ADVERTISEMENT

ಮಂಗಳೂರು ರಣಜಿ ಪಂದ್ಯದ ಚೆಂದದ ನೆನಪು

ಮಹೇಶ ಕನ್ನೇಶ್ವರ
Published 16 ಡಿಸೆಂಬರ್ 2018, 19:45 IST
Last Updated 16 ಡಿಸೆಂಬರ್ 2018, 19:45 IST
ಮೈಸೂರು ತಂಡದ ಆಟಗಾರರನ್ನು ಪರಿಚಯಿಸಿಕೊಳ್ಳುತ್ತಿರುವ ಅತಿಥಿಗಳು
ಮೈಸೂರು ತಂಡದ ಆಟಗಾರರನ್ನು ಪರಿಚಯಿಸಿಕೊಳ್ಳುತ್ತಿರುವ ಅತಿಥಿಗಳು   

ಕಡಲ ತಡಿಯ ಮಂಗಳೂರಿನಲ್ಲಿ ರಣಜಿ ಕ್ರಿಕೆಟ್‌ ಟೂರ್ನಿಯ ಪಂದ್ಯ ನಡೆದು ಆರು ದಶಕಗಳು ಸಮೀಪಿಸುತ್ತಿವೆ. ನಗರ ಮಧ್ಯದ ನೆಹರು ಮೈದಾನದಲ್ಲಿ ನಡೆದ ಆ ಪಂದ್ಯದ ನೆನಪು ಹಿರಿಯ ಆಟಗಾರರಲ್ಲಿ ಮತ್ತು ಕ್ರಿಕೆಟ್ ಪ್ರಿಯರಲ್ಲಿ ಇನ್ನೂ ಹಸಿರಾಗಿದೆ. ಆದರೆ ಪಂದ್ಯ ನಡೆದ ನೆಹರು ಮೈದಾನ ಮಾತ್ರ ಇನ್ನೂ ಬದಲಾಗದೇ ಉಳಿದಿದೆ.

1959ರ ಡಿಸೆಂಬರ್‌ 12ರಿಂದ 14ರ ವರೆಗೆ ಮೈಸೂರು (ಕರ್ನಾಟಕ) ಮತ್ತು ಕೇರಳ ನಡುವೆ ದಕ್ಷಿಣ ವಲಯದ ಲೀಗ್‌ ಪಂದ್ಯ ನೆಹರು ಮೈದಾನದಲ್ಲಿ ನಡೆದಿತ್ತು. ಮೈಸೂರು ತಂಡ ಇನಿಂಗ್ಸ್ ಮತ್ತು 97 ರನ್‌ಗಳಿಂದ ಗೆದ್ದಿತ್ತು.

ಮೊದಲ ಇನಿಂಗ್ಸ್‌ನಲ್ಲಿ ಮೈಸೂರು ತಂಡ 93 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 423 ರನ್‌ ಕಲೆ ಹಾಕಿತ್ತು. ಕೆ.ಕೆ. ವಾಸುದೇವಮೂರ್ತಿ 139 ರನ್‌ ಗಳಿಸಿದ್ದರು. ಎಸ್‌. ಕೃಷ್ಣಮೂರ್ತಿ 52 ಮತ್ತು ದಾಸ್‌ ಗುಪ್ತಾ 68 ರನ್‌ ಗಳಿಸಿದ್ದರು. ಕೇರಳ ಮೊದಲ ಇನಿಂಗ್ಸ್‌ನಲ್ಲಿ 139 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 187 ರನ್ ದಾಖಲಿಸಿತ್ತು.

ADVERTISEMENT

‘ಎಂ.ಸೂರ್ಯನಾರಾಯಣನ್‌ ಮೈಸೂರು ತಂಡದ ನಾಯಕನಾಗಿದ್ದರು. ಮಂಗಳೂರಿನ ಎಸ್‌.ಗೋಪಾಲ ಪೈ ಮತ್ತು ಬಿ.ಸಿ.ಆಳ್ವ ತಂಡದಲ್ಲಿದ್ದರು’ ಎಂದು ಆ ಪಂದ್ಯವನ್ನು ವೀಕ್ಷಿಸಿದ್ದ ಕಸ್ತೂರಿ ಬಾಲಕೃಷ್ಣ ಪೈ ಹೇಳಿದರು.

‘ಆಗ ನೆಹರು ಮೈದಾನದಲ್ಲಿ ತಾತ್ಕಾಲಿಕ ಗ್ಯಾಲರಿ ಅಳವಡಿಸಲಾಗಿತ್ತು. ಮೈದಾನ ವಿಶಾಲವಾಗಿತ್ತು. ಇತ್ತೀಚೆಗೆ ಅದು ಸಣ್ಣದಾಗುತ್ತ ಹೋಗುತ್ತಿದೆ. ಕ್ರೀಡೆ ಬಿಟ್ಟು ಬೇರೆ ಉದ್ದೇಶಗಳಿಗೆ ಬಳಕೆ ಆಗುತ್ತಿದೆ. ಮಂಗಳೂರಿನಲ್ಲಿ ವ್ಯವಸ್ಥಿತವಾದ ಕ್ರಿಕೆಟ್ ಅಂಗಣ ಇನ್ನೂ ಆಗಿಲ್ಲ’ ಎಂದುಕಸ್ತೂರಿ ಬಾಲಕೃಷ್ಣ ಪೈ ಹೇಳಿದರು.

ಸಂತ್ರಸ್ತ ನಿಧಿ ಸಂಗ್ರಹಕ್ಕೆ ಟೂರ್ನಿ

1967ರ ಏಪ್ರಿಲ್‌ 5ರಿಂದ 7ರ ವರೆಗೆ ಕೊಯ್ನಾ ಭೂಕಂಪ ಸಂತ್ರಸ್ತರ ಪರಿಹಾರ ನಿಧಿಗಾಗಿ ‘ಕರ್ನಾಟಕ ಫೈನಾನ್ಸ್‌ ಮಿನಿಸ್ಟರ್ಸ್‌ ಇಲೆವನ್‌, ಮಹಾರಾಷ್ಟ್ರ ಫೈನಾನ್ಸ್‌ ಮಿನಿಸ್ಟರ್ಸ್‌ ಇಲೆವನ್‌’ ತಂಡಗಳ ನಡುವೆ 10 ಪಂದ್ಯಗಳು ನಡೆದಿದ್ದವು. ಸುಬ್ರಹ್ಮಣ್ಯಂ, ಸುನಿಲ್‌ ಗವಾಸ್ಕರ್‌ ಮತ್ತಿತರರು ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.