ADVERTISEMENT

ರೋಹಿತ್‌ ಕೊರಳಿಗೆ ದಾಖಲೆಗಳ ಮಾಲೆ

ದಕ್ಷಿಣ ಆಫ್ರಿಕಾ ತಂಡಕ್ಕೆ ಕಠಿಣ ಗುರಿ * ವಿರಾಟ್‌ ಬಳಗದಲ್ಲಿ ಚಿಗುರೊಡೆದ ಜಯದ ಕನಸು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 20:15 IST
Last Updated 5 ಅಕ್ಟೋಬರ್ 2019, 20:15 IST
ಭಾರತದ ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮಾ ಮತ್ತು ಚೇತೇಶ್ವರ್‌ ಪೂಜಾರ (ಎಡ) ಅವರು ರನ್‌ಗಳಿಸಲು ಪ್ರಯತ್ನಿಸಿದರು –ಪಿಟಿಐ ಚಿತ್ರ
ಭಾರತದ ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮಾ ಮತ್ತು ಚೇತೇಶ್ವರ್‌ ಪೂಜಾರ (ಎಡ) ಅವರು ರನ್‌ಗಳಿಸಲು ಪ್ರಯತ್ನಿಸಿದರು –ಪಿಟಿಐ ಚಿತ್ರ   

ವಿಶಾಖಪಟ್ಟಣ: ರೋಹಿತ್ ಶರ್ಮಾ ಅವರು ಆರಂಭಿಕನಾಗಿ ಕಣಕ್ಕಿಳಿದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇಲ್ಲಿ ನಡೆಯುತ್ತಿರುವ ಫ್ರೀಡಂ ಟೆಸ್ಟ್ ಸರಣಿಯ ಮೊದಲ ಪಂದ್ಯದ ನಾಲ್ಕನೇ ದಿನವಾದ ಶನಿವಾರ ರೋಹಿತ್ ಶತಕ (127; 149ಎಸೆತ 10ಬೌಂಡರಿ, 7ಸಿಕ್ಸರ್) ಮತ್ತು ಚೇತೇಶ್ವರ್ ಪೂಜಾರ (81;148ಎ, 13ಬೌ, 2ಸಿ) ಅವರಿಬ್ಬರ ಆಟದ ಬಲದಿಂದ ಪ್ರವಾಸಿ ತಂಡಕ್ಕೆ 394 ರನ್‌ಗಳ ಕಠಿಣ ಗುರಿ ಒಡ್ಡಿತು.

ಶುಕ್ರವಾರದ ದಿನದಾಟ ಮುಗಿದಾಗ ದಕ್ಷಿಣ ಆಫ್ರಿಕಾ ತಂಡವು118 ಓವರ್‌ಗಳಲ್ಲಿ 8ಕ್ಕೆ 385 ರನ್‌ ಗಳಿಸಿತ್ತು.

ADVERTISEMENT

ಶನಿವಾರ ಬೆಳಿಗ್ಗೆ ಸೆನುರನ್ ಮುತ್ತುಸ್ವಾಮಿ (ಔಟಾಗದೆ 33, 108ಎ, 4ಬೌಂ) ಮತ್ತು ಕಗಿಸೊ ರಬಾಡ (15; 17ಎ, 3ಬೌಂ) ಬೌಲರ್‌ಗಳಿಗೆ ಸುಲಭವಾಗಿ ಶರಣಾಗಲಿಲ್ಲ. ತಂಡದ ಮೊತ್ತವನ್ನು 431 ರನ್‌ಗಳವರೆಗೆ ಬೆಳೆಸಿದರು. ಆದರೂ ಭಾರತ ತಂಡವು 71 ರನ್‌ಗಳ ಮುನ್ನಡೆ ಸಾಧಿಸಿತು.

ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿ ಸಿದ್ದ ರೋಹಿತ್ ಎರಡನೇ ಇನಿಂಗ್ಸ್‌ನಲ್ಲಿ ಏಕದಿನ ಕ್ರಿಕೆಟ್‌ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದರು. ಅದರಿಂದಾಗಿ ವೇಗವಾಗಿ ರನ್‌ಗಳು ಗಳಿಕೆಯಾದವು.

ಆದರೆ ದ್ವಿಶತಕ ಬಾರಿಸಿದ್ದ ಕನ್ನಡಿಗ ಮಯಂಕ್ ಅಗರವಾಲ್ ಈ ಇನಿಂಗ್ಸ್‌ನಲ್ಲಿ ಕೇವಲ ಏಳು ರನ್ ಮಾತ್ರ ಗಳಿಸಿದರು. ಕೇಶವ್ ಮಹಾರಾಜ್ ಎಸೆತದ ತಿರುವನ್ನು ಅಂದಾಜಿಸುವಲ್ಲಿ ಎಡವಿದ ಮಯಂಕ್, ಫಾಫ್ ಡುಪ್ಲೆಸಿಗೆ ಕ್ಯಾಚಿತ್ತರು. ಆಗ ರೋಹಿತ್ ಜೊತೆಗೂಡಿದ ಚೇತೇಶ್ವರ್ ಪೂಜಾರ ತಂಡದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿದರು.

ಒಂದೆಡೆ ರೋಹಿತ್ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸುತ್ತಿದ್ದರು. ಅವರು 72 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ನಂತರ ಎದುರಿಸಿದ 61 ಎಸೆತಗಳಲ್ಲಿ ಮತ್ತೆ 50 ರನ್‌ಗಳನ್ನು ಗಳಿಸಿ, ಶತಕದ ಗಡಿ ಮುಟ್ಟಿದರು. ಅದರಲ್ಲಿ ಒಂಬತ್ತು ಬೌಂಡರಿ, ನಾಲ್ಕು ಸಿಕ್ಸರ್‌ಗಳು ಇದ್ದವು. ನಂತರವೂ ತಮ್ಮ ಬೀಸುಗೈ ಆಟ ಮುಂದುವರಿಸಿದರು. ಮತ್ತೆ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು.

ಇನ್ನೊಂದೆಡೆ ಶತಕದತ್ತ ಹೆಜ್ಜೆ ಹಾಕಿದ್ದ ಪೂಜಾರ 51ನೇ ಓವರ್‌ನಲ್ಲಿ ವೆರ್ನಾನ್ ಫಿಲಾಂಡರ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಅವರು ಎರಡನೇ ವಿಕೆಟ್‌ ಜೊತೆಯಾಟದಲ್ಲಿ ರೋಹಿತ್ ಜತೆಗೂಡಿ 169 ರನ್‌ ಸೇರಿಸಿದರು.

ಕ್ರಮಾಂಕದಲ್ಲಿ ಬಡ್ತಿ ಪಡೆದ ರವೀಂದ್ರ ಜಡೇಜ ಮೂರು ಸಿಕ್ಸರ್‌ ಗಳನ್ನು ಸಿಡಿಸಿದರು. ಕೇವಲ 32 ಎಸೆತಗಳಲ್ಲಿ 40 ರನ್ ಗಳಿಸಿದರು. 57ನೇ ಓವರ್‌ನಲ್ಲಿ ಮಹಾರಾಜ್ ಎಸೆತವನ್ನು ಮುನ್ನುಗಿ ಹೊಡೆಯುವ ಯತ್ನದಲ್ಲಿ ರೋಹಿತ್ ಬೀಟ್ ಆದರು. ಕೀಪರ್ ಕ್ವಿಂಟನ್ ಡಿಕಾಕ್ ಶರವೇಗದಲ್ಲಿ ಸ್ಟಂಪಿಂಗ್ ಮಾಡಿ ನಕ್ಕರು. ರೋಹಿತ್ ಮೊದಲ ಇನಿಂಗ್ಸ್‌ನಲ್ಲಿಯೂ ಇದೇ ರೀತಿ ಮಹಾರಾಜ್ ಬೌಲಿಂಗ್‌ನಲ್ಲಿ ಸ್ಟಂಪಿಂಗ್ ಆಗಿದ್ದರು.

ಜಡೇಜ ಔಟಾದ ನಂತರ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ 37 ರನ್‌ಗಳನ್ನು ಸೇರಿಸಿದರು. ನಂತರ ಡಿಕ್ಲೆರ್ ಮಾಡಿಕೊಂಡರು.

ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಸ್ಪಿನ್ನರ್ ರವೀಂದ್ರ ಜಡೇಜ ಆರಂಭದಲ್ಲಿಯೇ ಆಘಾತ ನೀಡಿದರು. ನಾಲ್ಕನೇ ಓವರ್‌ನಲ್ಲಿ ಡೀನ್ ಎಲ್ಗರ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ, ಅಂಪೈರ್ ಔಟ್ ಕೊಡಲಿಲ್ಲ. ಯುಡಿಆರ್‌ಎಸ್‌ ಮೊರೆ ಹೋದ ವಿರಾಟ್ ಕೊಹ್ಲಿ ಬಳಗಕ್ಕೆ ಫಲ ಸಿಕ್ಕಿತು.

ಇಲ್ಲಿಯ ಪಿಚ್‌ನಲ್ಲಿ ಕೆಳಮಟ್ಟದಲ್ಲಿ ಪುಟಿದೆದ್ದು ಮೆಲ್ಲಗೆ ತಿರುವು ಪಡೆಯುತ್ತಿರುವ ಚೆಂಡಿನ ಲಯ ಗುರುತಿಸಿ ಆಡುವುದು ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿದೆ. ಪಂದ್ಯದ ಕೊನೆಯ ದಿನವಾದ ಭಾನುವಾರ ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆಯಿಂದ ಆಡಿದರೆ ಮಾತ್ರ ಸೋಲಿನಿಂದ ತಪ್ಪಿಸಿಕೊಳ್ಳಬಹುದು.

**

ನಾವು ಡಿಕ್ಲೇರ್ ಮಾಡಿ ಕೊಂಡಿದ್ದು ಉತ್ತಮ ನಿರ್ಧಾರ. ಅದು ಹೊಸ ಚೆಂಡು ಪಡೆ ಯುವ ಸಂದರ್ಭವಾಗಿತ್ತು. ನಾವೇ ಬ್ಯಾಟಿಂಗ್ ಮುಂದುವರಿಸಿದ್ದರೆ ಚೆಂಡು ಸ್ವಲ್ಪ ಮೃದುವಾಗುತ್ತಿತ್ತು.
- ಚೇತೇಶ್ವರ್ ಪೂಜಾರ, ಭಾರತದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.