ADVERTISEMENT

ಟಿ20 ವಿಶ್ವಕಪ್‌ ಟೂರ್ನಿ: ಲಂಕಾಕ್ಕೆ ಬೌಲರ್‌ಗಳ ಮೇಲೆ ನಿರೀಕ್ಷೆ

ಉಭಯ ತಂಡಗಳ ಕಾಡುತ್ತಿರುವ ಬ್ಯಾಟಿಂಗ್ ವಿಭಾಗದ ವೈಫಲ್ಯ; ಬಾಂಗ್ಲಾದೇಶಕ್ಕೆ ಶಕೀಬ್ ಅಲ್ ಹಸನ್ ಮೇಲೆ ಭರವಸೆ

ಪಿಟಿಐ
Published 23 ಅಕ್ಟೋಬರ್ 2021, 14:20 IST
Last Updated 23 ಅಕ್ಟೋಬರ್ 2021, 14:20 IST
ಶಕೀಬ್ ಅಲ್ ಹಸನ್ –ಎಎಫ್‌ಪಿ ಚಿತ್ರ
ಶಕೀಬ್ ಅಲ್ ಹಸನ್ –ಎಎಫ್‌ಪಿ ಚಿತ್ರ   

ಶಾರ್ಜಾ: ಬಾಂಗ್ಲಾದೇಶ ವಿರುದ್ಧ ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಯ ಒಂದನೇ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ತನ್ನ ಬೌಲರ್‌ಗಳ ಮೇಲೆ ನಿರೀಕ್ಷೆ ಇರಿಸಿಕೊಂಡಿದೆ. ಮೊದಲ ಸುತ್ತಿನ ಗುಂಪು ಹಂತದ ‍ಪಂದ್ಯಗಳಲ್ಲಿ ಸೆಣಸಿ ಸೂಪರ್ 12ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳಿಗೆ ಆ ಹಂತದಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಲಿಲ್ಲ.

ಶ್ರೀಲಂಕಾದ ಬ್ಯಾಟಿಂಗ್ ವಿಭಾಗ ವೈಫಲ್ಯ ಕಂಡಿದ್ದರೆ ಮೊದಲ ಪಂದ್ಯದಲ್ಲೇ ಸ್ಕಟ್ಲೆಂಡ್ ವಿರುದ್ಧ ಆರು ರನ್‌ಗಳಿಂದ ಸೋತಿದ್ದ ಬಾಂಗ್ಲಾ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿತ್ತು. ನಂತರ ಪ್ರಯಾಸದಿಂದ ಅರ್ಹತೆ ಗಳಿಸಿತ್ತು. ಗುಂಪು ಹಂತದ ಮೊದಲ ಪಂದ್ಯದಲ್ಲಿ ಯಾವುದೇ ತಂಡ ಗೆದ್ದರೂ ಮುಂದಿನ ಹಾದಿ ಬಹಳಷ್ಟು ಕಠಿಣ ಇದೆ. ಇಂಗ್ಲೆಂಡ್‌, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಸವಾಲನ್ನು ಮೆಟ್ಟಿನಿಲ್ಲಬೇಕಾಗಿದೆ.

ಶ್ರೀಲಂಕಾ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಚಿಂತೆಗೆ ಒಳಗಾಗಿದೆ. ಈಚಿನ ಕೆಲವು ಸರಣಿಗಳಲ್ಲಿ ಸತತ ವೈಫಲ್ಯ ಕಂಡಿದ್ದ ದಿನೇಶ್ ಚಾಂದಿಮಲ್ ಅವರನ್ನು ತಂಡದಿಂದ ಕೈಬಿಟ್ಟು ಚರಿತ ಅಸಲಂಕಾ ಅವರನ್ನು ಕರೆಸಿಕೊಳ್ಳಲಾಗಿತ್ತು. ಆದರೆ ಅಸಲಂಕಾ ಅವರಿಂದಲೂ ಉತ್ತಮ ಸಾಮರ್ಥ್ಯ ಮೂಡಿಬಂದಿಲ್ಲ. ಈಗ ಚಾಂದಿಮಲ್ ತಂಡದಲ್ಲಿದ್ದಾರೆ. ಪಥುಮ್ ನಿಸಾಂಕ, ಆವಿಷ್ಕಾ ಫರ್ನಾಂಡೊ, ಭನುಕ ರಾಜಪಕ್ಷೆ ಮತ್ತು ನಾಯಕ ದಾಸುನ್ ಶಾನಕ ಲಯ ಕಂಡುಕೊಳ್ಳಬೇಕಾಗಿದೆ.

ADVERTISEMENT

ಲಾಹಿರು ಕುಮಾರ, ಚಮಿಕ ಕರುಣರತ್ನೆ ಮತ್ತು ದುಷ್ಮಂತ ಚಮೀರ ಅವರನ್ನು ಒಳಗೊಂಡ ಅನುಭವಿ ಬೌಲಿಂಗ್ ವಿಭಾಗಕ್ಕೆ ಆಫ್‌ ಸ್ಪಿನ್ನರ್ ಮಹೀಶ್‌ ತೀಕ್ಷಣ ಮತ್ತು ವಾನಿಂದು ಹಸರಂಗ ಅವರ ಬಲವೂ ಇದೆ.

ಬಾಂಗ್ಲಾದೇಶಕ್ಕೂ ಬ್ಯಾಟಿಂಗ್ ವಿಭಾಗದ ವೈಫಲ್ಯದ್ದೇ ಆತಂಕ. ಮೊಹಮ್ಮದ್ ನಯೀಮ್‌, ಲಿಟನ್ ದಾಸ್, ಆರಿಫ್ ಹೊಸೇನ್ ಅವರಲ್ಲಿ ಪ್ರತಿಭೆ ಇದ್ದರೂ ಶಕೀಬ್ ಅಲ್ ಹಸನ್, ನಾಯಕ ಮೊಹಮ್ಮದುಲ್ಲಾ ಮತ್ತು ಮುಷ್ಫಿಕುರ್ ರಹಮಾನ್ ಅವರ ಹೆಗಲ ಮೇಲೆ ಭಾರಿ ದೊಡ್ಡ ಜವಾಬ್ದಾರಿ ಇದೆ. ಶಕೀಬ್ ಮತ್ತು ಮೆಹದಿ ಹಸನ್ ಅವರನ್ನು ಒಳಗೊಂಡ ಸ್ಪಿನ್ ವಿಭಾಗ ತಂಡದ ಪ್ರಮುಖ ಅಸ್ತ್ರವಾಗಿದೆ.

ತಂಡಗಳು: ಶ್ರೀಲಂಕಾ: ದಸುನ್ ಶನಕ (ನಾಯಕ), ಕುಶಲ್ ಜನಿತ್ ಪೆರೇರ, ದಿನೇಶ್ ಚಾಂಡಿಮಲ್‌, ಧನಂಜಯ ಡಿ‘ಸಿಲ್ವಾ, ಪಥುಮ್ ನಿಸಾಂಕ, ಚರಿತ್ ಅಸಲಂಕಾ, ಆವಿಷ್ಕಾ ಫೆರ್ನಾಂಡೊ, ಭಾನುಕ ರಾಜಪಕ್ಸ, ಚಮಿಕ ಕರುಣರತ್ನೆ, ವಾನಿಂದು ಹಸರಂಗ, ದುಷ್ಮಂತ ಚಮೀರ, ಲಾಹಿರು ಕುಮಾರ, ಮಹೀಶ್‌ ತೀಕ್ಷಣ, ಅಖಿಲ ಧನಂಜಯ, ಬಿನೂರ ಫರ್ನಾಂಡೊ.

ಬಾಂಗ್ಲಾದೇಶ: ಮೊಹಮ್ಮದುಲ್ಲಾ (ನಾಯಕ), ಲಿಟನ್ ದಾಸ್, ಮೊಹಮ್ಮದ್ ನಯೀಮ್, ಮೆಹದಿ ಹಸನ್‌, ಶಕೀಬ್ ಅಲ್ ಹಸನ್, ಸೌಮ್ಯ ಸರ್ಕಾರ್‌, ಮುಷ್ಫಿಕುರ್ ರಹೀಮ್‌, ನೂರುಲ್ ಹಸನ್‌ (ವಿಕೆಟ್ ಕೀಪರ್), ಆರಿಫ್‌ ಹೊಸೇನ್‌, ನಾಸುಮ್ ಅಹಮ್ಮದ್‌, ತಸ್ಕಿನ್ ಅಹಮ್ಮದ್‌, ಶಮೀಮ್ ಹೊಸೇನ್, ಮುಸ್ತಫಿಜುರ್ ರಹಮಾನ್‌, ಮೊಹಮ್ಮದ್ ಸೈಫುದ್ದೀನ್‌.

ಆರಂಭ: ಸಂಜೆ 3.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.