ADVERTISEMENT

ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌; ಮೊದಲ ಚಿನ್ನದತ್ತ ರೀತಿಕಾ

ಪಿಟಿಐ
Published 27 ಮಾರ್ಚ್ 2025, 16:16 IST
Last Updated 27 ಮಾರ್ಚ್ 2025, 16:16 IST
   
ಮಹಿಳೆಯರ 76 ಕೆ.ಜಿ. ವಿಭಾಗದಲ್ಲಿ ರೀತಿಕಾ ಹೂಡ ಫೈನಲ್‌ ಪ್ರವೇಶ | ಭಾರತದ ನಾಲ್ವರು ಮಹಿಳಾ ಪೈಲ್ವಾನರಿಗೆ ಕಂಚಿಗೆ ಸೆಣಸಾಡುವ ಅರ್ಹತೆ | ಮುಸ್ಕಾನ್‌ಗೆ ಕಂಚಿನ ಪದಕದ ಸುತ್ತಿನಲ್ಲಿ ತೊಗ್ಟೊಕ್ ಎದುರಾಳಿ

ಅಮ್ಮಾನ್‌: ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡಿದ ಒಲಿಂಪಿಯನ್ ರೀತಿಕಾ ಹೂಡ, ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ ಮಹಿಳೆಯರ 76 ಕೆ.ಜಿ. ವಿಭಾಗದಲ್ಲಿ ಗುರುವಾರ ಒಂದೂ ಪಾಯಿಂಟ್‌ ಬಿಟ್ಟುಕೊಡದೇ ಫೈನಲ್‌ಗೆ ಲಗ್ಗೆಯಿಟ್ಟರು. ಭಾರತದ ಇನ್ನೂ ನಾಲ್ವರು ಮಹಿಳಾ ಪೈಲ್ವಾನರು ಕಂಚಿನ ಪದಕಕ್ಕೆ ಸೆಣಸಾಡುವ ಅರ್ಹತೆ ಪಡೆದಿದ್ದಾರೆ.

ಚಿನ್ನದ ಪದಕಕ್ಕೆ ಸೆಣಸಾಡುವ ಹಾದಿಯಲ್ಲಿ, 22 ವರ್ಷ ವಯಸ್ಸಿನ ರೀತಿಕಾ ಅವರು ಜಪಾನ್‌ನ ನೊಡೊಕ್‌ ಯಮಾಮೊಟೊ ಮತ್ತು ದಕ್ಷಿಣ ಕೊರಿಯಾದ ಸಿಯೋಯಿಯಾನ್ ಜಿಯೊಂಗ್ ಅವರನ್ನು ಸೋಲಿಸಿದರು.

23 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆದ ಭಾರತದ ಮೊದಲ ಮಹಿಳಾ ರೆಸ್ಲರ್‌ ಎನಿಸಿರುವ ರೀತಿಕಾ, ಜಿಯೊಂಗ್ ವಿರುದ್ಧ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಗೆದ್ದರು. ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಅತಿ ಕಿರಿಯ ಕುಸ್ತಿಪಟು ಆಗಿರುವ ರೀತಿಕಾ ಎರಡನೇ ಪಂದ್ಯದಲ್ಲಿ 6–0 ಅಂತರದಿಂದ ಯಮಾಮೋಟೊ ವಿರುದ್ಧ ಜಯಶಾಲಿಯಾದರು.‌ ಜಪಾನ್‌ನ ಕುಸ್ತಿಪಟು 23 ವರ್ಷದೊ ಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ವಿಜೇತೆಯಾಗಿದ್ದಾರೆ.

ADVERTISEMENT

2023ರ ಏಷ್ಯನ್ ಚಾಂಪಿಯನ್‌
ಷಿಪ್‌ನಲ್ಲಿ ರೀತಿಕಾ ಅವರು ಕಂಚಿನ ಪದಕ ಗೆದ್ದಿದ್ದರು.

55 ಕೆ.ಜಿ. ವಿಭಾಗದಲ್ಲಿ ನಿಶು, ಕ್ವಾಲಿಫಿಕೇಷನ್ ಸೆಣಸಾಟದಲ್ಲಿ ಚೀನಾದ ಯುಕ್ಸುವಾನ್ ಲಿ ಅವರಿಗೆ ಮಣಿದರು. ಆದರೆ ಲಿ ಫೈನಲ್‌ವರೆಗೆ ತಲುಪಿರುವ ಕಾರಣ ನಿಶು ಅವರಿಗೆ ರೆಪೆಷಾಜ್ ಅವಕಾಶ ದೊರೆಯಿತು. ಇದರಲ್ಲಿ ಅವರು ವಿಯೆಟ್ನಾಮಿನ ಮಿ ಟ್ರಾಂಗ್ ಎನ್ಗುಯೆನ್‌ ಅವರನ್ನು ಸೋಲಿಸಿದ್ದು, ಕಂಚಿನ ಪದಕದ ಸುತ್ತಿಗೆ ತಲುಪಿದ್ದು, ಅಲ್ಲಿ ಮಂಗೋಲಿಯಾದ ಒಟ್ಗೊನ್‌ಟುಯಾ ಬಯಾನ್‌ಮುಂಕ್ ಎದುರು ಸೆಣಸಲಿದ್ದಾರೆ.

ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಅಂಕುಶ್‌ ಪಂಘಲ್ ಮೊದಲ ಸುತ್ತಿನಲ್ಲಿ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಜಪಾನ್‌ನ ರೆಮಿನಾ ಯೊಶಿಮೊಟೊ ಅವರಿಗೆ ಸೋತರು. ಆದರೆ ಜಪಾನ್‌ ಕುಸ್ತಿಪಟು ಗಾಯದ ಕಾರಣದಿಂದ ಕೊರಿಯಾದ ಮಿರಾನ್ ಚಿಯೊನ್ ಎದುರು ಮುಂದಿನ ಸೆಣಸಾಟದಲ್ಲಿ ಭಾಗಿಯಾಗಲಿಲ್ಲ. ಹೀಗಾಗಿ ಅಂಕುಶ್ ರೆಪೆಷಾಜ್ ಅವಕಾಶ ಪಡೆದರು.

68 ಕೆ.ಜಿ ವಿಭಾಗದಲ್ಲಿ ಮಾನಸಿ ಲಾಥರ್ ಉತ್ತಮ ಆರಂಭ ಮಾಡಿ ಕೊರಿಯಾದ ಶೆಂಗ್‌ ಫೆಂಗ್ ಕೈ ಅವರನ್ನು ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಮಣಿಸಿದರು. ಜಪಾನ್‌ನ ಅಮಿ ಇಶಿ ಅವರಿಂದ ವಾಕ್‌ ಓವರ್ ಪಡೆದರು. ಮಾನಸಿ, ಸೆಮಿಫೈನಲ್‌ನಲ್ಲಿ 1–10 ರಿಂದ ಚೀನಾದ ಝೆಲು ಲಿ ಅವರಿಗೆ ಸೋತರು. ಈಗ ಕಂಚಿನ ಪದಕಕ್ಕಾಗಿ ಕಜಕಸ್ತಾನದ ಇರಿನಾ ಕಝ್ಯುಲಿನಾ ಅವರನ್ನು
ಎದುರಿಸಲಿದ್ದಾರೆ.

ಮುಸ್ಕಾನ್ (59 ಕೆ.ಜಿ ವಿಭಾಗ), ಮೊದಲ ಪಂದ್ಯದಲ್ಲಿ ಫಿಲಿಪ್ಪೀನ್ಸ್‌ನ ಅರಿಯನ್ ಜಿ. ಕಾರ್ಪಿಯೊ ವಿರುದ್ಧ ಗೆದ್ದರು. ಆದರೆ ಎಂಟರ ಘಟ್ಟದಲ್ಲಿ ಜಪಾನ್‌ನ ಸಕುರಾ ಒನಿಶಿ ಅವರಿಗೆ ಸೋತರು. ಈಗ ಅವರು ಕಂಚಿನ ಪದಕದ ಸೆಣಸಾಟದಲ್ಲಿ ಮಂಗೋಲಿಯಾದ ಅಲ್ಟ್‌ಜಿನ್ ತೊಗ್ಟೊಕ್ ಅವರನ್ನು
ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.