ADVERTISEMENT

ವಿಶ್ವಕಪ್ ಕೂಟಕ್ಕೆ ಉಗ್ರ ಸಂಘಟನೆ ಬೆದರಿಕೆ: ಟ್ರಿನಿಡಾಡ್‌ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 6 ಮೇ 2024, 16:05 IST
Last Updated 6 ಮೇ 2024, 16:05 IST
   

ಪೋರ್ಟ್‌ ಆಫ್‌ ಸ್ಪೇನ್‌: ಜೂನ್‌ ಒಂದರಿಂದ ಅಮೆರಿಕ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಯೋತ್ಪಾದಕರಿಂದ ಬೆದರಿಕೆ ಬಂದಿದೆ ಎಂದು ಟ್ರಿನಿಡಾಡ್‌ ಪ್ರಧಾನಿ ಡಾ.ಕೀತ್‌ ರೋಲಿ ಬಹಿರಂಗಪಡಿಸಿದ್ದಾರೆ.

ಇದರ ಬೆನ್ನಲ್ಲೇ ಜೂನ್‌ 1ರಿಂದ ನಡೆಯುವ ಈ ಟೂರ್ನಿಗೆ ಸಂಭವನೀಯ ಅಪಾಯ ಎದುರಾದಲ್ಲಿ ಅದನ್ನು ನಿಭಾಯಿಸಲು ಸಮಗ್ರ ಮತ್ತು ಸಶಕ್ತವಾದ ಭದ್ರತಾ ಯೋಜನೆ’ ಸಿದ್ಧಗೊಳಿಸಲಾಗಿದೆ ಎಂದು ಐಸಿಸಿ ಪ್ರತಿಪಾದಿಸಿದೆ.

ಟೂರ್ನಿಯಲ್ಲಿ ಭಾರತ ಸೇರಿದಂತೆ 20 ತಂಡಗಳು ಭಾಗವಹಿಸುತ್ತಿವೆ. ಅಮೆರಿಕ, ವೆಸ್ಟ್‌ ಇಂಡೀಸ್‌ಗೆ ಸೇರಿದ ಒಟ್ಟು 9 ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಇವುಗಳಲ್ಲಿ ಆರು ಕ್ರೀಡಾಂಗಣಗಳು ವೆಸ್ಟ್‌ ಇಂಡೀಸ್‌ನಲ್ಲಿವೆ.

ADVERTISEMENT

ಮಾಧ್ಯಮ ವರದಿಗಳ ಪ್ರಕಾರ ಈಗ ಬಂದಿರುವ ಭಯೋತ್ಪಾದನೆ ಬೆದರಿಕೆ ವೆಸ್ಟ್‌ ಇಂಡೀಸ್‌ಗೆ ಸೀಮಿತವಾಗಿದೆ. ವೆಸ್ಟ್‌ ಇಂಡೀಸ್‌ನಲ್ಲಿ ಕೆಲವು ಪ್ರಾಥಮಿಕ ಹಂತದ ಪಂದ್ಯಗಳ ಜೊತೆ, ಸೂಪರ್ ಎಂಟು ಹಂತದ ಎಲ್ಲ ಪಂದ್ಯಗಳು, ಸೆಮಿಫೈನಲ್ ಮತ್ತು 29ರಂದು ಫೈನಲ್ ನಿಗದಿಯಾಗಿದೆ.

ರೋಲಿ ಅವರು ಯಾವುದೇ ಉಗ್ರ ಸಂಘಟನೆಯ ಹೆಸರನ್ನು ಹೇಳಲಿಲ್ಲ. ಆದರೆ, ಇಸ್ಲಾಮಿಕ್ ಸ್ಟೇಟ್‌ ತನ್ನ ಸಿದ್ಧಾಂತ ಪ್ರಚಾರಕ್ಕೆ ಬಳಸುವ ಚಾನೆಲ್‌ ಮೂಲಕ ಬೆದರಿಕೆಯೊಡ್ಡಿದೆ ಎಂದು ವರದಿಗಳು ತಿಳಿಸಿವೆ.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಐಸಿಸಿ, ಹೇಳಿಕೆಯೊಂದರ ಮೂಲಕ ಸನ್ನದ್ಧವಾಗಿರುವ ಭರವಸೆ ನೀಡಿದೆ.

‘ವಿಶ್ವಕಪ್‌ನಲ್ಲಿ ಭಾಗಿಯಾಗುವ ಪ್ರತಿಯೊಬ್ಬರ ರಕ್ಷಣೆ ಮತ್ತು ಭದ್ರತೆ ಒದಗಿಸುವುದು ನಮ್ಮ ಮೊದಲ ಆದ್ಯತೆ. ಈ ಬಗ್ಗೆ ಸಮಗ್ರವಾದ ಮತ್ತು ಸಶಕ್ತಾದ ಭದ್ರತಾ ಯೋಜನೆ ರೂಪಿಸಲಾಗುತ್ತಿದೆ’ ಎಂದು ಐಸಿಸಿಯ ವಕ್ತಾರರು ಸುದ್ದಿಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಆತಿಥೇಯ ರಾಷ್ಟ್ರಗಳ ಅಧಿಕಾರಿಗಳ ಜೊತೆ ನಾವು ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಈ ಬಗ್ಗೆ ನಿಗಾ ವಹಿಸುತ್ತಿದ್ದೇವೆ. ಯಾವುದೇ ಅಪಾಯ ಎದುರಾದಲ್ಲಿ ಅದನ್ನು ಮೆಟ್ಟಿನಿಲ್ಲಲು ಸೂಕ್ತ ಯೋಜನೆಗಳನ್ನು ರೂಪಿಸುತ್ತಿದ್ದೇವೆ’ ಎಂದಿದ್ದಾರೆ.

ವೆಸ್ಟ್‌ ಇಂಡೀಸ್‌ನ ಆ್ಯಂಟೀಗಾ, ಬಾರ್ಬುಡಾ, ಬಾರ್ಬಡೋಸ್‌, ಗಯಾನಾ, ಸೇಂಟ್‌ ಲೂಸಿಯಾ, ಸೇಂಟ್‌ ವಿನ್ಸೆಂಟ್ ಮತ್ತು ಗ್ರೆನೆಡಾ, ಟ್ರಿನಿಡಾಡ್ ಮತ್ತು ಟೊಬ್ಯಾಗೊದಲ್ಲಿ ಪಂದ್ಯಗಳು ನಡೆಯಲಿವೆ. ಅಮೆರಿಕದ ಪಂದ್ಯಗಳು ಫ್ಲಾರಿಡಾ, ನ್ಯೂಯಾರ್ಕ್‌, ಟೆಕ್ಸಾಸ್‌ನಲ್ಲಿ ನಡೆಯಲಿವೆ.

ಭಾರತ– ಪಾಕಿಸ್ತಾನ ನಡುವಣ ಪಂದ್ಯ ಜೂನ್‌ 9ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.

‘ವಿಶ್ವಕಪ್‌ ಕೂಟಕ್ಕೆ ಭದ್ರತೆ ಒದಗಿಸಲು ಸಾಧ್ಯವಾಗುವ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲಾಗುವುದು ಎಂದು ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.