಭಾರತ ಬಳಗಕ್ಕೆ ಹಿಂದಿರುಗುವಲ್ಲಿ ಯಶಸ್ವಿಯಾಗಿದ್ದರು.

ADVERTISEMENT

ಆದರೆ ರಹಾನೆ ಅವರು ದೀರ್ಘ ಅವಧಿಯವರೆಗೆ ಕಾಯಬೇಕಾಯಿತು. 82 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಅನುಭವಿ ರಹಾನೆ ಕಳೆದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದರು. ನಂತರ ಐಪಿಎಲ್‌ನಲ್ಲಿಯೂ ಬೆಳಗಿದ್ದರು.

ಇದೇ ಸಂದರ್ಭದಲ್ಲಿ ಶ್ರೇಯಸ್ ಅಯ್ಯರ್ ಶಸ್ತ್ರಚಿಕಿತ್ಸೆಗೊಳಗಾದ ಕಾರಣ ರಹಾನೆಗೆ ಅವಕಾಶ ಒಲಿದಿದೆ.

2021ರಲ್ಲಿ ರಹಾನೆ ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿ ಟ್ರೋಫಿ ಗೆದ್ದು ಇತಿಹಾಸ ಬರೆದಿದ್ದರು.

’ಈ ಪಂದ್ಯಕ್ಕೆ ರಹಾನೆ ಅವರನ್ನು ಆಯ್ಕೆ ಮಾಡಿರುವುದು ಸೂಕ್ತವಾಗಿದೆ. ಮುಂದೆ ಶ್ರೇಯಸ್ ಅಯ್ಯರ್ ಫಿಟ್ ಆದ ಮೇಲೆ ಪರಿಸ್ಥಿತಿ ಬೇರೆ ಎದುರಾಗಬಹುದು. ರಹಾನೆ  ಇಲ್ಲಿಯ ಅವಕಾಶವನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆಂಬುದೂ ಮುಖ್ಯ‘ ಎಂದು ಹಿರಿಯ ಕ್ರಿಕೆಟಿಗ ಶರಣದೀಪ್ ಸಿಂಗ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.