ADVERTISEMENT

ಯೋಗಾಸನ ಇನ್ನು ಸ್ಪರ್ಧಾತ್ಮಕ ಕ್ರೀಡೆ: ಕಿರಣ್ ರಿಜಿಜು

ಕೇಂದ್ರ ಕ್ರೀಡಾ ಇಲಾಖೆಯ ಕಿರಣ್ ರಿಜಿಜು ಹೇಳಿಕೆ

ಪಿಟಿಐ
Published 17 ಡಿಸೆಂಬರ್ 2020, 19:30 IST
Last Updated 17 ಡಿಸೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಯೋಗಾಸನಕ್ಕೆ ಸ್ಪರ್ಧಾತ್ಮಕ ಕ್ರೀಡೆಯ ಮಾನ್ಯತೆಯನ್ನು ನೀಡಲಾಗಿದೆ.

ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮತ್ತು ಆಯುಷ್ (ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ, ಯುನಾನಿ, ಸಿದ್ಧ, ಹೋಮಿಯೊಪಥಿ) ಇಲಾಖೆ ಸಚಿವ ಶ್ರೀಪಾದ್ ಯೆಸ್ಸೊ ಈ ವಿಷಯವನ್ನು ಘೋಷಿಸಿದರು.

’ಯೋಗಾಸನವು ಬಹಳ ವರ್ಷಗಳಿಂದ ಸ್ಪರ್ಧಾತ್ಮಕ ಕ್ರೀಡೆಯಾಗಿಯೂ ರೂಢಿಯಲ್ಲಿದೆ. ಆದರೆ ಅದಕ್ಕೆ ಮಾನ್ಯತೆ ನೀಡುವ ಅಗತ್ಯವಿತ್ತು. ಆದ್ದರಿಂದ ಈ ನಿರ್ಣಯ ಕೈಗೊಳ್ಳಲಾಗಿದೆ‘ ಎಂದು ರಿಜಿಜು ಹೇಳಿದರು.

ADVERTISEMENT

’ಯೋಗಾಸನವನ್ನು ಅಧಿಕೃತ ಕ್ರೀಡೆಯಾಗಿ ಘೋಷಣೆ ಮಾಡುತ್ತಿರುವ ಈ ದಿನವು ಐತಿಹಾಸಿಕವಾದುದು‘ ಎಂದು ರಿಜಿಜು ಅಭಿಪ್ರಾಯಪಟ್ಟರು.

ಹೋದ ನವೆಂಬರ್‌ನಲ್ಲಿ ಅಂತರರಾಷ್ಟ್ರೀಯ ಯೋಗಾಸನ ಕ್ರೀಡಾ ಫೆಡರೇಷನ್ (ಎನ್‌ವೈಎಸ್‌ಎಫ್‌ಐ) ರಚಿಸಲಾಗಿತ್ತು ಅದರ ಅಧ್ಯಕ್ಷರಾಗಿ ಯೋಗಗುರು ಬಾಬಾ ರಾಮದೇವ್ ಮತ್ತು ಮಹಾಪ್ರಧಾನ ಕಾರ್ಯದರ್ಶಿಯಾಗಿ ಡಾ. ಎಚ್‌.ಆರ್. ನಾಗೇಂದ್ರ ಅವರನ್ನು ನೇಮಕ ಮಾಡಲಾಗಿತ್ತು.

ಈಚೆಗೆ ಭಾರತ ರಾಷ್ಟ್ರೀಯ ಯೋಗಾಸನ ಕ್ರೀಡಾ ಫೆಡರೇಷನ್ (ಎನ್‌ಎಸ್‌ಎಫ್‌) ರಚಿಸಲಾಗಿದೆ. ಅದಕ್ಕೆ ರಾಷ್ಟ್ರೀಯ ಕ್ರೀಡಾ ಫೆಡರೇಷನ್ (ಎನ್‌ಎಸ್‌ಎಫ್‌) ಮಾನ್ಯತೆಯನ್ನೂ ನೀಡಲಾಗಿದೆ.

’ಇಲ್ಲಿಯವರೆಗೆ ಮಾನ್ಯತೆ ಇರದ ಕಾರಣ ಯೋಗಾಸನವು ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿರಲಿಲ್ಲ. ಈಗ ಯೋಗಾಸನವನ್ನು ಕ್ರೀಡೆಯಾಗಿ ಅಭಿವೃದ್ಧಿಪಡಿಸಲು ಆರ್ಥಿಕ ನೆರವು ಮತ್ತು ಅನುದಾನ ನೀಡಲು ಸಾಧ್ಯವಾಗಲಿದೆ‘ ಎಂದು ರಿಜಿಜು ಹೇಳಿದರು.

’ಯೋಗವು ಅಪಾರ ಜನಪ್ರಿಯತೆಯನ್ನು ಹೊಂದಿದೆ. ಆದ್ದರಿಂದ ಕ್ರೀಡೆಯಾಗಿಯೂ ಅದು ಅಗಾಧವಾಗಿ ಬೆಳೆಯುವ ಭರವಸೆ ಇದೆ. ಖೇಲೊ ಇಂಡಿಯಾ, ಶಾಲೆ ಮತ್ತು ವಿಶ್ವವಿದ್ಯಾಲಯ ಗೇಮ್ಸ್‌ಗಳಲ್ಲಿಯೂ ಭವಿಷ್ಯದಲ್ಲಿ ಸೇರ್ಪಡೆ ಮಾಡಲಾಗುವುದು‘ ಎಂದು ರಿಜಿಜು ತಿಳಿಸಿದರು.

ಯೋಗ ಕ್ರೀಡೆಯಲ್ಲಿ ನಾಲ್ಕು ಹಂತಗಳು ಮತ್ತು ಏಳು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುವುದು. ಒಟ್ಟು 51 ಪದಕಗಳನ್ನು ನೀಡಲು ಉದ್ದೇಶಿಸಲಾಗಿದೆ.

ಟ್ರೆಡಿಷನಲ್ ಯೋಗಾಸನ, ಆರ್ಟಿಸ್ಟಿಕ್ ಯೋಗಾಸನ (ವೈಯಕ್ತಿಕ್ ಮತ್ತು ಜೋಡಿ), ರಿದಮಿಕ್ ಯೋಗಾಸನ (ಜೋಡಿ, ಸಮೂಹ ಮತ್ತು ಫ್ರೀಫ್ಲೋ) , ವೈಯಕ್ತಿಕ ಆಲ್‌ರೌಂಡ್ ಚಾಂಪಿಯನ್‌ಷಿಪ್ ಮತ್ತು ತಂಡ ಚಾಂಪಿಯನ್‌ಷಿಪ್ ವಿಭಾಗಗಳ ಸ್ಪರ್ಧೆಗಳನ್ನು ನಡೆಸಲುದ್ದೇಶಿಸಲಾಗಿದೆ.

ಮುಂದಿನ ಫೆಬ್ರುವರಿಯಲ್ಲಿ ಪೈಲಟ್ ಚಾಂಪಿಯನ್‌ಷಿಪ್‌ ಅನ್ನು ರಾಷ್ಟ್ರೀಯ ವೈಯಕ್ತಿಕ ಯೋಗಾಸನ ಕ್ರೀಡಾ ಚಾಂಪಿಯನ್‌ಷಿಪ್ ಆಯೋಜಿಸುವ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ. ಅದರಲ್ಲಿ ಜಿಲ್ಲೆ,ರಾಜ್ಯ, ರಾಷ್ಟ್ರೀಯ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳು ನಡೆಸುವ ಉದ್ದೇಶವಿದೆ.

’ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗಾಗಿ ಯೋಗವನ್ನು ಮತ್ತಷ್ಟು ಪ್ರಸಿದ್ಧಿಗೊಳಿಸುವ ಉದ್ದೇಶ ಈ ಕ್ರಮದ ಹಿಂದಿದೆ. ಕ್ರೀಡೆಯಾಗಿ ಬೆಳೆಯುವುದರಿಂದ ಎಲ್ಲ ವರ್ಗದ ಜನರಿಗೂ ಇದು ತಲುಪಲಿದೆ‘ ಎಂದು ಸಚಿವ ಯಸ್ಸೊ ನಾಯಕ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.