ADVERTISEMENT

ರಾಹುಲ್ ನಾಯಕತ್ವಕ್ಕೆ ಕಠಿಣ ‘ಟೆಸ್ಟ್’

ವಿಶ್ವ ಟೆಸ್ಟ್ ಫೈನಲ್ ಕನಸಿಗೆ ಬಲ ತುಂಬಲು ಬಾಂಗ್ಲಾ ಎದುರು ಜಯ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2022, 20:53 IST
Last Updated 13 ಡಿಸೆಂಬರ್ 2022, 20:53 IST
ಭಾರತ ತಂಡದ ವಿರಾಟ್ ಕೊಹ್ಲಿ ಮತ್ತು ಸಹ ಆಟಗಾರರು ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ
ಭಾರತ ತಂಡದ ವಿರಾಟ್ ಕೊಹ್ಲಿ ಮತ್ತು ಸಹ ಆಟಗಾರರು ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ   

ಚಿತ್ತೋಗ್ರಾಮ, ಬಾಂಗ್ಲಾ(ಪಿಟಿಐ): ಭಾರತ ಕ್ರಿಕೆಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ತಲುಪಬೇಕಾದರೆ ತಾನು ಆಡಲಿರುವ ಮುಂದಿನ ಆರು ಪಂದ್ಯಗಳಲ್ಲಿ ಜಯಿಸಬೇಕಾದ ಒತ್ತಡದಲ್ಲಿದೆ.

ಈ ಹಾದಿಯ ಮೊದಲ ಸವಾಲು ಬುಧವಾರದಿಂದ ಆರಂಭವಾಗಲಿರುವ ಬಾಂಗ್ಲಾದೇಶ ಎದುರಿನ ಎರಡು ಪಂದ್ಯಗಳು ಮತ್ತು ಮುಂದಿನ ವರ್ಷ ಆಸ್ಟ್ರೇಲಿಯಾ ಎದುರಿನ ಸರಣಿಯ ನಾಲ್ಕು ಪಂದ್ಯಗಳು ಭಾರತಕ್ಕೆ ಮಹತ್ವದ್ದಾಗಿವೆ.

ಸದ್ಯ ಭಾರತ ತಂಡವು ಡಬ್ಲ್ಯಟಿಸಿ ಅಂಕಪಟ್ಟಿಯಲ್ಲಿ (52.08% ಪಾಯಿಂಟ್) ನಾಲ್ಕನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ (75%), ದಕ್ಷಿಣ ಆಫ್ರಿಕಾ (60%) ಹಾಗೂ ಶ್ರೀಲಂಕಾ (64%) ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ. ಭಾರತವು ತನ್ನ ತವರಿನಂಗಳದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಎದುರು ಸರಣಿಯಲ್ಲಿ ಕ್ಲೀನ್‌ಸ್ವೀಪ್ ಮಾಡಿದರೆ ಅವಕಾಶ ಗಿಟ್ಟಿಸಲಿದೆ. ಅದಕ್ಕೂ ಮುನ್ನ ಬಾಂಗ್ಲಾ ಎದುರಿನ ಸರಣಿಯನ್ನೂ ಜಯಿಸುವುದು ಕೂಡ ಮುಖ್ಯವಾಗಿದೆ.

ADVERTISEMENT

ಕಳೆದ ಏಕದಿನ ಸರಣಿಯಲ್ಲಿ ಗಾಯಗೊಂಡು ಹೊರಬಿದ್ದಿರುವ ರೋಹಿತ್ ಶರ್ಮಾ ಬದಲಿಗೆ ಬಾಂಗ್ಲಾ ಎದುರಿನ ಸರಣಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವ ವಹಿಸಲಿದ್ದಾರೆ. ವೇಗಿ ಜಸ್‌ಪ್ರೀತ್ ಬೂಮ್ರಾ, ಆಲ್‌ರೌಂಡರ್ ರವೀಂದ್ರ ಜಡೇಜ ಅವರೂ ಅಲಭ್ಯರಾಗಿದ್ದಾರೆ. ಆದ್ದರಿಂದ ರಾಹುಲ್ ಹೊಣೆ ಹೆಚ್ಚಿದೆ.

‘ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ತಲುಪುವ ಹಾದಿ ಸವಾಲಿನದ್ದಾಗಿದೆ. ಆದ್ದರಿಂದ ನಾವು ಆಕ್ರಮಣಶೀಲ ಆಟವಾಡುವುದು ಮುಖ್ಯವಾಗಿದೆ. ಇದಕ್ಕಾಗಿ ನಮ್ಮ ಪ್ರದರ್ಶನ ಹೇಗಿರಬೇಕು ಎಂಬ ಅರಿವು ಇದೆ. ಅದಕ್ಕೆ ತಕ್ಕಂತೆ ಆಡುವ ವಿಶ್ವಾಸವೂ ಇದೆ’ ಎಂದು ರಾಹುಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ರಾಹುಲ್ ತಮ್ಮ ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಲಯ ಕಂಡುಕೊಳ್ಳಬೇಕಾದ ಅವಶ್ಯಕತೆ ಇದೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಲಯ ಕಂಡುಕೊಂಡಿರುವ ವಿರಾಟ್ ಕೊಹ್ಲಿ ದೀರ್ಘ ಮಾದರಿಯಲ್ಲಿಯೂ ತಮ್ಮ ಹಳೆಯ ವೈಭವಕ್ಕೆ ಮರಳುವ ಭರವಸೆ ಮೂಡಿಸಿದ್ದಾರೆ. ಮರಳಿ ಸ್ಥಾನ ಪಡೆದುಕೊಂಡಿರುವ ಚೇತೇಶ್ವರ್ ಪೂಜಾರ ಅವರಿಗೂ ಈ ಸರಣಿಯು ಪರೀಕ್ಷೆಯೇ ಆಗಿದೆ.

ಯುವ ಆಟಗಾರರಾದ ಅಭಿಮನ್ಯು ಈಶ್ವರನ್, ಶುಭಮನ್ ಗಿಲ್ ಮತ್ತು ಬೌಲರ್ ಸೌರಭ್ ಕುಮಾರ್ ತಮಗೆ ಲಭಿಸುವ ಅವಕಾಶವನ್ನು ಫಲಪ್ರದಗೊಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಸುಮಾರು ಒಂದು ದಶಕದ ನಂತರ ಟೆಸ್ಟ್ ತಂಡಕ್ಕೆ ಮರಳಿರುವ ಎಡಗೈ ಮಧ್ಯಮವೇಗಿ ಜೈದೇವ್ ಉನದ್ಕತ್ ಅವರಿಂದಲೂ ನಿರೀಕ್ಷೆ ಮೂಡಿದೆ.

ಭಾರತ ತಂಡವು ಬಾಂಗ್ಲಾದೇಶ ಎದುರು ಆಡಿರುವ 11 ಪಂದ್ಯಗಳಲ್ಲಿ ಒಂಬತ್ತರಲ್ಲಿ ಜಯಿಸಿದೆ. ಎರಡು ಡ್ರಾ ಆಗಿವೆ. ಈ ಅಜೇಯ ಓಟವನ್ನು ಮುಂದುವರಿಸುವ ಛಲದಲ್ಲಿ ಪ್ರವಾಸಿ ಬಳಗವಿದೆ. ಆದರೆ ಏಕದಿನ ಸರಣಿಯನ್ನು ಗೆದ್ದಿರುವ ವಿಶ್ವಾಸದಲ್ಲಿರುವ ಆತಿಥೇಯ ತಂಡವು ಭಾರತ ತಂಡದ ಓಟಕ್ಕೆ ತಡೆಯೊಡ್ಡುವತ್ತ ಚಿತ್ತ ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.