ನಿಯುವೆಜಿನ್: ಅನುಭವಿ ಆಟಗಾರರಾದ ರೋಲೋಫ್ ವ್ಯಾನ್‌ಡೆರ್ ಮೆರ್ವ್ ಮತ್ತು ಕಾಲಿನ್ ಆ್ಯಕರ್‌ಮನ್ ಅವರು ಭಾರತದ ಆತಿಥ್ಯದಲ್ಲಿ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ನೆದರ್ಲೆಂಡ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಗುರುವಾರ 15 ಆಟಗಾರರ ತಂಡವನ್ನು ಪ್ರಕಟಿಸಲಾಗಿದ್ದು, ವಿಕೆಟ್ ಕೀಪರ್ –ಬ್ಯಾಟರ್ ಸ್ಕಾಟ್ ಎಡ್ವರ್ಡ್ಸ್ ತಂಡದ ನೇತೃತ್ವ ವಹಿಸಿದ್ದಾರೆ.
ಕ್ವಾಲಿಫೈಯರ್ ಟೂರ್ನಿಯಲ್ಲಿಆಡಿದ್ದ ತಂಡದಲ್ಲಿ ಮೆರ್ವ್ ಮತ್ತು ಆ್ಯಕರ್‌ಮನ್ ಸ್ಥಾನ ಪಡೆದಿರಲಿಲ್ಲ. ಅಲ್ಲಿ ನೆದರ್ಲೆಂಡ್ಸ್ ತಂಡವು ರನ್ನರ್ ಅಪ್ ಆಗಿತ್ತು.
ಕೋಚ್ ರಿಯಾನ್ ಕುಕ್ ಅವರ ತರಬೇತಿಯಲ್ಲಿರುವ ನೆದರ್ಲೆಂಡ್ಸ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಅದಕ್ಕೂ ಮೊದಲು ಆಸ್ಟ್ರೇಲಿಯಾ (ಸೆ.30) ಮತ್ತು ಭಾರತ (ಅ.3) ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ನೆದರ್ಲೆಂಡ್ಸ್ ತಂಡವು ಐದನೇ ಬಾರಿ ಏಕದಿನ ವಿಶ್ವಕಪ್ ಟೂರ್ನಿ ಆಡುತ್ತಿದೆ. ಆದರೆ, ಈ ಹಿಂದಿನ ಟೂರ್ನಿಗಳಲ್ಲಿ ಗುಂಪು ಹಂತವನ್ನು ದಾಟಲು ತಂಡಕ್ಕೆ ಸಾಧ್ಯವಾಗಿಲ್ಲ.
ತಂಡ ಇಂತಿದೆ: ಸ್ಕಾಟ್ ಎಡ್ವರ್ಡ್ಸ್ (ನಾಯಕ, ವಿಕೆಟ್ ಕೀಪರ್), ಮ್ಯಾಕ್ಸ್ ಒಡೌಡ್, ಬಾಸ್ ಡೆ ಲೀಡ್, ವಿಕ್ರಮ್ ಸಿಂಗ್, ತೇಜ ನಿಡಮನೂರು, ಪೌಲ್ ವ್ಯಾನ್ ಮೀಕೆರೆನ್, ಕಾಲಿನ್ ಆ್ಯಕರ್‌ಮನ್, ರೋಲೋಫ್ ವ್ಯಾನ್ ಡೆರ್ ಮೆರ್ವ್, ಲೋಗನ್ ವಾನ್ ಬೀಕ್, ಆರ್ಯನ್ ದತ್, ರಯಾನ್ ಕ್ಲೇನ್, ವೆಸ್ಲಿ ಬರೆಸಿ, ಸಕೀಬ್ ಜುಲ್ಫಿಕರ್, ಷರೀಜ್ ಅಹ್ಮದ್ ಮತ್ತು ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.