ನವದೆಹಲಿ (ಪಿಟಿಐ): ಕನ್ನಡಿಗ ಕರುಣ್ ನಾಯರ್ ತಮಗೆ ಒದಗಿದ ಅವಕಾಶದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ದರು. ಆದರೆ, ಅವರ ನಿರ್ಗಮನದ ಬಳಿಕ ಮೇಲುಗೈ ಪಡೆದ ಮುಂಬೈ ಇಂಡಿಯನ್ಸ್ ತಂಡವು ಭಾನುವಾರ ನಡೆದ ಐಪಿಎಲ್‌ನ ಹೋರಾಟದ ಪಂದ್ಯದಲ್ಲಿ 12 ರನ್‌ಗಳ ರೋಚಕ ಜಯ ಪಡೆಯಿತು.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 206 ರನ್‌ಗಳ ಗುರಿಯನ್ನು ಪಡೆದಿದ್ದ ಡೆಲ್ಲಿ ತಂಡವು ಒಂದು ಹಂತದಲ್ಲಿ 10 ಓವರ್‌ಗಳಲ್ಲೇ 1 ವಿಕೆಟ್‌ಗೆ 113 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ದೇಶಿಯ ಕ್ರಿಕೆಟ್‌ನಲ್ಲಿ ರನ್ ಹೊಳೆ ಹರಿಸಿದ್ದ ಕರುಣ್ ಈ ಬಾರಿ ದೊರೆತ ಮೊದಲ ಅವಕಾಶದಲ್ಲೇ ಮಿಂಚಿದರು. ಅವರು 40 ಎಸೆತಗಳಲ್ಲಿ 89 ರನ್ ಸೂರೆ ಮಾಡಿದರು. ಅದರಲ್ಲಿ 12 ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್ ಒಳಗೊಂಡಿತ್ತು.
ಮಿಚೆಲ್ ಸ್ಯಾಂಟನರ್ ಹಾಕಿದ 12ನೇ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಕರುಣ್ ಕ್ಲೀನ್‌ಬೌಲ್ಡ್ ಆದರು. ಈ ಮಧ್ಯೆ ಸ್ಪಿನ್ನರ್ ಕರ್ಣ ಶರ್ಮಾ ಅವರು ಮೂವರು ಬ್ಯಾಟರ್‌ಗಳಿಗೆ ಪೆವಿಲಿಯನ್ ದಾರಿ ತೋರಿಸಿದ್ದರಿಂದ ಮುಂಬೈ ತಂಡ ಹಿಡಿತ ಸಾಧಿಸಿತು. ಕೊನೆಯ 58 ರನ್‌ಗಳ ಅಂತರದಲ್ಲಿ ಎಂಟು ವಿಕೆಟ್ ಪತನವಾದವು. ಹೀಗಾಗಿ, 19 ಓವರ್‌ಗಳಲ್ಲಿ 193 ರನ್ ಗಳಿಸಿ ಡೆಲ್ಲಿ ತಂಡವು ಹೋರಾಟವನ್ನು ಮುಗಿಸಿತು.
ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಅಜೇಯವಾಗಿದ್ದ ಅಕ್ಷರ್ ಪಟೇಲ್ ಬಳಗಕ್ಕೆ ಇದು ಈ ಐಪಿಎಲ್ ಆವೃತ್ತಿಯಲ್ಲಿ ಮೊದಲ ಸೋಲು. ಹಾರ್ದಿಕ್ ಪಾಂಡ್ಯ ಬಳಗಕ್ಕೆ ಇದು ಆರು ಪಂದ್ಯಗಳಲ್ಲಿ ಎರಡನೇ ಜಯವಾಗಿದೆ.
ತಿಲಕ್ ವರ್ಮಾ ಆಸರೆ: ಇದಕ್ಕೂ ಮೊದಲು ತಿಲಕ್ ವರ್ಮಾ (59; 33ಎ, 4X6, 6X3) ಅವರ ಅಬ್ಬರದ ಅರ್ಧಶತಕದ ಬಲದಿಂದ ಮುಂಬೈ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 205 ರನ್ ಗಳಿಸಿತು.
ರೋಹಿತ್ ಶರ್ಮಾ (18; 12ಎ, 4X2, 6X1) ಮತ್ತು ರಿಯಾನ್ ರಿಕೆಲ್ಟನ್ (41; 25ಎ, 4X5, 6X2) ಅವರು ಮೊದಲ ವಿಕೆಟ್‌ಗೆ 47 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ರಿಕೆಲ್ಟನ್ (41; 25ಎ) ಮತ್ತು ಸೂರ್ಯಕುಮಾರ್ ಯಾದವ್ (40; 28ಎ) ಎರಡನೇ ವಿಕೆಟ್ ಜೊತೆಯಾಟದಲ್ಲಿ 28 ರನ್ ಸೇರಿಸಿದರು. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಎಸೆತದಲ್ಲಿ ರಿಕೆಲ್ಟನ್ ಕ್ಲೀನ್‌ಬೌಲ್ಡ್ ಆದಾಗ ವರ್ಮಾ ಕ್ರೀಸ್‌ಗೆ ಬಂದರು. ಯಾದವ್ ಜೊತೆಗೆ ಅವರು 3ನೇ ವಿಕೆಟ್ ಜೊತೆಯಾಟದಲ್ಲಿ 60 ರನ್ ಸೇರಿಸಿದರು. ಇದು ತಂಡವು ದೊಡ್ಡ ಮೊತ್ತ ಗಳಿಸಲು ನೆರವಾಯಿತು.
ಕೊನೆಯ ಹಂತದಲ್ಲಿ ನಮನ್ ಧೀರ್ (38; 17ಎ, 4X3, 6X2) ಕೂಡ ಮಿಂಚಿದರು. ಅವರು ವರ್ಮಾ ಜೊತೆಗೂಡಿ 4ನೇ ವಿಕೆಟ್ ಗೆ 60 ರನ್ ಸೇರಿಸಿದರು.
ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 5ಕ್ಕೆ205 (ರಿಯಾನ್ ರಿಕೆಲ್ಟನ್ 41, ಸೂರ್ಯಕುಮಾರ್ ಯಾದವ್ 40, ತಿಲಕ್ ವರ್ಮಾ 59, ನಮನ್ ಧೀರ್ ಔಟಾಗದೇ 38, ವಿಪ್ರಜ್ ನಿಗಂ 41ಕ್ಕೆ2, ಕುಲದೀಪ್ ಯಾದವ್ 23ಕ್ಕೆ2). ಡೆಲ್ಲಿ ಕ್ಯಾಪಿಟಲ್ಸ್: 19 ಓವರ್‌ಗಳಲ್ಲಿ 193 (ಅಭಿಷೇಕ್ ಪೊರೆಲ್ 33, ಕರುಣ್ ನಾಯರ್ 89; ಮಿಚೆಲ್ ಸ್ಯಾಂಟನರ್ 43ಕ್ಕೆ 2, ಕರ್ಣ ಶರ್ಮಾ 36ಕ್ಕೆ 3). ಪಂದ್ಯದ ಆಟಗಾರ: ಕರ್ಣ ಶರ್ಮಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.