ADVERTISEMENT

ಸ್ಪಿನ್ನರ್‌ಗಳ ಸಾಮರ್ಥ್ಯದ ಮೇಲೆ ವಿಶ್ವಕಪ್‌ ಭವಿಷ್ಯವಿದೆ: ರಿಕಿ ಪಾಂಟಿಂಗ್

ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ

ಪಿಟಿಐ
Published 23 ಮೇ 2019, 14:37 IST
Last Updated 23 ಮೇ 2019, 14:37 IST
ರಿಕಿ ಪಾಂಟಿಂಗ್‌
ರಿಕಿ ಪಾಂಟಿಂಗ್‌   

ಮೆಲ್ಬರ್ನ್‌: ‘ಸ್ಪಿನ್ನರ್‌ಗಳಿಂದ ಮೂಡಿಬರುವ ಸಾಮರ್ಥ್ಯ ಮತ್ತು ಎದುರಾಳಿ ಸ್ಪಿನ್ನರ್‌ಗಳ ಎದುರು ನಮ್ಮ ಬ್ಯಾಟ್ಸ್‌ಮನ್‌ಗಳು ಹೇಗೆ ಆಡುತ್ತಾರೆ ಎನ್ನುವುದರ ಮೇಲೆ ಆಸ್ಟ್ರೇಲಿಯಾ ತಂಡದ ವಿಶ್ವಕಪ್‌ ಗೆಲುವು ನಿರ್ಧಾರಿತವಾಗಲಿದೆ’ ಎಂದು ಹಿರಿಯ ಕ್ರಿಕೆಟಿಗ ರಿಕಿ ಪಾಂಟಿಂಗ್ ನುಡಿದಿದ್ದಾರೆ.

‘ಹಿಂದಿನ ಒಂದು ವರ್ಷದ ಅವಧಿಯಲ್ಲಿ ನಡೆದ ಸರಣಿಗಳನ್ನು ಅವಲೋಕಿಸಿದರೆ ಆ್ಯಡಮ್‌ ಜಂಪಾ ಮತ್ತು ನೇಥನ್‌ ಲಯನ್‌ ಅವರು ಹಲವು ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿರುವುದು ಮನದಟ್ಟಾಗುತ್ತದೆ. ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೂಡಾ ಶ್ರೇಷ್ಠ ಸಾಮರ್ಥ್ಯ ತೋರಿದ್ದಾರೆ. ಇವರು ವಿಶ್ವಕಪ್‌ನಲ್ಲೂ ಮಿಂಚಿದರೆ ಆಸ್ಟ್ರೇಲಿಯಾದ ಪ್ರಶಸ್ತಿಯ ಹಾದಿ ಸುಗಮವಾಗುತ್ತದೆ’ ಎಂದಿದ್ದಾರೆ.

‘ಒಂದು ವರ್ಷದ ಅವಧಿಯಲ್ಲಿ ತಂಡದಲ್ಲಿ ಹಲವು ಬದಲಾವಣೆಗಳಾಗಿವೆ. ಸ್ಪಿನ್ನರ್‌ಗಳ ಎದುರು ಹೇಗೆ ಆಡಬೇಕೆಂಬುದನ್ನು ನಮ್ಮ ಬ್ಯಾಟ್ಸ್‌ಮನ್‌ಗಳು ಕಲಿತಿದ್ದಾರೆ’ ಎಂದು 44 ವರ್ಷ ವಯಸ್ಸಿನ ಪಾಂಟಿಂಗ್ ಹೇಳಿದ್ದಾರೆ.

ADVERTISEMENT

‘ಡೇವಿಡ್‌ ವಾರ್ನರ್‌ ಮತ್ತು ಸ್ಟೀವ್‌ ಸ್ಮಿತ್‌ ಅವರ ಸೇರ್ಪಡೆಯಿಂದ ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ಶಕ್ತಿ ಬಂದಂತಾಗಿದೆ. ಇಬ್ಬರೂ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು. ಈ ಬಾರಿಯ ಐಪಿಎಲ್‌ನಲ್ಲಿ ಉಭಯ ಆಟಗಾರರೂ ಮಿಂಚಿನ ಸಾಮರ್ಥ್ಯ ತೋರಿದ್ದಾರೆ. ವಿಶ್ವಕಪ್‌ನಲ್ಲೂ ಇವರು ರನ್‌ ಮಳೆ ಸುರಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.