ADVERTISEMENT

ಧೋನಿ ವಿಶ್ವಾಸಕ್ಕೆ ಅಭಾರಿ: ವ್ಯಾಟ್ಸನ್‌

ಬೇರೆ ಯಾವುದೇ ತಂಡವಾದರೂ ಹೊರಗೆ ಕಳುಹಿಸುತ್ತಿತ್ತು ಎಂದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 19:22 IST
Last Updated 24 ಏಪ್ರಿಲ್ 2019, 19:22 IST
ಶೇನ್‌ ವ್ಯಾಟ್ಸನ್
ಶೇನ್‌ ವ್ಯಾಟ್ಸನ್   

ಚೆನ್ನೈ (ಪಿಟಿಐ): ‘ಸತತ ವೈಫಲ್ಯ ಅನುಭವಿಸುತ್ತಿದ್ದರೂ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಕೋಚ್ ಸ್ಟೀಫನ್ ಫ್ಲೆಮಿಂಗ್‌ ನನ್ನ ಮೇಲೆ ಇರಿಸಿದ ವಿಶ್ವಾಸಕ್ಕೆ ಅಭಾರಿ’ ಎಂದು ಸ್ಫೋಟಕ ಬ್ಯಾಟ್ಸ್‌ಮನ್ ಶೇನ್ ವ್ಯಾಟ್ಸನ್‌ ತಿಳಿಸಿದರು.

ಮಂಗಳವಾರ ಇಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಮಿಂಚಿದ ವ್ಯಾಟ್ಸನ್‌ ಅವರು ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಆರು ವಿಕೆಟ್‌ಗಳ ಜಯ ಗಳಿಸಿಕೊಟ್ಟಿದ್ದರು.

176 ರನ್‌ಗಳ ಗುರಿ ಬೆನ್ನತ್ತಿದ ಸೂಪರ್ ಕಿಂಗ್ಸ್ ಮೂರು ರನ್ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಫಾಫ್ ಡು ಪ್ಲೆಸಿ ವಿಕೆಟ್ ಕಳೆದುಕೊಂಡಿತ್ತು. ನಂತರ ವ್ಯಾಟ್ಸನ್ (96; 53 ಎಸೆತ, 6 ಸಿಕ್ಸರ್‌, 9 ಬೌಂಡರಿ) ಮತ್ತು ಸುರೇಶ್ ರೈನಾ 77 ರನ್‌ಗಳ ಜೊತೆಯಾಟ ಆಡಿದ್ದರು. ರೈನಾ ಔಟಾದ ನಂತರ ಅಂಬಟಿ ರಾಯುಡು ಜೊತೆಗೂಡಿ ವ್ಯಾಟ್ಸನ್‌ 80 ರನ್‌ಗಳನ್ನು ಸೇರಿಸಿದ್ದರು.

ADVERTISEMENT

‘ಧೋನಿ ಮತ್ತು ಫ್ಲೆಮಿಂಗ್ ಅವರ ಬಗ್ಗೆ ಹೆಚ್ಚೇನೂ ಹೇಳಲಾರೆ. ನಾನು ಈ ಹಿಂದೆ ಆಡಿದ್ದ ತಂಡದಲ್ಲಿ ಹೀಗೆ ಸತತ ವೈಫಲ್ಯ ಅನುಭವಿಸಿದ್ದರೆ ಬೆಂಚ್ ಕಾಯಿಸುತ್ತಿದ್ದರು. ಆದರೆ ಧೋನಿ ಮತ್ತು ಫ್ಲೆಮಿಂಗ್ ಹಾಗೆ ಮಾಡಲಿಲ್ಲ. ಎಂದಾದರೂ ಒಂದು ದಿನ ನಾನು ಚೆನ್ನಾಗಿ ಬ್ಯಾಟಿಂಗ್ ಮಾಡಬಲ್ಲೆ ಎಂಬುದು ಅವರುಗೆ ತಿಳಿದಿತ್ತು’ ಎಂದು ವ್ಯಾಟ್ಸನ್ ನುಡಿದರು.

‘ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡಿ ನೇರವಾಗಿ ಇಲ್ಲಿಗೆ ಬಂದಿದ್ದೆ. ಹೀಗಾಗಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದೆ. ಆದರೆ ಇಲ್ಲಿಗೆ ಬಂದ ನಂತರ ನಿರೀಕ್ಷೆಗೆ ತಕ್ಕಂತೆ ಆಡಲು ಆಗಲಿಲ್ಲ. ಸನ್‌ರೈಸರ್ಸ್ ಎದುರಿನ ಪಂದ್ಯದಲ್ಲಿ ಅದೃಷ್ಟವೂ ಕೈ ಹಿಡಿದಿತ್ತು. ಆರಂಭದ ಕೆಲವು ಓವರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಕಾಡಿದರು. ಅದೃಷ್ಟದಿಂದಾಗಿ ಔಟಾಗಲಿಲ್ಲ.

ವಾರ್ನರ್ ಬಗ್ಗೆ ಮೆಚ್ಚುಗೆ: ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್ ಬಗ್ಗೆ ಮಾತನಾಡಿದ ವ್ಯಾಟ್ಸನ್‌ ‘ಅವರೊಬ್ಬ ವಿಶ್ವ ದರ್ಜೆಯ ಆಟಗಾರ. ಕೆಲವು ತಿಂಗಳಿಂದ ಅವರ ಬ್ಯಾಟ್‌ನಿಂದ ರನ್ ಬರುತ್ತಿರಲಿಲ್ಲ. ಈಗ ಲಯ ಕಂಡುಕೊಂಡಿರುವುದು ಸಂತಸದ ವಿಷಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.