ADVERTISEMENT

ಸೈಯದ್ ಮುಷ್ತಾಕ್ ಅಲಿ ಟೂರ್ನಿ: ಕ್ವಾರ್ಟರ್‌ಗೆ ರಾಹುಲ್, ಮಯಂಕ್ ಅಗರವಾಲ್‌?

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 20:46 IST
Last Updated 26 ಡಿಸೆಂಬರ್ 2020, 20:46 IST
ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್
ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್   

ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಒಂದೊಮ್ಮೆ ಕರ್ನಾಟಕ ತಂಡವು ಕ್ವಾರ್ಟರ್‌ಫೈನಲ್ ತಲುಪಿದರೆ, ಕೆ.ಎಲ್ ರಾಹುಲ್ ಮತ್ತು ಮಯಂಕ್ ಅಗರವಾಲ್ ಕಣಕ್ಕಿಳಿಯುವ ಸಾಧ್ಯತೆ ಇದೆ.

ಸದ್ಯ ರಾಹುಲ್ ಮತ್ತು ಮಯಂಕ್ ಆಸ್ಟ್ರೇಲಿಯಾದಲ್ಲಿ ಆಡುತ್ತಿರುವ ಭಾರತ ತಂಡದಲ್ಲಿದ್ದಾರೆ. ಜ.19ರಂದು ಲೀಗ್ ಹಂತದ ಪಂದ್ಯಗಳು ಮುಗಿಯಲಿವೆ. ಅದೇ ವೇಳೆಗೆ ಆಸ್ಟ್ರೇಲಿಯಾದಲ್ಲಿ ಸರಣಿಯು ಮುಗಿಯಲಿದೆ. ಜ 26ರಿಂದ ಅಹಮದಾಬಾದಿನಲ್ಲಿ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ ಎಂಟರ ಘಟ್ಟದ ಪಂದ್ಯಗಳು ಆರಂಭವಾಗುತ್ತವೆ.

ಜೀವ ಸುರಕ್ಷಾ ವಲಯದಿಂದಲೇ ಬರುವ ಇಬ್ಬರೂ ಆಟಗಾರರಿಗೆ ಇಲ್ಲಿ ಕಡಿಮೆ ಅವಧಿಯ ಕ್ವಾರಂಟೈನ್‌ ನಿಯಮ ಅನ್ವಯವಾಗಬಹುದು. ಆದ್ದರಿಂದ ಕರ್ನಾಟಕ ತಂಡಕ್ಕೆ ಎಂಟರ ಘಟ್ಟದಲ್ಲಿ ಇಬ್ಬರೂ ಅನುಭವಿ ಆಟಗಾರರ ಬಲ ಸಿಗಬಹುದು.

ADVERTISEMENT

ಪಾಂಡೆ ಅಲಭ್ಯ: ಕರ್ನಾಟಕ ರಾಜ್ಯ ತಂಡದ ನಾಯಕ ಮನೀಷ್ ಪಾಂಡೆ ಮೊಣಕೈ ಗಾಯದಿಂದ ಬಳಲುತ್ತಿದ್ದಾರೆ. ಆದ್ದರಿಂದ ಅವರು ಈ ಟೂರ್ನಿಯಲ್ಲಿ ಕಣಕ್ಕಿಳಿಯುವುದಿಲ್ಲ.

ಕರ್ನಾಟಕ ತಂಡದ ಆಯ್ಕೆ ಇಂದು
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯಗಳು ಜನವರಿ 10ರಿಂದ 19ರವರೆಗೆ ಬೆಂಗಳೂರಿನಲ್ಲಿ ನಡೆಯಲಿವೆ. ಈ ಟೂರ್ನಿಯಲ್ಲಿ ಆಡುವ ಕರ್ನಾಟಕ ತಂಡವನ್ನು ಭಾನುವಾರ ಆಯ್ಕೆ ಮಾಡಲಾಗುತ್ತಿದೆ.

ನಗರದ ಹೊರವಲಯದಲ್ಲಿರುವ ಆಲೂರಿನ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಜನವರಿ 2ರಂದು ತಂಡಗಳು ಬರಲಿವೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.