ADVERTISEMENT

ಆಸ್ಟ್ರೇಲಿಯಾ ಆಟಗಾರರ ಅಸಹ್ಯಕರ ಸ್ಲೆಡ್ಜಿಂಗ್: ತೆಂಬಾ ಬವುಮಾ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜೂನ್ 2025, 5:33 IST
Last Updated 15 ಜೂನ್ 2025, 5:33 IST
<div class="paragraphs"><p>ತೆಂಬಾ ಬವುಮಾ</p></div>

ತೆಂಬಾ ಬವುಮಾ

   

ಲಾರ್ಡ್ಸ್: ಕ್ರಿಕೆಟ್ ಮೈದಾನದಲ್ಲಿ ಅನುಚಿತ ವರ್ತನೆಗೆ(ಸ್ಲೆಡ್ಜಿಂಗ್) ಕುಖ್ಯಾತಿ ಪಡೆದಿರುವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರರು, ಶುಕ್ರವಾರ ಮುಕ್ತಾಯಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲೂ ದಕ್ಷಿಣ ಆಫ್ರಿಕಾ ಆಟಗಾರರ ಮೇಲೆ ತಮ್ಮ ಈ ಕೀಳು ಅಸ್ತ್ರವನ್ನು ಪ್ರಯೋಗಿಸಿದ್ದಾರೆ ಎಂದು ಸ್ವತಃ ನಾಯಕ ತೆಂಬಾ ಬವುಮಾ ಕಿಡಿಕಾರಿದ್ದಾರೆ.

ಲಾರ್ಡ್ಸ್‌ನಲ್ಲಿ ಶನಿವಾರ(ಜೂ 14) ಮುಕ್ತಾಯಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಮಣಿಸಿ ಪ್ರಶಸ್ತಿ ಜಯಿಸಿತ್ತು. ಈ ಮೂಲಕ 27 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಂಡಿತ್ತು.

ADVERTISEMENT

ಈ ಪಂದ್ಯದಲ್ಲಿ ನಾನು ಮತ್ತು ಶತಕ ಸಿಡಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಏಡೆನ್ ಮರ್ಕ್ರಮ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ತಮ್ಮನ್ನು 'ಚೋಕರ್ಸ್' ಎಂದು ಆಸ್ಟ್ರೇಲಿಯನ್ನರು ಕೆಣಕುತ್ತಿದ್ದರು ಎಂಬುದನ್ನು ನಾಯಕ ತೆಂಬಾ ಬವುಮಾ ವಿವರಿಸಿದ್ದಾರೆ.

ನಾವು ಬ್ಯಾಟಿಂಗ್ ಮಾಡುವಾಗ ಆಸೀಸ್ ಆಟಗಾರರು ಚೋಕ್ ಎಂಬ ಪದವನ್ನು ಪದೇ ಪದೇ ಬಳಸುತ್ತಿದ್ದರು. ಅದು ನಮ್ಮ ಕಿವಿಗೆ ಬಿದ್ದಿತ್ತು. ನಾವು ನಮ್ಮ ಸಾಮರ್ಥ್ಯದ ಮೇಲೆ ಬಹಳಷ್ಟು ನಂಬಿಕೆ ಮತ್ತು ಕೆಲ ಸಂದೇಹಗಳೊಂದಿಗೆ ಬಂದಿದ್ದೆವು. ಈ ಗೆಲುವು ಆ ಸಂದೇಹಗಳನ್ನು ತೊಡೆದುಹಾಕಲು ನೆರವಾಯಿತು. ಎಲ್ಲಾ ಸಂದೇಹಗಳನ್ನು ಅಳಿಸಿಹಾಕಲಾಗಿದೆ ಎಂದಿದ್ದಾರೆ.

ಭಾರತ ವಿರುದ್ಧ ನಡೆದ 2024ರ ಟಿ–20 ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಗೆಲುವಿನ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ, ಸೋತು ತೀವ್ರ ನಿರಾಸೆ ಅನುಭವಿಸಿತ್ತು. 1999ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿಗೆ ಡಬ್ಯುಟಿಸಿ ಫೈನಲ್‌ನಲ್ಲಿ ಗೆಲ್ಲುವ ಮೂಲಕ ಸೇಡು ತೀರಿಸಿಕೊಂಡಿದೆ.

‘ಒಂದು ದೇಶವಾಗಿ ಸಂಭ್ರಮಿಸಲು ಈ ಗೆಲುವು ನಮಗೆ ಅವಕಾಶ ನೀಡಿದೆ. ನಮ್ಮ ಸಮಸ್ಯೆಗಳನ್ನು ಮರೆತು ಒಟ್ಟಾಗಿ ಮುಂದುವರಿಯಲು ಇದು ಒಂದು ಅವಕಾಶ. ಇದು ನಮ್ಮ ದೇಶಕ್ಕೆ ಸ್ಫೂರ್ತಿ ನೀಡುತ್ತದೆ ಮತ್ತು ನೀಡುತ್ತಲೇ ಇರುತ್ತದೆ ಎಂದು ನಾನು ಭಾವಿಸುತ್ತೇನೆ. ನಮ್ಮ ಆಟಗಾರರಲ್ಲಿ ಬಹಳಷ್ಟು ಸಂದೇಹಗಳಿದ್ದವು. ಆದರೆ, ನಾವು ಆಡಿದ ರೀತಿ ಅದನ್ನೆಲ್ಲ ಅಳಿಸಿಹಾಕಿದೆ’ಎಂದು ಹೇಳುವ ಮೂಲಕ ಗೆಲುವಿನಲ್ಲಿ ತಂಡದ ಸಾಮೂಹಿಕ ಪ್ರಯತ್ನವನ್ನು ಒತ್ತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.