ADVERTISEMENT

ಐಸಿಸಿ ತಿಂಗಳ ಪ್ರಶಸ್ತಿ ರೇಸ್‌ನಲ್ಲಿ ಶ್ರೇಯಸ್‌, ರಚಿನ್‌

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 14:40 IST
Last Updated 8 ಏಪ್ರಿಲ್ 2025, 14:40 IST
ಶ್ರೇಯಸ್‌ ಅಯ್ಯರ್‌
ಶ್ರೇಯಸ್‌ ಅಯ್ಯರ್‌   

ದುಬೈ: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ಸೇರಿದಂತೆ ನ್ಯೂಜಿಲೆಂಡ್‌ನ ರಚಿನ್‌ ರವೀಂದ್ರ ಮತ್ತು ಜೇಕಬ್ ಡಫಿ ಅವರನ್ನು ಐಸಿಸಿ ಪುರುಷರ ಮಾರ್ಚ್‌ ತಿಂಗಳ ಆಟಗಾರರ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

30 ವರ್ಷ ವಯಸ್ಸಿನ ಶ್ರೇಯಸ್‌ ಅವರು ಈಚೆಗೆ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಐದು ಪಂದ್ಯಗಳಲ್ಲಿ 48.60 ಸರಾಸರಿಯಲ್ಲಿ 243 ರನ್ ಗಳಿಸಿದ್ದರು. ಅದರಲ್ಲಿ ಎರಡು ಅರ್ಧಶತಕಗಳು ಸೇರಿದ್ದವು. ಭಾರತ ತಂಡ ಪ್ರಶಸ್ತಿ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಬಲಗೈ ಬ್ಯಾಟರ್ ಶ್ರೇಯಸ್‌ ಅವರು ಮಾರ್ಚ್‌ನಲ್ಲಿ ಆಡಿದ ಮೂರು ಏಕದಿನ ಪಂದ್ಯಗಳಲ್ಲಿ 172 ರನ್ ಕಲೆ ಹಾಕಿದರು. 77.47ರ ಸ್ಟ್ರೈಕ್ ರೇಟ್‌ನೊಂದಿಗೆ 57.33ರ ಸರಾಸರಿಯಲ್ಲಿ ಟೂರ್ನಿಯಲ್ಲಿ ಭಾರತದ ಪರ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದ್ದರು.

ADVERTISEMENT

25 ವರ್ಷ ವಯಸ್ಸಿನ ರಚಿನ್ ಅವರು ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿ ಸರಣಿಯ ಆಟಗಾರ ಗೌರವಕ್ಕೆ ಪಾತ್ರವಾಗಿದ್ದರು. ಮಾರ್ಚ್‌ನಲ್ಲಿ ಆಡಿದ ಮೂರು ಏಕದಿನ ಪಂದ್ಯಗಳಲ್ಲಿ 50.33ರ ಸರಾಸರಿಯಲ್ಲಿ 151 ರನ್‌ ಗಳಿಸುವ ಜೊತೆಗೆ ಮೂರು ವಿಕೆಟ್‌ ಪಡೆದಿದ್ದರು. 

ವೇಗಿ ಜೇಕಬ್‌ ಅವರು ತವರಿನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ 8.38 ಸರಾಸರಿಯಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದರು. ಕಿವೀಸ್‌ ಈ ಸರಣಿಯನ್ನು 4–1ರಿಂದ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.