
ಬ್ರಿಜ್‌ಟೌನ್, ಬಾರ್ಬಡೋಸ್: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಗೌರವ ಮತ್ತು ಏಕದಿನ ಕ್ರಿಕೆಟ್ ವಿಶ್ವಕಪ್ ಟ್ರೋಫಿಯನ್ನು ಒಂದೇ ವರ್ಷದಲ್ಲಿ ಗೆದ್ದಿರುವ ಆಸ್ಟ್ರೇಲಿಯಾ ಈಗ ದಾಖಲೆ ನಿರ್ಮಿಸುವತ್ತ ಹೆಜ್ಜೆ ಇಟ್ಟಿದೆ.
ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಜಯಿಸಿ, ಮೂರು ಮಾದರಿಗಳಲ್ಲಿಯೂ ಒಂದೇ ವರ್ಷ ಚಾಂಪಿಯನ್ ಆದ ದಾಖಲೆ ಬರೆಯುತ್ತ ಚಿತ್ತ ನೆಟ್ಟಿದೆ. ಅದಕ್ಕಾಗಿ ಗುರುವಾರದಿಂದ ಅಭಿಯಾನ ಆರಂಭಿಸಲಿದೆ.
ತನ್ನ ಮೊದಲ ಪಂದ್ಯದಲ್ಲಿ ಒಮಾನ್ ವಿರುದ್ಧ ಕಣಕ್ಕಿಳಿಯಲಿದೆ. 2021ರಲ್ಲಿ ಆಸ್ಟ್ರೇಲಿಯಾ ತಂಡವು ಟಿ20 ವಿಶ್ವಕಪ್ ಜಯಿಸಿತ್ತು. ಆದರೆ ನಂತರದ ವರ್ಷದಲ್ಲಿ ಟಿ20 ವಿಶ್ವಕಪ್ ಜಯಿಸುವಲ್ಲಿ ಎಡವಿತು. ಆದರೆ ಉಳಿದೆರಡೂ ಮಾದರಿಗಳಲ್ಲಿ ಮೇಲುಗೈ ಸಾಧಿಸಿತು. ಅದಕ್ಕಾಗಿಯೇ ಈ ಟೂರ್ನಿಯಲ್ಲಿ ಮಿಚೆಲ್ ಮಾರ್ಷ್ ನಾಯಕತ್ವದ ಬಳಗದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಸ್ವತಃ ಮಾರ್ಷ್, ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಆಲ್‌ರೌಂಡರ್ ಕ್ಯಾಮರಾನ್ ಗ್ರೀನ್ ಗ್ಲೆನ್ ಮ್ಯಾಕ್ಸ್‌ವೆಲ್, ವೇಗಿ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಸ್ಪಿನ್ನರ್ ಆ್ಯಡಂ ಜಂಪಾ ಅವರು ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಬಲ್ಲ ಸಮರ್ಥರಾಗಿದ್ದಾರೆ.
ಅದರಲ್ಲೂ ಟ್ರಾವಿಸ್ ಹೆಡ್ ಅವರು ಡಬ್ಲ್ಯುಟಿಸಿ ಫೈನಲ್ ಹಾಗೂ ಏಕದಿನ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಮಿಂಚಿ ಆಸ್ಟ್ರೇಲಿಯಾ ತಂಡದ ಗೆಲುವಿನ ರೂವಾರಿಯಾಗಿದ್ದರು. ಈಚೆಗೆ ನಡೆದ ಐಪಿಎಲ್‌ನಲ್ಲಿಯೂ ಅವರ ಅಬ್ಬರದ ಆಟ ಗಮನ ಸೆಳೆದಿತ್ತು.
ಒಮಾನ್ ತಂಡವು ಆಸ್ಟ್ರೇಲಿಯಾದ ಅನುಭವದ ಮುಂದೆ ದುರ್ಬಲ ತಂಡವೆಂದೇ ಹೇಳಬಹುದು. ಈಚೆಗೆ ನಡೆದ ಮೊದಲ ಪಂದ್ಯದಲ್ಲಿ ನಮಿಬಿಯಾ ವಿರುದ್ಧ ಒಮಾನ್ ತಂಡವು ಸೂಪರ್ ಓವರ್‌ನಲ್ಲಿ ಸೋತಿತ್ತು.
ತಂಡಗಳು
ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್ (ನಾಯಕ), ಆ್ಯಷ್ಟನ್ ಆಗರ್, ಪ್ಯಾಟ್ ಕಮಿನ್ಸ್, ಟಿಮ್ ಡೇವಿಡ್, ನೇಥನ್ ಎಲ್ಲಿಸ್, ಕ್ಯಾಮರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ.
ಒಮಾನ್: ಅಕೀಬ್ ಇಲಿಯಾಸ್ (ನಾಯಕ), ಝೀಷನ್ ಮಕ್ಸೂದ್, ಅಯಾನ್ ಖಾನ್, ಕಶ್ಯಪ್ ಪ್ರಜಾಪತಿ, ಶೋಯಬ್ ಖಾನ್, ಮೊಹಮ್ಮದ್ ನದೀಮ್, ಪ್ರತೀಕ್ ಅಠಾವಳೆ,ನಸೀಪ್ ಖುಷಿ, ಖಾಲೀದ್ ಖಲಿ ಮೆಹ್ರಾನ್, ಖಾನ್ ಬಿಲಾಲ್ ಖಾನ್, ಕಲೀಮುಲ್ಲಾ ಫಯಾಜ್, ಬಟ್ ಶಕೀಲ್ ಅಹಮದ್ ರಫಿವುಲ್ಲಾ.
ಪಂದ್ಯ ಆರಂಭ: ಬೆಳಿಗ್ಗೆ 6 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಡಿಡಿ ಸ್ಪೋರ್ಟ್ಸ್ ಹಾಟ್‌ಸ್ಟಾರ್ ಆ್ಯಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.