ADVERTISEMENT

ಸೌರಾಷ್ಟ್ರ ಎದುರಿನ ಪಂದ್ಯಕ್ಕೆ ಶ್ರೇಯಸ್ ನಾಯಕ

ರಣಜಿ: ಕರ್ನಾಟಕ ತಂಡಕ್ಕೆ ಮರಳಿದ ಸಿದ್ಧಾರ್ಥ್, ಪವನ್; ಕರುಣ್‌ಗೆ ‘ಮದುವೆ ರಜೆ’

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 20:00 IST
Last Updated 7 ಜನವರಿ 2020, 20:00 IST
ಕೆ.ವಿ. ಸಿದ್ಧಾರ್ಥ್ ಮತ್ತು ಆರ್. ಸಮರ್ಥ್   –ಪ್ರಜಾವಾಣಿ ಸಂಗ್ರಹ
ಕೆ.ವಿ. ಸಿದ್ಧಾರ್ಥ್ ಮತ್ತು ಆರ್. ಸಮರ್ಥ್   –ಪ್ರಜಾವಾಣಿ ಸಂಗ್ರಹ   

ಬೆಂಗಳೂರು: ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರು ಇದೇ 11ರಿಂದ 14ರವರೆಗೆ ನಡೆಯಲಿರುವ ಸೌರಾಷ್ಟ್ರ ಎದುರಿನ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕತ್ವ ವಹಿಸಲಿದ್ದಾರೆ. ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿರುವ ಬ್ಯಾಟ್ಸ್‌ಮನ್‌ಗಳಾದ ಕೆ.ವಿ. ಸಿದ್ಧಾರ್ಥ್ ಮತ್ತು ಪವನ್ ದೇಶಪಾಂಡೆ ಬಳಗಕ್ಕೆ ಮರಳಿದ್ದಾರೆ.

‘ಮದುವೆ ರಜೆ’ ಪಡೆದಿರುವ ಕರುಣ್ ನಾಯರ್ ಅವರ ಬದಲಿಗೆ ಶ್ರೇಯಸ್ ತಂಡವನ್ನು ಮುನ್ನಡೆಸಲಿದ್ದಾರೆ. ಮುಂಬೈ ಎದುರಿನ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದ ಅಭಿಷೇಕ್ ರೆಡ್ಡಿ ಅವರನ್ನು ಕೈಬಿಡಲಾಗಿದೆ.

2018–19ರ ಋತುವಿನಲ್ಲಿ ರಾಜ್ಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ಕೃಷ್ಣಮೂರ್ತಿ ವೆಂಕಟೇಶ್ ಸಿದ್ಧಾರ್ಥ್ ಹತ್ತು ಪಂದ್ಯಗಳಿಂದ 728 ರನ್‌ ಗಳಿಸಿದ್ದರು. ಆ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ್ದ ಕರ್ನಾಟಕದ ಬ್ಯಾಟ್ಸ್‌ಮನ್‌ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹೋದ ಸೆಪ್ಟೆಂಬರ್‌ನಲ್ಲಿ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡುವಾಗ ಗಾಯಗೊಂಡಿದ್ದ ಅವರು ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಅದರ ನಂತರ ದೀರ್ಘ ವಿಶ್ರಾಂತಿ ಪಡೆದಿದ್ದ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ಈ ಬಾರಿ ರಣಜಿ ಟೂರ್ನಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಆಡಿರಲಿಲ್ಲ. ಎಡಗೈ ಆಲ್‌ರೌಂಡರ್ ಪವನ್ ದೇಶಪಾಂಡೆ ದಿಂಡಿಗಲ್‌ನಲ್ಲಿ ತಮಿಳುನಾಡು ಎದುರು ನಡೆದಿದ್ದ ರಣಜಿ ಪಂದ್ಯದಲ್ಲಿ ಅರ್ಧಶತಕ ಹೊಡೆದಿದ್ದರು. ಇಬ್ಬರೂ ತಂಡಕ್ಕೆ ಮರಳಿರುವುದರಿಂದ ಬ್ಯಾಟಿಂಗ್ ವಿಭಾಗವು ಬಲಗೊಂಡಿದೆ.

ADVERTISEMENT

ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಇನ್ನೂ ವಿಶ್ರಾಂತಿಯಲ್ಲಿದ್ದು ಈ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಕರ್ನಾಟಕ ತಂಡವು ಅಡಿರುವ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿದೆ. ಎರಡು ಡ್ರಾ ಆಗಿವೆ.

ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಪ್ರಕಟಿಸಿರುವ ತಂಡ ಇಂತಿದೆ

ಶ್ರೇಯಸ್ ಗೋಪಾಲ್ (ನಾಯಕ), ದೇವದತ್ತ ಪಡಿಕ್ಕಲ್, ಡೇಗಾ ನಿಶ್ಚಲ್, ಆರ್. ಸಮರ್ಥ್, ಕೆ.ವಿ. ಸಿದ್ಧಾರ್ಥ್, ಬಿ.ಆರ್. ಶರತ್, ರೋಹನ್ ಕದಂ, ಪವನ್ ದೇಶಪಾಂಡೆ, ಜೆ. ಸುಚಿತ್, ಮಿಥುನ್ ಅಭಿಮನ್ಯು, ವಿ. ಕೌಶಿಕ್, ಪ್ರತೀಕ್ ಜೈನ್, ರೋನಿತ್ ಮೋರೆ, ಶರತ್ ಶ್ರೀನಿವಾಸ್, ಪ್ರವೀಣ ದುಬೆ. ಯರೆ ಕೆ ಗೌಡ (ಕೋಚ್), ಎಸ್. ಅರವಿಂದ್ (ಬೌಲಿಂಗ್ ಕೋಚ್), ಶಬರೀಶ್ ಮೋಹನ್ (ಫೀಲ್ಡಿಂಗ್ ಕೋಚ್), ಅನುತೋಷ್ ಪೋಳ (ಮ್ಯಾನೇಜರ್), ರಕ್ಷಿತ್ (ಸ್ಟ್ರೆಂಥ್–ಕಂಡಿಷನಿಂಗ್), ಜಾಬ ಪ್ರಭು (ಫಿಸಿಯೊ), ವಿನೋದ್ (ವಿಡಿಯೊ ವಿಶ್ಲೇಷಕ), ಎ. ರಮೇಶ್ ರಾವ್ (ಲಾಜಿಸ್ಟಿಕ್ಸ್ ಮ್ಯಾನೇಜರ್), ಸಿ.ಎಂ. ಸೋಮಸುಂದರ್ (ಮಸಾಜ್ ಥೆರಪಿಸ್ಟ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.