ADVERTISEMENT

ವಿದಾಯದ ಪಂದ್ಯದಲ್ಲಿ ಮಿಂಚಿದ ಗಂಭೀರ್‌

ಪಿಟಿಐ
Published 7 ಡಿಸೆಂಬರ್ 2018, 20:00 IST
Last Updated 7 ಡಿಸೆಂಬರ್ 2018, 20:00 IST
ಗೌತಮ್‌ ಗಂಭೀರ್‌ ಪತ್ನಿ ನತಾಶ ಜೈನ್‌ ಅವರು ಮಕ್ಕಳೊಂದಿಗೆ ಶುಕ್ರವಾರ ಫಿರೋಜ್‌ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು –ಪಿಟಿಐ ಚಿತ್ರ
ಗೌತಮ್‌ ಗಂಭೀರ್‌ ಪತ್ನಿ ನತಾಶ ಜೈನ್‌ ಅವರು ಮಕ್ಕಳೊಂದಿಗೆ ಶುಕ್ರವಾರ ಫಿರೋಜ್‌ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು –ಪಿಟಿಐ ಚಿತ್ರ   

ನವದೆಹಲಿ: ವಿದಾಯದ ಪಂದ್ಯ ಆಡುತ್ತಿರುವ ದೆಹಲಿ ತಂಡದ ಗೌತಮ್‌ ಗಂಭೀರ್‌ (ಬ್ಯಾಟಿಂಗ್‌ 92; 154ಎ, 8ಬೌಂ) ಶುಕ್ರವಾರ ಫಿರೋಜ್‌ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಮೋಡಿ ಮಾಡಿದರು.

ಗಂಭೀರ್‌ ಅವರ ಅರ್ಧಶತಕದ ಬಲದಿಂದ ದೆಹಲಿ ತಂಡ ರಣಜಿ ಟ್ರೋಫಿ ಎಲಿಟ್‌ ‘ಬಿ’ ಗುಂಪಿನ ಪಂದ್ಯದಲ್ಲಿ ಆಂಧ್ರ ತಂಡಕ್ಕೆ ದಿಟ್ಟ ಉತ್ತರ ನೀಡಿದೆ.

ದೆಹಲಿ ತಂಡ ಎರಡನೇ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 56 ಓವರ್‌ಗಳಲ್ಲಿ 1 ವಿಕೆಟ್‌ಗೆ 190ರನ್‌ ಗಳಿಸಿದೆ. ಈ ತಂಡ ಎದುರಾಳಿಗಳ ಲೆಕ್ಕ ಚುಕ್ತಾ ಮಾಡಲು ಇನ್ನು 200ರನ್‌ ಕಲೆಹಾಕಬೇಕಿದೆ. ಬಿ.ಸುಮಂತ್‌ ನಾಯಕತ್ವದ ಆಂಧ್ರ, ಪ್ರಥಮ ಇನಿಂಗ್ಸ್‌ನಲ್ಲಿ 121 ಓವರ್‌ಗಳಲ್ಲಿ 390ರನ್‌ ಗಳಿಸಿತ್ತು.

ADVERTISEMENT

ಬ್ಯಾಟಿಂಗ್‌ ಆರಂಭಿಸಿದ ಧ್ರುವ ಶೋರೆ ಬಳಗಕ್ಕೆ ಗಂಭೀರ್‌ ಮತ್ತು ಹಿತೇನ್‌ ದಲಾಲ್‌ (58; 77ಎ, 9ಬೌಂ) ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ ಶತಕದ (108) ಜೊತೆಯಾಟವಾಡಿತು. 26ನೇ ಓವರ್‌ನಲ್ಲಿ ಹಿತೇನ್‌ ಔಟಾದರು. ನಂತರ ಗಂಭೀರ್‌ ಮತ್ತು ನಾಯಕ ಧ್ರುವ (ಬ್ಯಾಟಿಂಗ್‌ 39; 105ಎ, 1ಬೌಂ) ಸುಂದರ ಇನಿಂಗ್ಸ್‌ ಕಟ್ಟಿ ತವರಿನ ಅಭಿಮಾನಿಗಳನ್ನು ರಂಜಿಸಿದರು.

ಭಿಲ್ಲೆ ಶತಕ: ವಲಸಾಡ್‌ನಲ್ಲಿ ನಡೆಯುತ್ತಿರುವ ಎಲಿಟ್‌ ‘ಎ’ ಗುಂಪಿನ ಗುಜರಾತ್‌ ಎದುರಿನ ಪಂದ್ಯದಲ್ಲಿ ರೈಲ್ವೇಸ್‌ ‍ತಂಡದ ನಿತಿನ್‌ ಭಿಲ್ಲೆ (ಬ್ಯಾಟಿಂಗ್‌ 109; 191ಎ, 14ಬೌಂ, 1ಸಿ) ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.

ಕರ್ನಾಟಕದ ನಿತಿನ್‌ ಅವರ ಅಮೋಘ ಆಟದ ಬಲದಿಂದ ರೈಲ್ವೇಸ್‌ ತಂಡ ಮೊದಲ ಇನಿಂಗ್ಸ್‌ನಲ್ಲಿ 82 ಓವರ್‌ಗಳಲ್ಲಿ 3 ವಿಕೆಟ್‌ಗೆ 266ರನ್‌ ದಾಖಲಿಸಿದೆ. ಗುಜರಾತ್‌ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 93.5 ಓವರ್‌ಗಳಲ್ಲಿ 367ರನ್‌ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.