ADVERTISEMENT

ಬಿಸಿಸಿಐ ವಿಶೇಷ ಸಭೆ ಇಂದು

ಪಿಟಿಐ
Published 11 ಜನವರಿ 2025, 22:59 IST
Last Updated 11 ಜನವರಿ 2025, 22:59 IST
ಜಯ್ ಶಾ
ಜಯ್ ಶಾ   

ಮುಂಬೈ: ದೇವಜೀತ್ ಸೈಕಿಯಾ ಮತ್ತು ಪ್ರಭತೇಜ್ ಸಿಂಗ್ ಭಾಟಿಯಾ ಅವರನ್ನು ಕ್ರಮವಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿ ಭಾನುವಾರ ನಡೆಯುವ ಸರ್ವಸದಸ್ಯಸ ವಿಶೇಷ ಸಭೆಯಲ್ಲಿ ಘೋಷಿಸಲಾಗುವುದು. 

ಕಳೆದ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸೈಕಿಯಾ ಮತ್ತು ಭಾಟಿಯಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಕಳೆದ ಡಿಸೆಂಬರ್ 1ರಂದು ಜಯ್ ಶಾ ಅವರು ಐಸಿಸಿಗೆ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅದರಿಂದಾಗಿ ಕಾರ್ಯದರ್ಶಿ ಹುದ್ದೆ ತೆರವಾಗಿತ್ತು.  ಈ ಹಿಂದೆ ಖಜಾಂಚಿಯಾಗಿದ್ದ ಆಶಿಶ್ ಶೆಲಾರ್ ಅವರು ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿದ್ದರು. 

ಜಯ್‌ ಶಾಗೆ ಸನ್ಮಾನ

ಇದೇ ಸಭೆಯಲ್ಲಿ ಐಸಿಸಿ ಚೇರಮನ್ ಜಯ್ ಶಾ ಅವರನ್ನು ಸನ್ಮಾನಿಸಲಾಗುವುದು. ಅವರು ಐಸಿಸಿಯ ಮುಖ್ಯಸ್ಥರ ಸ್ಥಾನಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿಯಾಗಿದ್ದಾರೆ. 

ADVERTISEMENT

ಕೋಚ್ ಗಂಭೀರ್‌ ಜೊತೆ ಚರ್ಚೆ

ಈಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡವು 1–3ರಿಂದ ಸೋತಿತ್ತು.  ಈ ಕುರಿತು ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರಕರ್ ಅವರೊಂದಿಗೆ ಬಿಸಿಸಿಐ ಪದಾಧಿಕಾರಿಗಳೂ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ. 

ಸರಣಿ ಸೋಲಿಗೆ ಕಾರಣಗಳು, ತಂಡದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು  ವಿರಾಟ್ ಕೊಹ್ಲಿ ಅ ವರ ವೈಫಲ್ಯ ಕುರಿತು ವರದಿ ಪಡೆಯುವ ಸಾಧ್ಯತೆ ಇದೆ. ಇದರೊಂದಿಗೆ ಮುಂಬರುವ  ಐಸಿಸಿ ಚಾಂಪಿಯನ್ಸ್ ಟ್ರೋಫಿ, ಸರಣಿಗಳು ಮತ್ತು ಟೂರ್ನಿಗಳ ಬಗ್ಗೆಯೂ ಮಾತನಾಡಲಿದ್ದಾರೆ ಎನ್ನಲಾಗಿದೆ.

ಯುಎಇಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುವ ಭಾರತ ತಂಡದ ಆಯ್ಕೆ ಕುರಿತು ಚಿಂತನೆ ನಡೆಸಬಹುದು ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.