ADVERTISEMENT

IND vs SA ಏಕದಿನ ಸರಣಿ: ರೋಹಿತ್‌ಗೆ ಗಾಯ, ಕನ್ನಡಿಗ ರಾಹುಲ್‌ಗೆ ನಾಯಕತ್ವ ಸಾಧ್ಯತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಡಿಸೆಂಬರ್ 2021, 3:01 IST
Last Updated 28 ಡಿಸೆಂಬರ್ 2021, 3:01 IST
ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್
ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್    

ನವದೆಹಲಿ: ಭಾರತದ ಏಕದಿನ ಮತ್ತು ಟಿ20 ತಂಡಗಳ ನಾಯಕನಾಗಿ ಇತ್ತೀಚೆಗೆ ನೇಮಕವಾಗಿರುವ ರೋಹಿತ್ ಶರ್ಮಾ ಗಾಯಗೊಂಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. 3 ಪಂದ್ಯಗಳ ಏಕದಿನ ಸರಣಿಗೂ ಅವರು ಅಲಭ್ಯವಾಗುವ ಸಾಧ್ಯತೆ ಇದ್ದು, ಉಪನಾಯಕ ಕೆ.ಎಲ್. ರಾಹುಲ್ ನಾಯಕತ್ವ ವಹಿಸಲಿದ್ದಾರೆ ಎಂದು ವರದಿಯಾಗಿದೆ

ಮಂಡಿರಜ್ಜು ನೋವಿನಿಂದ ಬಳಲುತ್ತಿರುವ ರೋಹಿತ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಚಿಕಿತ್ಸೆ ಪಡೆಯುತ್ತಿದ್ದಾರೆ.

ಕ್ರಿಕೆಟ್‌ನ ಮೂರು (ಟೆಸ್ಟ್, ಏಕದಿನ, ಟಿ20) ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದ ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ದುಬೈನಲ್ಲಿ ಮುಕ್ತಾಯವಾದ ಟಿ20 ವಿಶ್ವಕಪ್‌ ಬಳಿಕ ಚುಟುಕು ಕ್ರಿಕೆಟ್ ತಂಡದ ನಾಯಕತ್ವ ತೊರೆದಿದ್ದರು. ಅದಾದ ಬಳಿಕ, ನಿಗದಿತ ಓವರ್‌ಗಳ ತಂಡಕ್ಕೆ ಒಬ್ಬರೇ ನಾಯಕರನ್ನು ಹೊಂದುವ ಉದ್ದೇಶದಿಂದ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಏಕದಿನ ತಂಡದ ನಾಯಕತ್ವದಿಂದಲೂ ಅವರನ್ನು ಕೆಳಗಿಳಿಸಿ, ರೋಹಿತ್‌ಗೆ ಜವಾಬ್ದಾರಿ ನೀಡಿತ್ತು.

ADVERTISEMENT

ಇದೇ ವೇಳೆ ರಾಹುಲ್ ಅವರನ್ನು ಏಕದಿನ ಮತ್ತು ಟಿ20 ತಂಡಗಳಿಗೆ ಉಪನಾಯಕರನ್ನಾಗಿಯೂ ನೇಮಿಸಲಾಗಿತ್ತು. ವಿರಾಟ್ ಟೆಸ್ಟ್ ತಂಡದ ನಾಯಕರಾಗಿ ಮುಂದುವರಿದಿದ್ದಾರೆ.

ತಲಾ ಮೂರುಪಂದ್ಯಗಳ ಟೆಸ್ಟ್‌ ಹಾಗೂ ಏಕದಿನ ಸರಣಿ ಸಲುವಾಗಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಭಾನುವಾರದಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಈ ಮಾದರಿಯಲ್ಲಿ ತಂಡದ ಉಪನಾಯಕರೂ ಆಗಿರುವ ರೋಹಿತ್ ಸರಣಿಯಿಂದ ಹೊರಗುಳಿದಿದ್ದಾರೆ.

'ರೋಹಿತ್ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಅವರು ಸೂಕ್ತ ಸಮಯಕ್ಕೆ ಚೇತರಿಸಿಕೊಳ್ಳದಿದ್ದರೆ, ಏಕದಿನ ಸರಣಿ ಸಲುವಾಗಿ ದಕ್ಷಿಣ ಆಫ್ರಿಕಾಗೆ ಕಳುಹಿಸುವುದು ಸಮಂಜಸವಲ್ಲ. ಒಂದು ವೇಳೆ ಏಕದಿನ ತಂಡದ ನೂತನ ನಾಯಕ ಅಲಭ್ಯರಾದರೆ, ಕೆ.ಎಲ್‌. ರಾಹುಲ್‌ ಅವರಿಗೆ ನಾಯಕತ್ವದ ಹೊಣೆ ನೀಡಲಾಗುವುದು' ಎಂದುಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಸ್ಪೋರ್ಟ್ಸ್‌ ತಕ್‌ ವರದಿ ಮಾಡಿದೆ.

ರೋಹಿತ್ ಟೆಸ್ಟ್ ಸರಣಿಗೆ ಅಲಭ್ಯ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ, ವಿರಾಟ್ ಕೊಹ್ಲಿ ಅವರು ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ವಿರಾಟ್ ಅದನ್ನು ಅಲ್ಲಗಳೆದಿದ್ದರು.

ವೇಳಾಪಟ್ಟಿ
1ನೇಟೆಸ್ಟ್‌ ಪಂದ್ಯ: ಡಿಸೆಂಬರ್26–30
2ನೇ ಟೆಸ್ಟ್‌ ಪಂದ್ಯ: ಜನವರಿ 03–07
3ನೇ ಟೆಸ್ಟ್‌ ಪಂದ್ಯ:ಜನವರಿ 11–15

1ನೇ ಏಕದಿನ ಪಂದ್ಯ: ಜನವರಿ 19
2ನೇ ಏಕದಿನ ಪಂದ್ಯ: ಜನವರಿ 21
3ನೇ ಏಕದಿನ ಪಂದ್ಯ: ಜನವರಿ 23

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.