ADVERTISEMENT

ಗೌತಮ್‌, ಶಾರ್ದೂಲ್ ಪ್ರಭಾವಿ ದಾಳಿ: ಉತ್ತಮ ಸ್ಥಿತಿಯಲ್ಲಿ ಭಾರತ ‘ಎ’ ತಂಡ

ಶುಭಮನ್ ಗಿಲ್ ಔಟಾಗದೆ ಅರ್ಧಶತಕ

ಪಿಟಿಐ
Published 9 ಸೆಪ್ಟೆಂಬರ್ 2019, 14:18 IST
Last Updated 9 ಸೆಪ್ಟೆಂಬರ್ 2019, 14:18 IST
ಶುಭಮನ್ ಗಿಲ್
ಶುಭಮನ್ ಗಿಲ್   

ತಿರುವನಂತಪುರ: ಆಫ್ ಸ್ಪಿನ್ನರ್, ಕನ್ನಡಿಗ ಕೆ.ಗೌತಮ್ ಮತ್ತು ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ದಾಳಿಗೆ ಪ್ರವಾಸಿ ದಕ್ಷಿಣ ಆಫ್ರಿಕಾ ‘ಎ’ ತಂಡದ ಬ್ಯಾಟ್ಸ್‌ಮನ್‌ಗಳು ಪರದಾಡಿದರು. ಎದುರಾಳಿಗಳನ್ನು ಕಡಿಮೆ ಮೊತ್ತಕ್ಕೆ ಕೆಡವಿದ ಭಾರತ ‘ಎ’ ತಂಡ ಬ್ಯಾಟಿಂಗ್‌ನಲ್ಲೂ ಮಿಂಚು ಹರಿಸಿತು. ಇದರ ಪರಿಣಾಮ ಭಾರತ ‘ಎ’ ತಂಡ ಇಲ್ಲಿ ಸೋಮವಾರ ಆರಂಭಗೊಂಡ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಮುಕ್ತಾಯಕ್ಕೆ ಉತ್ತಮ ಸ್ಥಿತಿಯಲ್ಲಿದೆ.

ಏಡನ್ ಮರ್ಕರಮ್ ಬಳಗವನ್ನು 164 ರನ್‌ಗಳಿಗೆ ಆಲೌಟ್ ಮಾಡಿದ ಭಾರತ ‘ಎ’ ತಂಡ ಮೊದಲ ಇನಿಂಗ್ಸ್‌ನಲ್ಲಿ ಎರಡು ವಿಕೆಟ್ ಕಳೆದುಕೊಂಡು 129 ರನ್ ಗಳಿಸಿದ್ದು ಕೇವಲ 35 ರನ್‌ಗಳ ಹಿನ್ನಡೆಯಲ್ಲಿದೆ.

ಟಾಸ್ ಗೆದ್ದ ಭಾರತ ‘ಎ’ ತಂಡದ ನಾಯಕ ಶುಭಮನ್ ಗಿಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಎದುರಾಳಿ ತಂಡದ ಆರಂಭಿಕ ಜೋಡಿ ಏಡನ್ ಮರ್ಕರಮ್ ಮತ್ತು ಪೀಟರ್ ಮಲಾನ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿ ಭಾರತದ ಆರಂಭಿಕ ಬೌಲರ್‌ಗಳು ಭಾರಿ ಪೆಟ್ಟು ನೀಡಿದರು. ಮರ್ಕರಮ್ ಅವರನ್ನು ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಮತ್ತು ಮಲಾನ್ ಅವರನ್ನು ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್ ಕೆ.ಎಸ್‌.ಭರತ್ ಕ್ಯಾಚ್ ಮಾಡಿದರು.

ADVERTISEMENT

ನಂತರ ದಕ್ಷಿಣ ಆಫ್ರಿಕಾ ತಂಡದ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಯಾವ ಬ್ಯಾಟ್ಸ್‌ಮನ್‌ಗೂ ನಿರೀಕ್ಷೆಗೆ ತಕ್ಕಂತೆ ಆಡಲು ಆಗಲಿಲ್ಲ. 8ನೇ ಕ್ರಮಾಂಕದ ಡೇನ್ ಪೀಟ್ (33; 45 ಎಸೆತ, 6 ಬೌಂಡರಿ) ಮತ್ತು 9ನೇ ಕ್ರಮಾಂಕದ ಮಾರ್ಕೊ ಜೇನ್ಸನ್ (45; 69 ಎ, 2 ಸಿಕ್ಸರ್‌, 4 ಬೌಂಡರಿ) ಕೊಂಚ ಚೇತರಿಕೆ ತುಂಬಿದರು.

ಶುಭಮನ್ ಗಿಲ್ ಮೋಹಕ ಬ್ಯಾಟಿಂಗ್: ಋತುರಾಜ್‌ ಗಾಯಕವಾಡ್ ಜೊತೆ ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ (ಬ್ಯಾಟಿಂಗ್ 66; 108 ಎ, 1 ಸಿ, 9 ಬೌಂ) ಮೋಹಕ ಬ್ಯಾಟಿಂಗ್ ಮೂಲಕ ಮಿಂಚಿದರು. ಮೊದಲ ವಿಕೆಟ್‌ಗೆ 48 ರನ್‌ ಸೇರಿಸಿದ ಅವರು ಎರಡನೇ ವಿಕೆಟ್‌ಗೆ ರಿಕಿ ಭುಯಿ ಅವರೊಂದಿಗೆ 56 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರು, ಮೊದಲ ಇನಿಂಗ್ಸ್‌: ದಕ್ಷಿಣ ಆಫ್ರಿಕಾ ‘ಎ’: 51.5 ಓವರ್‌ಗಳಲ್ಲಿ 164 (ಮಾರ್ಕೊ ಜಾನ್ಸೆನ್ ಅಜೇಯ 45, ಡ್ಯಾನ್ ಪೀಟ್ 33; ಮೊಹಮ್ಮದ್ ಸಿರಾಜ್ 20ಕ್ಕೆ1, ಶಾರ್ದೂಲ್ ಠಾಕೂರ್ 29ಕ್ಕೆ3, ಶಹಬಾಜ್ ನದೀಮ್ 37ಕ್ಕೆ2, ಕೆ.ಕೌತಮ್‌ 64ಕ್ಕೆ3); ಭಾರತ ‘ಎ’: 38 ಓವರ್‌ಗಳಲ್ಲಿ 2ಕ್ಕೆ 129 (ಶುಭಮನ್ ಗಿಲ್ ಬ್ಯಾಟಿಂಗ್ 66, ಋತುರಾಜ್ ಗಾಯಕವಾಡ್ 30, ರಿಕಿ ಭುಯಿ 26).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.