ADVERTISEMENT

ಎಳೆಯರಿಗೆ ರಾಹುಲ್‌ ದ್ರಾವಿಡ್‌ ‘ಸ್ಪೂರ್ತಿ’ ಪಾಠ

ಕೆಎಸ್‌ಸಿಎ ಧಾರವಾಡ ವಲಯದ ಆಟಗಾರರೊಂದಿಗೆ ಸಂವಾದ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 14:17 IST
Last Updated 12 ಜೂನ್ 2019, 14:17 IST
ಹುಬ್ಬಳ್ಳಿ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾರತ ’ಎ‘ ತಂಡದ ತರಬೇತುದಾರ ರಾಹುಲ್‌ ದ್ರಾವಿಡ್‌ ಮಾತನಾಡಿದರು. ಧಾರವಾಡ ವಲಯದ ಕನ್ವೆನರ್‌ ಬಾಬಾ ಭೂಸದ ಇದ್ದಾರೆ –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾರತ ’ಎ‘ ತಂಡದ ತರಬೇತುದಾರ ರಾಹುಲ್‌ ದ್ರಾವಿಡ್‌ ಮಾತನಾಡಿದರು. ಧಾರವಾಡ ವಲಯದ ಕನ್ವೆನರ್‌ ಬಾಬಾ ಭೂಸದ ಇದ್ದಾರೆ –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಭಾರತೀಯ ಕ್ರಿಕೆಟ್‌ ಗೋಡೆ’ ಖ್ಯಾತಿಯ ಕ್ರಿಕೆಟ್‌ ದಿಗ್ಗಜ ರಾಹುಲ್‌ ದ್ರಾವಿಡ್‌ ಬುಧವಾರ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನೂರಾರು ಎಳೆಯರಿಗೆ ಕ್ರಿಕೆಟ್‌ ಆಟದ ಒಳಹೊರಗಿನ ತಂತ್ರಗಳು ಹಾಗೂ ಕ್ರೀಡಾ ಜೀವನ, ಬದ್ಧತೆ, ದೃಢತೆ ಕುರಿತು ಸ್ಪೂರ್ತಿದಾಯಕ ಮಾತುಗಳನ್ನು ಆಡಿದರು.

ಕೆಎಸ್‌ಸಿಎ ಧಾರವಾಡ ವಲಯದ 14, 16 ಮತ್ತು 19 ವರ್ಷದೊಳಗಿನ ತಂಡಕ್ಕೆ ಆಯ್ಕೆಯಾಗಿರುವ ಕ್ರಿಕೆಟ್‌ ಆಟಗಾರರೊಂದಿಗೆ ಸುಮಾರು ಒಂದು ತಾಸು ‘ಕ್ರಿಕೆಟ್‌’ ಮಾತು, ಸಂವಾದ ನಡೆಸಿದರು.

‘ನಾವಾಡುವ ಪ್ರತಿ ಪಂದ್ಯವನ್ನು ಗೆಲ್ಲಲೂಬಹುದು, ಸೋಲಲೂ ಬಹುದು. ಆದರೆ, ಈ ಎರಡರಲ್ಲೂ ನಾವು ಕಲಿಯುವುದು, ಆ ಮೂಲಕ ಬೆಳೆಯುವುದು ಇರುತ್ತದೆ ಎಂಬುದನ್ನು ಎಂದಿಗೂ ಮರೆಯಬಾರದು’ ಎಂದು ಹೇಳಿದರು.

ADVERTISEMENT

‘ಪ್ರತಿ ಪಂದ್ಯದಲ್ಲಿ, ಪ್ರತಿ ಬಾಲ್‌ಗೆ ಹೇಗೆ ಆಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಂಡು ಮೈದಾನಕ್ಕೆ ಇಳಿಯಲು ಸಾಧ್ಯವಿಲ್ಲ. ಆ ಸಂದರ್ಭಕ್ಕೆ ಅನುಗುಣವಾಗಿ ಆಡಬೇಕಾಗುತ್ತದೆ’ ಎಂದರು.

’ಕ್ರಿಕೆಟ್‌ನಲ್ಲಿ ಮುಚ್ಚಿಡುವಂತಹ ತಂತ್ರಗಾರಿಗೆ ಯಾವುದೂ ಇಲ್ಲ. ದೃಢ ನಿರ್ಧಾರ, ಏಕಾಗ್ರತೆ ಮುಖ್ಯ. ಎಲ್ಲ ಕ್ರಿಕೆಟಿಗರು ಕರ್ನಾಟಕ, ಭಾರತ ತಂಡವನ್ನು ಪ್ರತಿನಿಧಿಸಲು ಸಾಧ್ಯವಾಗುವುದಿಲ್ಲ. ಆದರೆ, ಆಟ ಆಡುವ ಮೂಲಕ ಖುಷಿ ಪಡೆದುಕೊಳ್ಳಬೇಕು. ಕಠಿಣ ಅಭ್ಯಾಸ, ಶಿಸ್ತು, ದೃಢ ವಿಶ್ವಾಸ ಮೈಗೂಡಿಸಿಕೊಳ್ಳಬೇಕು’ ಎಂದರು.

‘ಯಾವುದೇ ಕ್ರಿಡೆ ಇರಲಿ, ಸೋತಾಗ ದುಃಖಿಸುವುದಾಗಲಿ, ಗೆದ್ದಾಗ ಬೀಗುವುದಾಗಲಿ ಅನಗತ್ಯ. ಏಕೆಂದರೆ ಇದು ಗೇಮ್‌. ಏನಾದರೂ ಆಗಬಹುದು. ಆದರೆ, ಮುಂದಿನ ಪಂದ್ಯಕ್ಕೆ ಗಮನಹರಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಕ್ರೀಡಾಪಟುಗಳಿಗೆ ದೈಹಿಕ ಮತ್ತು ಮಾನಸಿಕ ದೃಢತೆ ಅತ್ಯಗತ್ಯ. ಇದು ಆರೋಗ್ಯ ವೃದ್ಧಿಗೂ ಅನುಕೂಲವಾಗುತ್ತದೆ. ಆಟದ ಜೊತೆಗೆ ಓದಿಗೂ ಆದ್ಯತೆ ನೀಡಬೇಕು. ಉತ್ತಮ ಅಂಕಗಳನ್ನು ಗಳಿಸಬೇಕು. ಪ್ರತಿದಿನ ಎರಡು ಗಂಟೆ ಕ್ರಿಕೆಟ್‌ ಅಭ್ಯಾಸಕ್ಕೆ ಮೀಸಲಿಡಬೇಕು. ಇನ್ನುಳಿದ ಸಮಯದಲ್ಲಿ ಓದಿಗೆ ಆದ್ಯತೆ ನೀಡಬೇಕು. ಇದರಿಂದ ಭವಿಷ್ಯಕ್ಕೆ ಸಹಾಯವಾಗುತ್ತದೆ’ ಎಂದರು.

‘ಹುಬ್ಬಳ್ಳಿ ನಗರದಲ್ಲಿ ಯುವ ಕ್ರಿಕೆಟಿಗರಿಗೆ ಉತ್ತಮ ಅವಕಾಶ, ಸೌಲಭ್ಯಗಳು ಇವೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕೆಎಸ್‌ಸಿಎ ಧಾರವಾಡ ವಲಯದ ಕನ್ವೆನರ್‌ ಬಾಬಾ ಭೂಸ‌ದ, ಬಿಸಿಸಿಐ ಅಧಿಕಾರಿ ರಾಹಿಲ್‌, ಸಂಘಟಕ ಶಿವಾನಂದ ಗುಂಜಾಳ ಮತ್ತು ಅಮಿತ್‌ ಭೂಸದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.