ADVERTISEMENT

ನಾಲ್ಕೇ ದಿನಗಳಲ್ಲಿ ಇಂಗ್ಲೆಂಡ್‌ಗೆ ಮಣಿದ ಶ್ರೀಲಂಕಾ

ಏಜೆನ್ಸೀಸ್
Published 25 ಜನವರಿ 2021, 16:20 IST
Last Updated 25 ಜನವರಿ 2021, 16:20 IST
ಡಾಮ್ ಸಿಬ್ಲಿ ಬ್ಯಾಟಿಂಗ್ ವೈಖರಿ –ಎಎಫ್‌ಪಿ ಚಿತ್ರ
ಡಾಮ್ ಸಿಬ್ಲಿ ಬ್ಯಾಟಿಂಗ್ ವೈಖರಿ –ಎಎಫ್‌ಪಿ ಚಿತ್ರ   

ಗಾಲ್‌: ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಗಳಿಸಿದರೂ ಎರಡನೇ ಇನಿಂಗ್ಸ್‌ನಲ್ಲಿ ಅನಿರೀಕ್ಷಿತ ಕುಸಿತ ಕಂಡ ಶ್ರೀಲಂಕಾ ತಂಡ ಇಂಗ್ಲೆಂಡ್ ಎದುರಿನ ಎರಡನೇ ಮತ್ತು ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಸೋತಿತು. ನಾಲ್ಕೇ ದಿನದಲ್ಲಿ ಪಂದ್ಯವನ್ನು ಮುಗಿಸಿದ ಇಂಗ್ಲೆಂಡ್‌ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತು.

ಮೊದಲ ಇನಿಂಗ್ಸ್‌ನಲ್ಲಿ 381 ರನ್ ಗಳಿಸಿದ್ದ ಶ್ರೀಲಂಕಾ ಎದುರಾಳಿಗಳನ್ನು 344 ರನ್‌ಗಳಿಗೆ ನಿಯಂತ್ರಿಸಿತ್ತು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 126 ರನ್‌ಗಳಿಗೆ ಪತನಗೊಂಡಿತು. ಹೀಗಾಗಿ ಇಂಗ್ಲೆಂಡ್‌ಗೆ 164 ರನ್‌ಗಳ ಸುಲಭ ಗೆಲುವಿನ ಗುರಿ ಲಭಿಸಿತು. 89 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಡಾಮ್ ಸಿಬ್ಲಿ (56; 144 ಎಸೆತ, 2 ಬೌಂಡರಿ) ಮತ್ತು ಜೋಸ್ ಬಟ್ಲರ್ (46; 48 ಎ, 5 ಬೌಂ) ಆಸೆಯಾದರು. ಮುರಿಯದ ಐದನೇ ವಿಕೆಟ್‌ಗೆ 75 ರನ್‌ ಸೇರಿಸಿ ಅವರು ಸುಲಭ ಜಯ ತಂದುಕೊಟ್ಟರು.

ಮೊದಲ ಇನಿಂಗ್ಸ್‌ನಲ್ಲಿ ಮಿಂಚಿದ್ದ ಎಡಗೈ ಸ್ಪಿನ್ನರ್ ಲಸಿತ್ ಎಂಬುಲ್ದೇನಿಯಾ ಆರಂಭದಲ್ಲಿ ಮೂರು ವಿಕೆಟ್ ಕಬಳಿಸಿ ಶ್ರೀಲಂಕಾ ತಂಡದಲ್ಲಿ ಭರವಸೆ ಮೂಡಿಸಿದರು. ಆದರೆ ಪಟ್ಟು ಬಿಡದ ಇಂಗ್ಲೆಂಡ್ ಗೆಲುವಿನ ಹಾದಿಯಲ್ಲಿ ಮುನ್ನಡೆಯಿತು. ಎಂಬುಲ್ದೇನಿಯಾ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದರು.

ADVERTISEMENT

ಮೂರನೇ ದಿನವಾದ ಭಾನುವಾರ ಒಂಬತ್ತು ವಿಕೆಟ್ ಕಳೆದುಕೊಂಡು 339 ರನ್ ಗಳಿಸಿದ್ದ ಇಂಗ್ಲೆಂಡ್‌ ಇನಿಂಗ್ಸ್‌ಗೆ ನಾಲ್ಕನೇ ದಿನದಾಟದ 11ನೇ ಎಸೆತದಲ್ಲಿ ದಿಲ್ರುವಾನ್ ಪೆರೇರ ಕೊನೆ ಹಾಡಿದರು.

ನಂತರ ಡಾಮ್ ಬೆಸ್‌ ಮತ್ತು ಜಾಕ್‌ ಲೀಚ್ ತಲಾ ನಾಲ್ಕು ವಿಕೆಟ್ ಕಬಳಿಸಿ ಆತಿಥೇಯರಿಗೆ ಪೆಟ್ಟು ನೀಡಿದರು. ಲಸಿತ್ ಎಂಬುಲ್ದೇನಿಯಾ (40; 42ಎ, 6ಬೌಂ, 1 ಸಿ) ಅವರನ್ನು ಹೊರತುಪಡಿಸಿದರೆ ಉಳಿದ ಯಾರಿಗೂ 20 ರನ್ ದಾಟಲು ಆಗಲಿಲ್ಲ. ತಂಡದ ಆರು ಬ್ಯಾಟ್ಸ್‌ಮನ್‌ ಎರಡಂಕಿ ಮೊತ್ತ ಕೂಡ ದಾಟಲಾಗದೆ ವಾಪಸಾದರು.

ಸಂಕ್ಷಿಪ್ತ ಸ್ಕೋರು:ಮೊದಲ ಇನಿಂಗ್ಸ್‌
ಶ್ರೀಲಂಕಾ:
139.3 ಓವರ್‌ಗಳಲ್ಲಿ 381
ಇಂಗ್ಲೆಂಡ್‌: 116.1 ಓವರ್‌ಗಳಲ್ಲಿ 344

ಎರಡನೇ ಇನಿಂಗ್ಸ್‌
ಶ್ರೀಲಂಕಾ:
35.5 ಓವರ್‌ಗಳಲ್ಲಿ 126 (ಲಿಸಿತ್ ಎಂಬುಲ್ದೇನಿಯಾ 40; ಡಾಮ್ ಬೆಸ್‌ 49ಕ್ಕೆ4, ಜಾಕ್ ಲೀಚ್‌ 59ಕ್ಕೆ4, ಜೋ ರೂಟ್ 0ಗೆ2)

ಇಂಗ್ಲೆಂಡ್‌: 43.3 ಓವರ್‌ಗಳಲ್ಲಿ 4ಕ್ಕೆ 164 (ಡಾಮ್ ಸಿಬ್ಲಿ ಔಟಾಗದೆ 56, ಜಾನಿ ಬೇಸ್ಟೊ 29, ಜೋಸ್ ಬಟ್ಲರ್ ಔಟಾಗದೆ 46; ಲಸಿತ್ ಎಂಬುಲ್ದೇನಿಯಾ 73ಕ್ಕೆ3, ರಮೇಶ್ ಮೆಂಡಿಸ್ 48ಕ್ಕೆ1).

ಫಲಿತಾಂಶ: ಇಂಗ್ಲೆಂಡ್‌ಗೆ ಆರು ವಿಕೆಟ್‌ಗಳ ಜಯ; 2–0ಯಿಂದ ಸರಣಿ ಗೆಲುವು
ಪಂದ್ಯಶ್ರೇಷ್ಠ ಹಾಗೂ ಸರಣಿಯ ಶ್ರೇಷ್ಠ ಆಟಗಾರ: ಜೋ ರೂಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.