ADVERTISEMENT

ಟೆಸ್ಟ್‌ ಕ್ರಿಕೆಟ್‌: ರ‍್ಯಾಂಕಿಂಗ್‌ನಲ್ಲೂ ದಾಖಲೆ ಬರೆದ ‘ಬೇಬಿ ಸಿಟ್ಟರ್‌’

ಏಜೆನ್ಸೀಸ್
Published 8 ಜನವರಿ 2019, 19:28 IST
Last Updated 8 ಜನವರಿ 2019, 19:28 IST
ರಿಷಭ್ ಪಂತ್‌
ರಿಷಭ್ ಪಂತ್‌   

ದುಬೈ: ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ಸ್ಲೆಡ್ಜಿಂಗ್‌ಗೆ ಹಾಸ್ಯ ರಸ ತುಂಬಿ ಗಮನ ಸೆಳೆದಿದ್ದ ಭಾರತದ ವಿಕೆಟ್ ಕೀಪರ್‌ ರಿಷಭ್ ಪಂತ್ ಐಸಿಸಿಯ ನೂತನ ರ‍್ಯಾಂಕಿಂಗ್‌ನಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ.

ಮಂಗಳವಾರ ಬಿಡುಗಡೆಯಾಗಿ ರುವ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ 21 ಸ್ಥಾನ ಗಳ ಏರಿಕೆ ಕಂಡಿರುವ ಅವರು 17ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈ ಮೂಲಕ ಭಾರತದ ವಿಕೆಟ್‌ ಕೀಪರ್ ಒಬ್ಬರ ಗರಿಷ್ಠ ಸಾಧನೆಯನ್ನು ಸಮಗಟ್ಟಿದ್ದಾರೆ.

1973ರಲ್ಲಿ ಫಾರೂಕ್ ಇಂಜಿನಿ ಯರ್‌ 17ನೇ ಸ್ಥಾನ ಗಳಿಸಿದ್ದರು. ಮಹೇಂದ್ರ ಸಿಂಗ್ ಧೋನಿ ಅವರ ಗರಿಷ್ಠ ರ‍್ಯಾಂಕ್‌ 19 ಆಗಿತ್ತು. ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಆಟಗಾರರ ಗೇಲಿಯಾಟಕ್ಕೆ ಪಂತ್‌ ತಿರುಗೇಟು ನೀಡಿದ್ದರು. ಆತಿಥೇಯ ತಂಡದ ನಾಯಕ ಟಿಮ್ ಪೇನ್‌ ‘ನನ್ನ ಮಕ್ಕಳನ್ನು ನೋಡಿಕೊಳ್ಳಲು ಈತ ಸಮರ್ಥ’ ಎಂದು ಹೇಳಿದ್ದರು. ಪ್ರಧಾನಮಂತ್ರಿಗಳ ಭೋಜನ ಕೂಟದಲ್ಲಿ ಪೇನ್ ಮಕ್ಕಳನ್ನು ಮುದ್ದಾಡಿ ಪಂತ್ ಸೇಡು ತೀರಿಸಿದ್ದರು. ಈ ಚಿತ್ರವನ್ನು ಪೇನ್ ಪತ್ನಿ ಇನ್‌ಸ್ಟಾಗ್ರಾಂಗೆ ಹಾಕಿದ್ದರು. ಇದರ ನಂತರ ಪಂತ್ ‘ಬೇಬಿ ಸಿಟ್ಟರ್‌’ ಎಂದೇ ಖ್ಯಾತರಾಗಿದ್ದಾರೆ.

ADVERTISEMENT

ಆಸ್ಟ್ರೇಲಿಯಾ ಪ್ರವಾಸದ ಆರಂಭದಲ್ಲಿ ಪಂತ್ 59ನೇ ಸ್ಥಾನದಲ್ಲಿದ್ದರು. ಆತಿಥೇಯರ ವಿರುದ್ಧ ಅಜೇಯ 159 ರನ್ ಗಳಿಸಿದ ನಂತರ ಅಗ್ರ 20ರ ಒಳಗೆ ಸ್ಥಾನ ಗಳಿಸಿದ್ದರು. ಸರಣಿಯಲ್ಲಿ ಒಟ್ಟು 350 ರನ್‌ ಗಳಿಸಿರುವ ಅವರು 20 ಕ್ಯಾಚ್‌ಗಳನ್ನು ಪಡೆದು ಗಮನ ಸೆಳೆದಿದ್ದರು.

ಕೊಹ್ಲಿ ಸ್ಥಾನ ಭದ್ರ; ಪೂಜಾರಗೆ ಬಡ್ತಿ: ರ‍್ಯಾಂಕಿಂಗ್‌ನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಅವರ ಅಗ್ರ ಸ್ಥಾನಕ್ಕೆ ಧಕ್ಕೆಯಾಗಲಿಲ್ಲ. ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿದ ಚೇತೇಶ್ವರ ಪೂಜಾರ ಒಂದು ಸ್ಥಾನದ ಬಡ್ತಿ ಕಂಡು ಮೂರನೇ ಸ್ಥಾನಕ್ಕೇರಿದ್ದಾರೆ.

ರವೀಂದ್ರ ಜಡೇಜ ಆರು ಸ್ಥಾನಗಳ ಬಡ್ತಿಯೊಂದಿಗೆ 57ನೇ ಸ್ಥಾನಕ್ಕೇರಿದ್ದಾರೆ. ಐದು ಸ್ಥಾನಗಳ ಬಡ್ತಿ ಪಡೆದಿರುವ ಮಯಂಕ್ ಅಗರವಾಲ್‌ 62ನೇ ಸ್ಥಾನದಲ್ಲಿದ್ದಾರೆ. ಸ್ಪಿನ್ನರ್ ಕುಲದೀಪ್ ಯಾದವ್‌ ಏಳು ಸ್ಥಾನಗಳ ಬಡ್ತಿಯೊಂದಿಗೆ ಜೀವನಶ್ರೇಷ್ಠ 45ನೇ ಸ್ಥಾನ ಗಳಿಸಿದ್ದಾರೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಏಕದಿನ ಸರಣಿ: ಟೆಸ್ಟ್ ಹೀರೊ ಬೂಮ್ರಾಗೆ ವಿಶ್ರಾಂತಿ

ನವದೆಹಲಿ: ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಐತಿಹಾಸಿಕ ಜಯ ಗಳಿಸಲು ಪ್ರಮುಖ ಕಾರಣರಾದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆಸ್ಟ್ರೇಲಿಯಾ ಎದುರಿನ ಎದುರಿನ ಸರಣಿ ಮತ್ತು ನ್ಯೂಜಿಲೆಂಡ್ ಏಕದಿನ, ಟ್ವೆಂಟಿ–20 ಸರಣಿಗೆ ಮಂಗಳ ವಾರ ಆಯ್ಕೆ ಮಾಡಿರುವ ತಂಡದಿಂದ ಅವರನ್ನು ಕೈಬಿಡಲಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕು ಪಂದ್ಯಗಳಲ್ಲಿ ಬೂಮ್ರಾ 21 ವಿಕೆಟ್ ಉರುಳಿಸಿದ್ದರು. ಮುಂಬರುವ ವಿಶ್ವಕಪ್‌ ಮತ್ತು ಭಾರತದಲ್ಲಿ ಆಸ್ಟ್ರೇಲಿಯಾ ಎದುರು ನಡೆಯಲಿರುವ ಸರಣಿಯಲ್ಲಿ ಅವರಿಂದ ಉತ್ತಮ ಸಾಧನೆಯನ್ನು ನಿರೀಕ್ಷಿಸಿರುವ ಆಯ್ಕೆ ಸಮಿತಿ ವಿಶ್ರಾಂತಿ ನೀಡಲು ಮುಂದಾಗಿದೆ. ಟೆಸ್ಟ್ ಸರಣಿಯಲ್ಲಿ ನಿರಾಸೆ ಅನುಭವಿಸಿದ ಕರ್ನಾಟಕದ ಕೆ.ಎಲ್‌.ರಾಹುಲ್ ಅವರಿಗೂ ಸ್ಥಾನ ನೀಡಲಾಗಿದೆ.

ಸಿಡ್ನಿಯಲ್ಲಿ ಇದೇ 12ರಂದು ಆಸ್ಟ್ರೇ ಲಿಯಾ ಎದುರಿನ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಮೂರು ಏಕದಿನ ಪಂದ್ಯಗಳ ನಂತರ ನ್ಯೂಜಿಲೆಂಡ್‌ನಲ್ಲಿ ಭಾರತ ಐದು ಏಕದಿನ ಮತ್ತು ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ.

‘ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸದ ನಂತರ ಭಾರತದಲ್ಲಿ ಆಸ್ಟ್ರೇ ಲಿಯಾ ಎದುರಿನ ಸರಣಿ ನಡೆಯಲಿದೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಬೂಮ್ರಾಗೆ ವಿಶ್ರಾಂತಿ ನೀಡಲಾಗಿದೆ’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ಮೊಹಮ್ಮದ್ ಸಿರಾಜ್‌ಗೆ ಅವಕಾಶ:ಏಕದಿನ ಸರಣಿಯಲ್ಲಿ ಬೂಮ್ರಾ ಬದಲಿಗೆ ಮೊಹಮ್ಮದ್‌ ಸಿರಾಜ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಟ್ವೆಂಟಿ–20 ಪಂದ್ಯಗಳಲ್ಲಿ ಬೂಮ್ರಾ ಬದಲಿಗೆ ಸಿದ್ಧಾರ್ಥ್ ಕೌಲ್‌ ಅವರಿಗೆ ಅವಕಾಶ ನೀಡಲಾಗಿದೆ.

ಏಕದಿನ ತಂಡ:ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್.ರಾಹುಲ್‌, ಶಿಖರ್ ಧವನ್‌, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್‌, ಕೇದಾರ್ ಜಾಧವ್‌, ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್‌, ಯಜು ವೇಂದ್ರ ಚಾಹಲ್‌, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್‌, ಮೊಹಮ್ಮದ್ ಸಿರಾಜ್‌, ಖಲೀಲ್ ಅಹಮ್ಮದ್‌, ಮೊಹಮ್ಮದ್ ಶಮಿ.

ಟ್ವೆಂಟಿ–20 ಸರಣಿಗೆ:ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ರಾಹುಲ್‌, ಶಿಖರ್ ಧವನ್‌, ರಿಷಭ್‌ ಪಂತ್‌, ದಿನೇಶ್ ಕಾರ್ತಿಕ್‌, ಕೇದಾರ್ ಜಾಧವ್‌, ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಕುಲದೀಪ್ ಯಾದವ್‌, ಯಜುವೇಂದ್ರ ಚಾಹಲ್‌, ಭುವನೇಶ್ವರ್ ಕುಮಾರ್‌, ಸಿದ್ಧಾರ್ಥ್ ಕೌಲ್‌, ಖಲೀಲ್ ಅಹಮ್ಮದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.