ADVERTISEMENT

ರಾಜ್ಯದ ಇಬ್ಬರು ಆಟಗಾರರು ಆಯ್ಕೆ

ಅಂಗವಿಕಲರ ವಿಶ್ವಕಪ್‌ ಕ್ರಿಕೆಟ್‌: ಶಿವಾನಂದ ತಂಡದ ಮ್ಯಾನೇಜರ್‌

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 18:40 IST
Last Updated 16 ಜುಲೈ 2019, 18:40 IST
ನರೇಂದ್ರ ಮಂಗೋರೆ
ನರೇಂದ್ರ ಮಂಗೋರೆ   

ಹುಬ್ಬಳ್ಳಿ: ಇಂಗ್ಲೆಂಡ್‌ ಹಾಗೂ ವೇಲ್ಸ್ ಕ್ರಿಕೆಟ್‌ ಮಂಡಳಿ ಆತಿಥ್ಯ ವಹಿಸಿರುವ ಅಂಗವಿಕಲರ ಚೊಚ್ಚಲ ಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಇಬ್ಬರು ಸ್ಥಾನ ಪಡೆದಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ನರೇಂದ್ರ ಮಂಗೋರೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯ ಜಿತೇಂದ್ರ ವಡ್ಡಿ ಸ್ಥಾನ ಪಡೆದವರು. ಅಂಗವಿಕಲರ ಕ್ರಿಕೆಟ್‌ ಸಂಸ್ಥೆಯ ದಕ್ಷಿಣ ವಲಯದ ಪ್ರತಿನಿಧಿ ಹುಬ್ಬಳ್ಳಿಯ ಶಿವಾನಂದ ಗುಂಜಾಳ‌ ಭಾರತ ತಂಡದ ಲಾಜಿಸ್ಟಿಕ್‌ ಮ್ಯಾನೇಜರ್ ಆಗಿದ್ದಾರೆ.

ಆಲ್‌ರೌಂಡರ್‌ ನರೇಂದ್ರ 2018ರಲ್ಲಿ ನಡೆದಿದ್ದ ಅಫ್ಗಾನಿಸ್ತಾನ ಎದುರಿನ ಸರಣಿಯಲ್ಲಿ ಸರಣಿಶ್ರೇಷ್ಠ ಗೌರವ ಪಡೆದಿದ್ದರು. ಜಿತೇಂದ್ರ ಕಾಲೇಜು ಹಂತದಲ್ಲಿದ್ದಾಗ ಶ್ರೀಲಂಕಾ ಮತ್ತು ಮಲೇಷ್ಯಾದಲ್ಲಿ ಟೂರ್ನಿಗಳನ್ನು ಆಡಿದ್ದರು. ಅವರಿಗೆ ಮೊದಲ ಬಾರಿಗೆ ಭಾರತ ತಂಡದಲ್ಲಿ ಅವಕಾಶ ಲಭಿಸಿದೆ.

ADVERTISEMENT

ಆಗಸ್ಟ್‌ 3ರಿಂದ 13ರ ವರೆಗೆ ಟೂರ್ನಿ ನಡೆಯಲಿದ್ದು ಭಾರತ, ಇಂಗ್ಲೆಂಡ್, ಅಫ್ಗಾನಿಸ್ತಾನ, ಬಾಂಗ್ಲಾದೇಶ, ಜಿಂಬಾಬ್ವೆ ಮತ್ತು ಪಾಕಿಸ್ತಾನ ತಂಡಗಳು ಪಾಲ್ಗೊಳ್ಳಲಿವೆ. ಆಟಗಾರರು ಜುಲೈ 19ರಿಂದ 23ರ ತನಕ ಮಹಾರಾಷ್ಟ್ರದಲ್ಲಿ ಅಭ್ಯಾಸ ನಡೆಸಲಿದ್ದಾರೆ.

‘ಭಾರತದಲ್ಲಿ ನಾಲ್ಕು ಅಂಗವಿಕಲರ ಕ್ರಿಕೆಟ್‌ ಸಂಸ್ಥೆಗಳಿದ್ದವು. ಇದೇ ವರ್ಷದ ಮಾರ್ಚ್‌ನಲ್ಲಿ ದೆಹಲಿ, ಆಗ್ರಾ ಮತ್ತು ಕೋಲ್ಕತ್ತದ ಸಂಸ್ಥೆಗಳು, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಅಜಿತ್‌ ವಾಡೇಕರ್‌ ಅವರು 30 ವರ್ಷಗಳ ಹಿಂದೆ ಮುಂಬೈನಲ್ಲಿ ಆರಂಭಿಸಿದ್ದ ಅಖಿಲ ಭಾರತ ಅಂಗವಿಕಲರ ಕ್ರಿಕೆಟ್‌ ಸಂಸ್ಥೆ ಜೊತೆ ಲೀನವಾದವು. ಆದ್ದರಿಂದ ವಿಶ್ವಕಪ್‌ನಲ್ಲಿ ಆಡಲು ಅವಕಾಶ ಸಿಕ್ಕಿದೆ. ’ ಎಂದು ಗುಂಜಾಳ ಹೇಳಿದರು.

***

ಭಾರತ ತಂಡದಲ್ಲಿ ಆಡಬೇಕೆನ್ನುವ ಕನಸು ಈಗ ನನಸಾಗಿದೆ. ವಿಶ್ವಕಪ್‌ ತಂಡದಲ್ಲಿ ಸ್ಥಾನ ಸಿಕ್ಕಿದ್ದಕ್ಕೆ ಹೆಮ್ಮೆಯೆನಿಸುತ್ತಿದೆ
ಜಿತೇಂದ್ರ ವಡ್ಡಿ, ಭಾರತ ತಂಡದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.