ADVERTISEMENT

ಟಿ20 ವಿಶ್ವಕಪ್: ಭಾರತ ತಂಡದಲ್ಲಿ ಸಂಜುಗೆ ಸಿಗದ ಸ್ಥಾನ; ಅಭಿಮಾನಿಗಳ ಆಕ್ರೋಶ

ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡ ಪ್ರಕಟ: ಆಯ್ಕೆದಾರರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 17:18 IST
Last Updated 13 ಸೆಪ್ಟೆಂಬರ್ 2022, 17:18 IST
ಸಂಜು ಸ್ಯಾಮ್ಸನ್ 
ಸಂಜು ಸ್ಯಾಮ್ಸನ್    

ಬೆಂಗಳೂರು: ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಿರುವ ಭಾರತ ತಂಡದಲ್ಲಿ ವಿಕೆಟ್‌ಕೀಪರ್–ಬ್ಯಾಟರ್‌ ಸಂಜು ಸ್ಯಾಮ್ಸನ್ ಅವರಿಗೆ ಸ್ಥಾನ ನೀಡದಿರುವುದು ಅಭಿಮಾನಿಗಳ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಸೋಮವಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ರಾಷ್ಟ್ರೀಯ ಆಯ್ಕೆ ಸಮಿತಿಯು ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ತಂಡವನ್ನು ಪ್ರಕಟಿಸಿತ್ತು. ಅದರಲ್ಲಿ ಇಬ್ಬರು ವಿಕೆಟ್‌ಕೀಪರ್‌ಗಳಾದ ರಿಷಬ್ ಪಂತ್ ಹಾಗೂ ಅನುಭವಿ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡಲಾಗಿದೆ. ಆದರೆ ಕೇರಳದ ಸಂಜು ಅವರನ್ನು ಪರಿಗಣಿಸಿಲ್ಲ.

ಹೋದ ತಿಂಗಳು ನಡೆದಿದ್ದ ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಅವರು ಉತ್ತಮವಾಗಿ ಆಡಿದ್ದರು. ಬ್ಯಾಟಿಂಗ್‌ನಲ್ಲಿ ಮತ್ತು ಕೀಪಿಂಗ್‌ನಲ್ಲಿ ಮಿಂಚಿದ್ದರು. ಇಂಡಿಯನ್‌ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿಯೂ ಅವರ ನಾಯಕತ್ವದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಕಳೆದ ಆವೃತ್ತಿಯಲ್ಲಿ ರನ್ನರ್ಸ್ ಅಪ್ ಆಗಿತ್ತು.

ADVERTISEMENT

‘ಇದು ನಾಚಿಕೆಗೇಡು’ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

‘ಟಿ20 ವಿಕೆಟ್‌ಕೀಪಿಂಗ್‌ ಮತ್ತು ಫೀಲ್ಡಿಂಗ್‌ನಲ್ಲಿ ಸಂಜುಗೆ ವಿಶೇಷ ಪರಿಣತಿ ಇದೆ. ಬೌಂಡರಿಯತ್ತ ಸಾಗುವ ಚೆಂಡುಗಳನ್ನು ತಡೆಯುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಫಿಟ್ ಆಗಿದ್ದಾರೆ. ತಣ್ಣನೆಯ ಸ್ವಭಾವದ ಸಂಜು ದೊಡ್ಡ ಹೊಡೆತಗಳನ್ನು ಲೀಲಾಜಾಲವಾಗಿ ಆಡಬಲ್ಲರು. ಇದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಆಯ್ಕೆದಾರರು..’ಎಂದು ಅಭಿಷೇಕ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಮತ್ತೂ ಕೆಲವರು ‘ಸಂಜು ಸ್ಥಾನ ಕೊಡಬೇಕಾದರೆ ರಿಷಭ್ ಪಂತ್ ಅವರನ್ನು ಕೈಬಿಡಬೇಕೆ? ಆಸ್ಟ್ರೇಲಿಯಾದಲ್ಲಿ ರಿಷಭ್ ಉತ್ತಮ ಸಾಧನೆ ಮಾಡಿರುವ ಆಟಗಾರ. ಇನ್ನು ಡಿ.ಕೆ. (ದಿನೇಶ್ ಕಾರ್ತಿಕ್) ಕಳೆದ ಹಲವು ವರ್ಷಗಳಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ ಇತ್ತೀಚೆಗೆ ಅವರು ಅಮೋಘ ಲಯದಲ್ಲಿದ್ದಾರೆ. ಅನುಭವಿಯೂ ಹೌದು. ಆದ್ದರಿಂದ ಅವರನ್ನು ಕೈಬಿಡುವಂತಿಲ್ಲ. ಹಾಗಿದ್ದರೆ ಸಂಜುಗಾಗಿ ಯಾರನ್ನು ಬಿಡಬೇಕಿತ್ತು’ ಎಂಬ ವಾದವನ್ನೂ ಕೆಲವರು ಮಾಡಿದ್ದಾರೆ.

ವೇಗಿ ಮೊಹಮ್ಮದ್ ಶಮಿ ಅವರನ್ನು ಕೈಬಿಟ್ಟಿರುವ ಕುರಿತೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ವಿಕ್ಷಕ ವಿವರಣೆಕಾರ ಹರ್ಷ ಭೋಗ್ಲೆ ಕೂಡ ಒಬ್ಬರು.

ಪಟ್ಟಿ

ಮಾದರಿ ಪಂದ್ಯ ರನ್ ಶ್ರೇಷ್ಠ ಸ್ಟ್ರೈಕ್‌ರೇಟ್ ಶತಕ ಅರ್ಧಶತಕ
ಟಿ20 16 296 77 135.16 - 1
ಐಪಿಎಲ್ 138 3526 119 135.72 3 17

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.