ADVERTISEMENT

ಇಂಗ್ಲೆಂಡ್‌ ಅಲ್ಪ ಮುನ್ನಡೆ; ‌‌ಮತ್ತೊಮ್ಮೆ ಮಿಂಚಿದ ಸ್ಮಿತ್‌

ಆ್ಯಷಸ್‌ ಸರಣಿಯ ಎರಡನೇ ಟೆಸ್ಟ್‌

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 19:45 IST
Last Updated 17 ಆಗಸ್ಟ್ 2019, 19:45 IST
   

ಲಂಡನ್‌ : ವೇಗದ ಬೌಲರ್‌ ಜೋಫ್ರಾ ಆರ್ಚರ್‌ ಬೌನ್ಸರ್‌ನಲ್ಲಿ ಕತ್ತಿಗೆ ಏಟು ತಿಂದರೂ, ಸ್ಟೀವ್‌ ಸ್ಮಿತ್‌ ಹೋರಾಟದ ಆಟವಾಡಿ 92 ರನ್‌ (161 ಎಸೆತ, 14 ಬೌಂಡರಿ) ಗಳಿಸಿದರು. ಆಸ್ಟ್ರೇಲಿಯಾ ಆ್ಯಷಸ್‌ ಸರಣಿಯ ಎರಡನೇ ಟೆಸ್ಟ್‌ನ ನಾಲ್ಕನೇ ದಿನವಾದ ಶನಿವಾರ ಚಹ ವಿರಾಮದ ವೇಳೆಗೆ 250 ರನ್‌ಗಳಿಗೆ ಆಲೌಟ್‌ ಆಯಿತು.

ಆತಿಥೇಯ ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 258 ರನ್‌ ಗಳಿಸಿತ್ತು. ಸ್ಮಿತ್‌ 80 ರನ್‌ ಗಳಿಸಿದ್ದಾಗ ಚೆಂಡು ಅವರ ಕುತ್ತಿಗೆಗೆ ಬಡಿಯಿತು. ಕುಸಿದುಬಿದ್ದ ಅವರು ಚಿಕಿತ್ಸೆಗಾಗಿ ಮೈದಾನದಿಂದ ನಿರ್ಗಮಿಸಿದರು. ಸುಮಾರು 40 ನಿಮಿಷಗಳ ಬಳಿಕ ಕ್ರೀಸಿಗೆ ಹಿಂತಿರುಗಿದ ಅವರು ಆ ಮೊತ್ತಕ್ಕೆ 12 ರನ್‌ ಗಳಿಸಿ ಕ್ರೀಸ್ ವೋಕ್ಸ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಯ್ಲು ಆದರು.

ಮೊದಲ ಟೆಸ್ಟ್‌ ಆಡಿದ ಬಾರ್ಬಡೋಸ್‌ ಸಂಜಾತ ಆರ್ಚರ್‌ ಉರಿ ವೇಗದ ದಾಳಿಯಿಂದ ಎರಡು ಅವಧಿಯಲ್ಲಿ ಗಮನ ಸೆಳೆದರು. ಟಿಮ್‌ ಪೇನ್‌ (23), ಆರ್ಚರ್‌ ಬೌಲಿಂಗ್‌ನಲ್ಲಿ ಷಾರ್ಟ್‌ ಲೆಗ್‌ನಲ್ಲಿ ಕ್ಯಾಚಿತ್ತರು. ಅವರ ಷಾರ್ಟ್‌ಬಾಲ್‌ ಒಂದು ಸ್ಮಿತ್ ತೋಳಿಗೆ ತಾಗಿತು. ಮಗದೊಂದು ಬೌನ್ಸರ್‌ ಕುತ್ತಿಗೆಗೆ ಬಡಿಯಿತು. ಕುಸಿದ ಸ್ಮಿತ್‌ ಕೆಲಕಾಲ ಚಿಕಿತ್ಸೆ ಪಡೆದು ಸಾವರಿಸಿಕೊಂಡು ಪೆವಿಲಿಯನ್‌ ಕಡೆ ಹೋದಾಗ ಪ್ರೇಕ್ಷಕರು ಎದ್ದುನಿಂತು ಅಭಿನಂದನೆ ಸಲ್ಲಿಸಿದರು.

ADVERTISEMENT

ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದ ಸ್ಮಿತ್‌ ಮತ್ತೊಮ್ಮೆ ಇಂಗ್ಲೆಂಡ್‌ ತಂಡಕ್ಕೆ ಕಬ್ಬಿಣದ ಕಡಲೆಯಾದರು. ಆಸ್ಟ್ರೇಲಿಯಾದ ಬಾಲಗೋಂಚಿಗಳು ಹೆಚ್ಚು ಪ್ರತಿರೋಧ ತೋರಲಿಲ್ಲ. ಕುಮಿನ್ಸ್‌ 20 ರನ್ ಗಳಿಸಿ ಸ್ಟುವರ್ಟ್‌ ಬ್ರಾಡ್‌ಗೆ ನಾಲ್ಕನೇ ಬಲಿಯಾದರು.

ಇನ್ನೂ ನಾಲ್ಕು ಅವಧಿಗಳು ಉಳಿದಿದ್ದು, ಇಂಗ್ಲೆಂಡ್‌ ಎರಡನೇ ಇನಿಂಗ್ಸ್‌ನಲ್ಲಿ 9 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತ್ತು.

ಸ್ಕೋರುಗಳು: ಇಂಗ್ಲೆಂಡ್‌: 1ನೇ ಇನಿಂಗ್ಸ್‌: 258, ಆಸ್ಟ್ರೇಲಿಯಾ: 1ನೇ ಇನಿಂಗ್ಸ್‌: 94.3 ಓವರುಗಳಲ್ಲಿ 250 (ಉಸ್ಮಾನ್‌ ಖ್ವಾಜಾ 36, ಸ್ಟೀವ್‌ ಸ್ಮಿತ್‌ 92; ಸ್ಟುವರ್ಟ್‌ ಬ್ರಾಡ್‌ 65ಕ್ಕೆ4, ಕ್ರಿಸ್‌ ವೋಕ್ಸ್‌ 61ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.