ADVERTISEMENT

ಸನ್‌ರೈಸರ್ಸ್‌ಗೆ ಸುಲಭ ಜಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 20:39 IST
Last Updated 4 ಏಪ್ರಿಲ್ 2019, 20:39 IST
   

ನವದೆಹಲಿ: ಪರಿಣಾಮಕಾರಿ ಬೌಲಿಂಗ್ ದಾಳಿ ಮತ್ತು ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ಎದುರು ಜಯ ಗಳಿಸಿತು. ಗುರುವಾರ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ಐದು ವಿಕೆಟ್‌ಗಳಿಂದ ಎದುರಾಳಿಗಳನ್ನು ಮಣಿಸಿತು.

ಸಾಧಾರಣ ಮೊತ್ತವನ್ನು ಬೆನ್ನತ್ತಿದ ಸನ್‌ರೈಸರ್ಸ್‌ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್ ಜಾನಿ ಬೇಸ್ಟೊ (48; 28 ಎಸೆತ, 1 ಸಿಕ್ಸರ್‌, 9 ಬೌಂಡರಿ) ಸ್ಫೋಟಕ ಬ್ಯಾಟಿಂಗ್ ಮಾಡಿದರು. ಡೇವಿಡ್ ವಾರ್ನರ್ ಜೊತೆಗೂಡಿ ಮೊದಲ ವಿಕೆಟ್‌ಗೆ ಅವರು 64 ರನ್‌ ಸೇರಿಸಿದರು.

ನಾಲ್ಕು ರನ್‌ಗಳ ಅಂತರದಲ್ಲಿ ಇವರಿಬ್ಬರು ಔಟಾದ ನಂತರ ಬೇಗನೇ ವಿಕೆಟ್‌ಗಳು ಉರುಳಿದವು. ಆದರೆ ಯೂಸುಫ್ ಪಠಾಣ್‌ ಮತ್ತು ಮೊಹಮ್ಮದ್ ನಬಿ ದಿಟ್ಟ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ADVERTISEMENT

ಭುವಿ, ನಬಿ ಶಿಸ್ತಿನ ಬೌಲಿಂಗ್‌: ಟಾಸ್ ಗೆದ್ದ ಸನ್‌ರೈಸರ್ಸ್‌ ತಂಡದ ಹಂಗಾಮಿ ನಾಯಕ ಭುವನೇಶ್ವರ್ ಕುಮಾರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅವರ ನಿರ್ಧಾರವನ್ನು ಸಮರ್ಥಿಸಿಕೊ ಳ್ಳುವಂತೆ ಬೌಲರ್‌ಗಳು ದಾಳಿ ಸಂಘ ಟಿಸಿದರು. ಭುವಿ, ಸ್ಪಿನ್ನರ್ ಮೊಹಮ್ಮದ್ ನಬಿ ಮತ್ತು ಸಿದ್ಧಾರ್ಥ್ ಕೌಲ್ ಅವರ ಶಿಸ್ತಿನ ಬೌಲಿಂಗ್‌ಗೆ ನಡುಗಿದ ಡೆಲ್ಲಿ ಕ್ಯಾಪಿಟಲ್ಸ್‌ ಸಾಮಾನ್ಯ ಮೊತ್ತ ಗಳಿಸಿತು.

ಹಿಂದಿನ ಪಂದ್ಯಗಳಲ್ಲಿ ಉತ್ತಮ ಆಟ ಆಡಿದ ಪೃಥ್ವಿ ಶಾ ಮತ್ತು ಶಿಖರ್ ಧವನ್ ಅವರು ತಂಡಕ್ಕೆ ಒಳ್ಳೆಯ ಆರಂಭ ನೀಡಲಿಲ್ಲ. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿಯೇ ಭುವನೇಶ್ವರ್ ಕುಮಾರ್ ಲೆಗ್‌ ಕಟರ್‌ ಎಸೆತಕ್ಕೆ ಪೃಥ್ವಿ ಕ್ಲೀನ್‌ಬೌಲ್ಡ್‌ ಆದರು.

ಕಾಲೂರಲು ತಡಬಡಾಯಿಸಿದ ಅನುಭವಿ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರು ನಬಿ ಎಸೆತವನ್ನು ಬೌಂಡರಿಗೆ ಎತ್ತಲು ಪ್ರಯತ್ನಿಸಿದರು. ಸಂದೀಪ್ ಶರ್ಮಾ ಆಕರ್ಷಕ ಕ್ಯಾಚ್ ಪಡೆದರು. ಇನ್ನೊಂದು ಬದಿಯಲ್ಲಿದ್ದ ನಾಯಕ ಶ್ರೇಯಸ್ ಅಯ್ಯರ್ ಮಾತ್ರ ದಿಟ್ಟತನದಿಂದ ಆಡಿದರು. ಹೆಚ್ಚು ಅವಸರದ ಹೊಡೆತಗಳಿಗೆ ಅವರು ಕೈಹಾಕಲಿಲ್ಲ. ಆದರೆ ಮತ್ತೊಂದೆಡೆ ವಿಕೆಟ್‌ಗಳು ಪತನವಾದವು.

ರಿಷಭ್ ಪಂತ್, ರಾಹುಲ್ ತೆವಾತಿಯಾ ಮತ್ತು ಕಾಲಿನ್ ಇಂಗ್ರಾಮ್ ಅವರಿಗೆ ಒಂದಂಕಿ ಮೊತ್ತ ಗಳಿಸಲಷ್ಟೇ ಸಾಧ್ಯವಾಯಿತು. 17ನೇ ಓವರ್‌ನಲ್ಲಿ ಶ್ರೇಯಸ್ ಅಯ್ಯರ್‌ ಅವರನ್ನು ರಶೀದ್ ಖಾನ್ ಬೌಲ್ಡ್‌ ಮಾಡಿ ಸಂಭ್ರಮಿಸಿದರು.

ಕ್ರಿಸ್ ಮಾರಿಸ್ ಮತ್ತು ಅಕ್ಷರ್ ಪಟೇಲ್ ಮಾತ್ರ ಸ್ವಲ್ಪ ಹೋರಾಟ ಮಾಡಿದರು. ಇದರಿಂದಾಗಿ ತಂಡದ ಮೊತ್ತವು ನೂರರ ಗಡಿ ದಾಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.