ADVERTISEMENT

ಕ್ಲೀನ್‌ಸ್ವೀಪ್ ಮೇಲೆ ಕೊಹ್ಲಿ ಪಡೆ ಕಣ್ಣು

ರಾಂಚಿಯಲ್ಲಿ ಭಾರತ–ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟೆಸ್ಟ್ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 20:00 IST
Last Updated 18 ಅಕ್ಟೋಬರ್ 2019, 20:00 IST
ರಾಂಚಿ ಕ್ರೀಡಾಂಗಣದಲ್ಲಿ ಶುಕ್ರವಾರ ಅಭ್ಯಾಸ ಮುಗಿಸಿ ಮರಳುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ (ಪಿಟಿಐ ಚಿತ್ರ)
ರಾಂಚಿ ಕ್ರೀಡಾಂಗಣದಲ್ಲಿ ಶುಕ್ರವಾರ ಅಭ್ಯಾಸ ಮುಗಿಸಿ ಮರಳುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ (ಪಿಟಿಐ ಚಿತ್ರ)   

ರಾಂಚಿ: ಮಯಂಕ್ ಅಗರವಾಲ್ ಶತಕದ ‘ಹ್ಯಾಟ್ರಿಕ್’ ಗಳಿಸುವರೇ? ರೋಹಿತ್ ಶರ್ಮಾ ಮತ್ತೊಂದು ಶತಕದ ಮೂಲಕ ರಂಜಿಸುವರೇ? ವಿರಾಟ್ ಕೊಹ್ಲಿ ಮತ್ತೇನು ದಾಖಲೆಗಳನ್ನು ಮಾಡಲಿದ್ದಾರೆ?

ಶನಿವಾರದಿಂದ ಇಲ್ಲಿಯ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಎದುರಿನ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಆಡಲಿರುವ ಭಾರತ ತಂಡದ ಈ ಆಟಗಾರರ ಮೇಲೆಯೇ ಎಲ್ಲರ ಕಣ್ಣುಗಳಿವೆ.

ಸರಣಿಯ ಮೊದಲ ಎರಡೂ ಪಂದ್ಯಗಳನ್ನು ಭಾರತವು ಗೆದ್ದು ಬೀಗಿದ್ದು ಈ ಆಟಗಾರರ ಅಮೋಘ ಅಟದಿಂದಲೇ. ಬೆಂಗಳೂರಿನ ಮಯಂಕ್ ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ಮತ್ತು ಎರಡನೇ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ರೋಹಿತ್ ಮೊದಲ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದರು. ಆದರೆ, ಎರಡನೇ ಪಂದ್ಯದಲ್ಲಿ ಮಿಂಚಿರಲಿಲ್ಲ. ಪುಣೆಯಲ್ಲಿ ನಡೆದಿದ ಆ ಪಂದ್ಯದಲ್ಲಿ ನಾಯಕ ಕೊಹ್ಲಿ ದ್ವಿಶತಕ (ಅಜೇಯ 254 ರನ್‌)ಬಾರಿಸಿದ್ದರು. ಅದರೊಂದಿಗೆ ದಾಖಲೆಗಳ ರಾಶಿಯನ್ನೇ ಪೇರಿಸಿದ್ದರು.

ADVERTISEMENT

ಇದೀಗ ಮೂರನೇ ಟೆಸ್ಟ್‌ನಲ್ಲಿಯೂ ಜಯಿಸಿ ಕ್ಲೀನ್‌ಸ್ವೀಪ್ ಮಾಡಿಕೊಳ್ಳಲುಕೊಹ್ಲಿ ಬಳಗವು ತುದಿಗಾಲಿನಲ್ಲಿ ನಿಂತಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಭಾಗವಾಗಿರುವ ಈ ಪಂದ್ಯದಲ್ಲಿ ಗೆದ್ದರೆ 40 ಅಂಕಗಳೂ ಭಾರತದ ಖಾತೆಯನ್ನು ಸೇರಲಿವೆ. ಆದ್ದರಿಂದ ದಕ್ಷಿಣ ಆಫ್ರಿಕಾ ಕೂಡ ಪಂದ್ಯದ ಜಯದ ಮೇಲೆ ಕಣ್ಣಿಟ್ಟಿದೆ. ಸರಣಿಯಂತೂ ಕೈಬಿಟ್ಟಿದೆ. ಇದೀಗ ಒಂದು ಪಂದ್ಯದ ಗೆಲುವಿನಿಂದ ಪಾಯಿಂಟ್ಸ್‌ ಗಳಿಸಬಹುದೆಂಬ ಲೆಕ್ಕಾಚಾರ ಫಾಫ್ ಡು ಪ್ಲೆಸಿ ಬಳಗದ್ದು.

ಆದರೆ ಪುಣೆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಪ್ರವಾಸಿ ಬಳಗವು ಕಳಪೆ ಬೌಲಿಂಗ್ ಮಾಡಿತ್ತು. ಬ್ಯಾಟಿಂಗ್‌ನಲ್ಲಿಯೂ ಪ್ರಮುಖರು ವೈಫಲ್ಯ ಅನುಭವಿಸಿದ್ದರು. ಭಾರತದ ಸ್ಪಿನ್ನರ್ ಮತ್ತು ಮಧ್ಯಮವೇಗಿಗಳ ರಿವರ್ಸ್ ಸ್ವಿಂಗ್ ಎದುರು ಆಡಲು ಪರದಾಡಿದ್ದರು. ಆದರೆ, ಕೆಳಕ್ರಮಾಂಕದಲ್ಲಿ ವೆರ್ನಾನ್ ಫಿಲಾಂಡರ್, ಕೇಶವ್ ಮಹಾರಾಜ್ ಮತ್ತು ಸೆನುರನ್ ಮುತ್ತುಸ್ವಾಮಿ ಅವರು ಜಿಗುಟುತನ ತೋರಿದ್ದರು. ಸುಂದರ ಬ್ಯಾಟಿಂಗ್ ಮಾಡಿ ಆತಿಥೇಯ ಬೌಲರ್‌ಗಳನ್ನು ಕಾಡಿದ್ದರು.

ಆದರೆ ಬೌಲಿಂಗ್‌ನಲ್ಲಿ ದುಬಾರಿಯಾಗಿದ್ದ ಕೇಶವ್ ಮಹಾರಾಜ್ ಮತ್ತು ಗಾಯಗೊಂಡಿರುವ ಏಡನ್ ಮಾರ್ಕರಂ ಈ ಪಂದ್ಯಕ್ಕೆ ಲಭ್ಯರಿಲ್ಲ. ಆದ್ದರಿಂದ ಯುವ ಆಟಗಾರ ಜುಬೇರ್ ಹಮ್ಜಾ ಕಣಕ್ಕಿಳಿಯುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾದ ಬೌಲರ್‌ಗಳು ಕೂಡ ಹೊಸ ತಂತ್ರಗಳೊಂದಿಗೆ ಕಣಕ್ಕಿಳಿಯುವ ಅನಿವಾರ್ಯತೆಯಲ್ಲಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್ ಮಯಂಕ್ ಅವರಿಂದ, ಕೆಳಕ್ರಮಾಂಕದ ರವೀಂದ್ರ ಜಡೇಜ ವರೆಗೂ ಬ್ಯಾಟಿಂಗ್ ಮಾಡುವ ಸಮರ್ಥರು ಇದ್ದಾರೆ. ಆದ್ದರಿಂದ ರನ್ ಹೊಳೆ ಹರಿಯುವುದನ್ನು ತಡೆಗಟ್ಟುವ ಸವಾಲು ಬೌಲರ್‌ಗಳಿಗೆ ಇದೆ. ಲುಂಗಿ ಗಿಡಿಗೆ ಅವಕಾಶ ಸಿಗಬಹುದು. ಭಾರತ ತಂಡವೂ ಒಂದೆರಡು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಗಾಯಗೊಂಡಿರುವ ಕುಲದೀಪ್ ಯಾದವ್ ಬದಲಿಗೆ ಸ್ಥಳೀಯ ಹುಡುಗ ಶಾಬಾಜ್ ನದೀಂ ಸ್ಥಾನ ಪಡೆದಿದ್ದಾರೆ. ಆದರೆ ಅವರು ಆಡುವ ಹನ್ನೊಂದರಲ್ಲಿ ಕಣಕ್ಕಿಳಿಯುವುದು ಅನುಮಾನ.

ಪಂದ್ಯ ವೀಕ್ಷಿಸಲಿರುವ ಧೋನಿ

ತಮ್ಮ ತವರೂರಿನ ಕ್ರೀಡಾಂಗಣದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯವನ್ನು ಮಹೇಂದ್ರಸಿಂಗ್ ಧೋನಿ ವೀಕ್ಷಿಸಲಿದ್ದಾರೆ.

ಐದು ವರ್ಷಗಳ ಹಿಂದೆಯೇ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಏಕದಿನ ಮತ್ತು ಟ್ವೆಂಟಿ–20 ಮಾದರಿಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಇಂಗ್ಲೆಂಡ್‌ನಲ್ಲಿ ಮೂರು ತಿಂಗಳುಗಳ ಹಿಂದೆ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು. ಅದರ ನಂತರದ ಸರಣಿಗಳಲ್ಲಿ ಅವರು ಕಣಕ್ಕಿಳಿದಿಲ್ಲ.

‘ಪಂದ್ಯದ ಮೊದಲ ದಿನವಾದ ಶನಿವಾರ ಮಹಿ ಕ್ರೀಡಾಂಗಣಕ್ಕೆ ಭೇಟಿ ನೀಡುವರು. ಪಂದ್ಯ ವೀಕ್ಷಿಸುವರು’ ಎಂದು ಅವರ ಮ್ಯಾನೇಜರ್ ದಿವಾಕರ್ ದೃಢಪಡಿಸಿದ್ದಾರೆ.

‘ಧೋನಿ ಮತ್ತು ಅವರ ಕುಟುಂಬಕ್ಕೆ ಆಮಂತ್ರಣ ಕಳಿಸಿದ್ದೇವೆ. ಈ ಕ್ರೀಡಾಂಗಣವೇ ಅವರದ್ದಲ್ಲವೇ. ಅವರಿಗೆ ಯಾವಾಗಲೂ ಸ್ವಾಗತವಿದೆ’ ಎಂದು ಜೆಕೆಸಿಎ ಅಧ್ಯಕ್ಷ ನಫೀಸ್ ಖಾನ್ ಹೇಳಿದ್ದಾರೆ. ರಾಂಚಿಯಿಂದ ಮೂವತ್ತು ಕಿಲೋಮೀಟರ್ಸ್‌ ದೂರದಲ್ಲಿರುವ ಧೋನಿ ಅವರ ಸಿಮಾಲಿಯಾ ಫಾರ್ಮ್‌ಹೌಸ್‌ನಲ್ಲಿ ನಡೆಯಲಿರುವ ಔತಣಕೂಟದಲ್ಲಿ ಭಾರತ ತಂಡದ ಆಟಗಾರರು ಪಾಲ್ಗೊಳ್ಳಲಿದ್ದಾರೆ.

ತಂಡಗಳು:
ಭಾರತ: ವಿರಾಟ್ ಕೊಹ್ಲಿ (ನಾಯಕ), ಮಯಂಕ್ ಅಗರವಾಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ(ಉಪನಾಯಕ), ಹನುಮವಿಹಾರಿ, ವೃದ್ಧಿಮಾನ್ ಸಹಾ(ವಿಕೆಟ್‌ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ ರಿಷಭ್ ಪಂತ್, ಶುಭಮನ್ ಗಿಲ್.

ದಕ್ಷಿಣ ಆಫ್ರಿಕಾ: ಫಾಫ್ ಡು ಪ್ಲೆಸಿ (ನಾಯಕ), ತೆಂಬಾ ಬವುಮಾ (ಉಪನಾಯಕ), ತಿಯಾನಿಸ್ ಡಿ ಬ್ರಯನ್, ಕ್ವಿಂಟನ್ ಡಿ ಕಾಕ್, ಡೀನ್ ಎಲ್ಗರ್, ಜುಬೇರ್ ಹಮ್ಜಾ, ಜಾರ್ಜ್ ಲಿಂಡೆ, ಸೆನುರನ್ ಮುತ್ತುಸ್ವಾಮಿ, ಲುಂಗಿ ಗಿಡಿ, ಎನ್ರಿಚ್ ನೋರ್ಟೆ, ವೆರ್ನಾನ್ ಫಿಲಾಂಡರ್, ಡೇನ್ ಪೀಟ್, ಕಗಿಸೊ ರಬಾಡ, ರೂಡಿ ಸೆಕಂಡ್.

ಪಂದ್ಯ ಆರಂಭ: ಬೆಳಿಗ್ಗೆ 9.30. ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.