ADVERTISEMENT

Ranji Trophy | ಕೌಶಿಕ್ ದಾಳಿ; ಮುನ್ನಡೆಯ ಸನಿಹ ಕರ್ನಾಟಕ

ಮಯಂಕ್ ಪಡೆ ಓಟಕ್ಕೆ ದೇವನಾಥ್ ಅಡ್ಡಿ; ವೈಶಾಖ, ವಿದ್ವತ್‌ಗೆ ತಲಾ ಎರಡು ವಿಕೆಟ್

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 22:46 IST
Last Updated 27 ಜನವರಿ 2024, 22:46 IST
<div class="paragraphs"><p>ವಾಸುಕಿ ಕೌಶಿಕ್</p></div>

ವಾಸುಕಿ ಕೌಶಿಕ್

   

ಅಗರ್ತಲಾ: ಕರ್ನಾಟಕದ ಮಧ್ಯಮ ವೇಗಿ ವಾಸುಕಿ ಕೌಶಿಕ್ ಮತ್ತೊಮ್ಮೆ ಮಿಂಚಿದರು.

ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ತಂಡವು  ಕೌಶಿಕ್ (19–6–34–4) ಪರಿಣಾಮಕಾರಿ ಬೌಲಿಂಗ್‌ ಬಲದಿಂದ ತ್ರಿಪುರ ಎದುರು ಮೊದಲ ಇನಿಂಗ್ಸ್‌ ಮುನ್ನಡೆಯ ಸನಿಹ ಬಂದು ನಿಂತಿದೆ.

ADVERTISEMENT

ಪಂದ್ಯದ ಎರಡನೇ ದಿನವಾದ ಶನಿವಾರ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 241 ರನ್ ಗಳಿಸಿ ಆಲೌಟ್ ಆಯಿತು. ಆತಿಥೇಯ ತಂಡವು ಇದಕ್ಕುತ್ತರವಾಗಿ 79 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 198 ರನ್ ಗಳಿಸಿತು.

ಆದರೆ, ದೊಡ್ಡ ಅಂತರದ ಮುನ್ನಡೆ ಗಳಿಸುವ ಕರ್ನಾಟಕದ ಆಸೆಗೆ ತ್ರಿಪುರದ ದೇವನಾಥ್ (ಬ್ಯಾಟಿಂಗ್ 57) ಮತ್ತು ಮಣಿಶಂಕರ್ ಮುರಾಸಿಂಗ್ (39 ರನ್) ಅ‌ಡ್ಡಿಯಾದರು. 96 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿದ್ದ ತ್ರಿಪುರ ತಂಡಕ್ಕೆ ಅವರಿಬ್ಬರೂ ಆಸರೆಯಾದರು. 

ಪಂದ್ಯದ ಮೂರನೇ ದಿನವಾದ ಭಾನುವಾರ ಬೆಳಿಗ್ಗೆ ಆದಷ್ಟು ಬೇಗನೆ ಕೊನೆಯ ವಿಕೆಟ್ ಕಬಳಿಸಿದರೆ ಅಲ್ಪ ಅಂತರದ ಮುನ್ನಡೆ ಗಳಿಸಿ, ಎರಡನೇ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತದ ಗುರಿ ನೀಡುವ ಅವಕಾಶವಂತೂ ಮಯಂಕ್ ಬಳಗಕ್ಕೆ ಈಗ ಇದೆ. 

ಏಳನೇ ಕ್ರಮಾಂಕದ ಬ್ಯಾಟರ್ ದೇವನಾಥ್ ಮತ್ತು ಮುರಾಸಿಂಗ್ ಅವರು ಎಂಟನೇ ವಿಕೆಟ್ ಜೊತೆಯಾಟದಲ್ಲಿ 76 ರನ್ ಸೇರಿಸಿದರು. 66ನೇ ಓವರ್‌ನಲ್ಲಿ ಮುರಾಸಿಂಗ್ ಅವರನ್ನು ಔಟ್ ಮಾಡಿದ ಕೌಶಿಕ್  ಜೊತೆಯಾಟ ಮುರಿದರು. ಇದಕ್ಕೂ ಮುನ್ನ ಆರಂಭಿಕ ಬ್ಯಾಟರ್ ಬಿಕ್ರಂ ಘೋಷ್ (44; 114ಎ) ಮುನ್ನ ನಾಯಕ ವೃದ್ಧಿಮಾನ್ ಸಹಾ (28; 67ಎ) ಅವರು ತಂಡದ ಕುಸಿತ ತಡೆಯುವ ಪ್ರಯತ್ನ ಮಾಡಿದ್ದರು. 

ತ್ರಿಪುರದ ಕೊನೆಯ ಬ್ಯಾಟರ್ ಅಭಿಜಿತ್ ಸರ್ಕಾರ್ (ಬ್ಯಾಟಿಂಗ್ 5) ಅವರನ್ನು ಔಟ್ ಮಾಡಲು ದಿನದಾಟದ ಕೊನೆಯವರೆಗೂ ಬೌಲರ್‌ಗಳಿಗೆ ಸಾಧ್ಯವಾಲಿಲ್ಲ. ಸರ್ಕಾರ್ 20 ಎಸೆತಗಳನ್ನು ಎದುರಿಸಿದ್ದು, ಕ್ರೀಸ್‌ನಲ್ಲಿದ್ದಾರೆ.

ಕೌಶಿಕ್ ಆರಂಭಿಕ ಪೆಟ್ಟು: ಈ ಬಾರಿಯ ಟೂರ್ನಿಯ ಎಲ್ಲ ಪಂದ್ಯಗಳಲ್ಲಿಯೂ ವಿಕೆಟ್ ಗಳಿಸುವಲ್ಲಿ ಮುಂಚೂಣಿಯಲ್ಲಿರುವ ಕೌಶಿಕ್  ಇಲ್ಲಿ ತ್ರಿಪುರ ತಂಡಕ್ಕೆ ಆರಂಭಿಕ ಪೆಟ್ಟು ಕೊಟ್ಟರು. ಅವರು ಇನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ವಿಕ್ರಂ ಕುಮಾರ್ ದಾಸ್ ವಿಕೆಟ್ ಕಬಳಿಸಿದರು. ಶ್ರೀಧಾಮ್ ಪಾಲ್ ಮತ್ತು ಅರ್ಧಶತಕದತ್ತ ಹೆಜ್ಜೆಹಾಕಿದ್ದ ಘೋಷ್ ವಿಕೆಟ್‌ಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಇನ್ನೊಂದೆಡೆ ವೈಶಾಖ ವಿಜಯಕುಮಾರ್ ಮತ್ತು ವಿದ್ವತ್ ಕಾವೇರಪ್ಪ ತಲಾ ಎರಡು ವಿಕೆಟ್ ಗಳಿಸಿ ಮಧ್ಯಮ ಕ್ರಮಾಂಕವನ್ನು ದುರ್ಬಲಗೊಳಿಸಿದರು.

ಹೆಚ್ಚದ ಮೊತ್ತ: ಶುಕ್ರವಾರ ದಿನದಾಟದ ಮುಕ್ತಾಯಕ್ಕೆ 78 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 241 ರನ್‌ ಗಳಿಸಿದ್ದ ಕರ್ನಾಟಕ  ತಂಡವು ಎರಡನೇ ದಿನದಾಟದದಲ್ಲಿ ಒಂದೂ ರನ್ ಗಳಿಸಲಿಲ್ಲ.

ಉಳಿದ ಎರಡು ವಿಕೆಟ್‌ಗಳೂ ಪತನಗೊಂಡವು.  ಮುರಾಸಿಂಗ್ ಹಾಕಿದ ಮೊದಲ ಓವರ್‌ನಲ್ಲಿಯೇ ವೈಶಾಖ ಮತ್ತು ಕೌಶಿಕ್ ಔಟಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.