ADVERTISEMENT

ಪಂದ್ಯಶ್ರೇಷ್ಠ ಬಹುಮಾನ ₹4.15 ಲಕ್ಷ ಕ್ರೀಡಾಂಗಣ ಸಿಬ್ಬಂದಿಗೆ ನೀಡಿದ ಸಿರಾಜ್

ಪಿಟಿಐ
Published 17 ಸೆಪ್ಟೆಂಬರ್ 2023, 15:47 IST
Last Updated 17 ಸೆಪ್ಟೆಂಬರ್ 2023, 15:47 IST
   

ಕೊಲಂಬೊ: ಏಷ್ಯಾ ಕಪ್ ಕ್ರಿಕೆಟ್ ಸರಣಿಯಲ್ಲಿ ಮಳೆಯಿಂದ ಒದ್ದೆಯಾಗುತ್ತಿದ್ದ ಕ್ರೀಡಾಂಗಣವನ್ನು ನಿರ್ವಹಣೆ ಮಾಡುವಲ್ಲಿ ದಣಿವರಿಯದೆ ಕೆಲಸ ಮಾಡಿದ ಶ್ರೀಲಂಕಾದ ಕ್ರೀಡಾಂಗಣ ಸಿಬ್ಬಂದಿಗೆ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಫೈನಲ್ ಪಂದ್ಯದಲ್ಲಿ ತಮಗೆ ನೀಡಲಾದ ಪಂದ್ಯಶ್ರೇಷ್ಠ ನಗದು ಬಹುಮಾನ 5,000 ಡಾಲರ್(₹4.15 ಲಕ್ಷ) ಅನ್ನು ನೀಡಿದ್ದಾರೆ.

‘ಈ ನಗದು ಬಹುಮಾನವು ಮೈದಾನ ಸಿಬ್ಬಂದಿಗೆ ಸೇರುತ್ತದೆ. ಇದಕ್ಕೆ ಅವರು ಸಂಪೂರ್ಣವಾಗಿ ಅರ್ಹರು. ಅವರಿಲ್ಲದೆ ಈ ಪಂದ್ಯಾವಳಿಯು ಸಾಧ್ಯವಾಗುತ್ತಿರಲಿಲ್ಲ’ಎಂದು ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 10 ವಿಕೆಟ್‌ಗಳ ಜಯ ಸಾಧಿಸಿದ ನಂತರ ಪ್ರಶಸ್ತಿ ಸಮಾರಂಭದಲ್ಲಿ ಸಿರಾಜ್ ಹೇಳಿದರು.

ಈ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಸಿರಾಜ್, ನಾಲ್ಕನೇ ಓವರ್‌ನಲ್ಲಿ ಮೇಡನ್ ಜೊತೆಗೆ 4 ವಿಕೆಟ್ ಕಬಳಿಸುವ ಮೂಲಕ ಶ್ರೀಲಂಕಾ ಸೋಲನ್ನು ಖಚಿತಪಡಿಸಿದ್ದರು. 21 ರನ್‌ಗೆ 6 ವಿಕೆಟ್ ಉರುಳಿಸಿದ ಅವರು ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದರು. ಇದರ ಪರಿಣಾಮ, ಶ್ರೀಲಂಕಾ 50 ರನ್‌ಗೆ ಆಲೌಟ್ ಆದರೆ, ಭಾರತ ಈ ಗುರಿಯನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ ತಲುಪಿತು.

ADVERTISEMENT

ಇದಕ್ಕೂ ಮುನ್ನ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಜಯ್ ಶಾ ಅವರು ಕ್ಯಾಂಡಿ ಮತ್ತು ಕೊಲಂಬೊದಲ್ಲಿನ ಮೈದಾನದ ನಿರ್ವಹಣೆಯಲ್ಲಿ ಶ್ರಮ ವಹಿಸಿದ್ದ ಸಿಬ್ಬಂದಿಗೆ 50,000 ಡಾಲರ್(₹42 ಲಕ್ಷ) ನಗದು ಬಹುಮಾನವನ್ನು ಘೋಷಿಸಿದ್ದರು.

ಏಷ್ಯಾಕಪ್‌ ಟೂರ್ನಿಯುದ್ದಕ್ಕೂ ಮಳೆ ಇನ್ನಿಲ್ಲದಂತೆ ಕಾಡಿದೆ. ಕೆಲ ಪಂದ್ಯಗಳಲ್ಲಿ ಡಕ್ವರ್ತ್ ಲೂಯಿಸ್ ನಿಯಮದಡಿ ಫಲಿತಾಂಶ ಬಂದರೆ, ಮತ್ತೆ ಕೆಲವು ಪಂದ್ಯಗಳು ರದ್ದಾಗಿವೆ. ಇಂದು ನಡೆದ ಫೈನಲ್ ಪಂದ್ಯ ಕೂಡ ಔಟ್‌ಫೀಲ್ಡ್‌ನಲ್ಲಿ ತೇವ ಇದ್ದ ಕಾರಣ ತಡವಾಗಿ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.