ADVERTISEMENT

ರೈನಾ ಈಗ ಸಮಾಜ ಸೇವಕ

ಬಸವರಾಜ ದಳವಾಯಿ
Published 25 ನವೆಂಬರ್ 2020, 19:30 IST
Last Updated 25 ನವೆಂಬರ್ 2020, 19:30 IST
ಶಾಲೆಯೊಂದರಲ್ಲಿ ಸೌಲಭ್ಯಗಳ ಉದ್ಘಾಟನೆ ಮಾಡಿದ ಸುರೇಶ್‌ ರೈನಾ (ಎಡ ತುದಿ)– ಟ್ವಿಟರ್‌ ಚಿತ್ರ
ಶಾಲೆಯೊಂದರಲ್ಲಿ ಸೌಲಭ್ಯಗಳ ಉದ್ಘಾಟನೆ ಮಾಡಿದ ಸುರೇಶ್‌ ರೈನಾ (ಎಡ ತುದಿ)– ಟ್ವಿಟರ್‌ ಚಿತ್ರ   

ಸ್ಫೋಟಕ ಶೈಲಿಯ ಬ್ಯಾಟಿಂಗ್‌ ಮೂಲಕ ಗಮನ ಸೆಳೆಯುವ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಸುರೇಶ್‌ ರೈನಾ ಈಗ ಮಾನವೀಯ ಕಾರ್ಯಗಳಿಂದಾಗಿ ಸುದ್ದಿಯಲ್ಲಿದ್ದಾರೆ. ಇದೇ 27ರಂದು 34ನೇ ಜನ್ಮದಿನ ಆಚರಿಸಲಿರುವ ಈ ಆಟಗಾರ 34 ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ವಾಗ್ದಾನ ಮಾಡಿದ್ದಾರೆ. ಉತ್ತರ ಪ್ರದೇಶ, ಜಮ್ಮು ಹಾಗೂ ರಾಷ್ಟ್ರ ರಾಜಧಾನಿ ವಲಯಗಳ ಸುಮಾರು 10,000 ವಿದ್ಯಾರ್ಥಿಗಳಿಗೆ ಇದರ ಲಾಭ ದೊರೆಯಲಿದೆ.

ಆಗಸ್ಟ್‌ 15ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ರೈನಾ, ಮಗಳ ಹೆಸರಿನಲ್ಲಿರುವ ಗ್ರೇಸಿಯಾ ರೈನಾ ಫೌಂಡೇಷನ್‌ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಸರ್ಕಾರೇತರ ಸಂಸ್ಥೆಯಾಗಿರುವ ಗ್ರೇಸಿಯಾ ರೈನಾ ಫೌಂಡೇಷನ್‌ಗೆ ರೈನಾ ಪತ್ನಿ ಪ್ರಿಯಾಂಕಾ ಸಹಸಂಸ್ಥಾಪಕಿ. ಸರಣಿಸಮಾಜಮುಖಿ ಕಾರ್ಯಗಳ ಭಾಗವಾಗಿ ಗಾಜಿಯಾಬಾದ್‌ನ ಶಾಲೆಯೊಂದರಲ್ಲಿ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ, ಕೈ ತೊಳೆಯಲು ಪ್ರತ್ಯೇಕ ಸ್ಥಳ, ಸ್ಮಾರ್ಟ್‌ ತರಗತಿ ಕೊಠಡಿಗಳ ಉದ್ಘಾಟನೆ ಮಾಡಿದ್ದಾರೆ ರೈನಾ. ಬಡ ಕುಟುಂಬಗಳ 500 ತಾಯಂದಿರಿಗೆ ರೇಷನ್‌ ಕಿಟ್‌ಗಳನ್ನು ಈ ದಂಪತಿ ನೀಡಿದ್ದಾರೆ.

ADVERTISEMENT

‘ಇಂತಹ ಉತ್ತಮ ಕಾರ್ಯಗಳೊಂದಿಗೆ ನನ್ನ ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಸಂತಸದ ವಿಷಯ. ಪ್ರತಿ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಹೊಂದುವುದು ಮಕ್ಕಳ ಹಕ್ಕು. ಯುವ ಅನ್‌ಸ್ಟಾಪೇಬಲ್‌ ಸಂಸ್ಥೆಯೊಂದಿಗೆ ಜೊತೆಗೂಡಿ ಸಾಧ್ಯವಾದಷ್ಟು ನೆರವು ನೀಡಲಿದ್ದೇವೆ’ ಎಂದು ರೈನಾ ಹೇಳಿದ್ದಾರೆ. ರೈನಾ, ಕೇಂದ್ರ ಸರ್ಕಾರದ ‘ಸ್ವಚ್ಛ ಭಾರತ ಅಭಿಯಾನ‘ದ ರಾಯಭಾರಿಯೂ ಆಗಿದ್ದಾರೆ.

ಭಾರತ ತಂಡದ ಪರ 226 ಏಕದಿನ ಪಂದ್ಯಗಳನ್ನು ಆಡಿರುವ ರೈನಾ 5,615 ರನ್‌ ಕಲೆ ಹಾಕಿದ್ದಾರೆ. 78 ಟಿ20 ಪಂದ್ಯಗಳಲ್ಲಿ ಆಡಿರುವ ಅವರು 1,605 ರನ್ ಗಳಿಸಿದ್ದಾರೆ. 18 ಟೆಸ್ಟ್ ಪಂದ್ಯಗಳಲ್ಲೂ ಈ ಎಡಗೈ ಆಟಗಾರ ಆಡಿದ್ದಾರೆ. ಭಾರತ ತಂಡದ ಮಾಜಿ ನಾಯಕ ಹಾಗೂ ಗೆಳೆಯ ಮಹೇಂದ್ರಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ದಿನವೇ ರೈನಾ ಕೂಡ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಐಪಿಎಲ್‌ ಟೂರ್ನಿಯಲ್ಲಿ ಆಡುವುದಾಗಿಯೂ ಹೇಳಿದ್ದರು. ಆದರೆ ಈ ಬಾರಿಯ ಟೂರ್ನಿಯಲ್ಲಿ ಆಡಲು ಯುಎಇಗೆ ತೆರಳಿದ್ದ ಅವರು ದಿಢೀರ್ ವಾಪಸಾಗಿ ಅಚ್ಚರಿ ಮೂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.