ADVERTISEMENT

ಬಯೋಬಬಲ್ ಒಂದು ಅವಕಾಶ: ವೆಂಕಟಪತಿ ರಾಜು

ಸಕಾರಾತ್ಮಕ ಯೋಚನೆಯಿಂದ ಮಾತ್ರ ಮಾನಸಿಕ ಸಬಲತೆ ಸಾಧ್ಯ: ವೆಂಕಟಪತಿ ರಾಜು

ಗಿರೀಶದೊಡ್ಡಮನಿ
Published 11 ಆಗಸ್ಟ್ 2021, 19:30 IST
Last Updated 11 ಆಗಸ್ಟ್ 2021, 19:30 IST
ವೆಂಕಟಪತಿ ರಾಜು
ವೆಂಕಟಪತಿ ರಾಜು   

ಬೆಂಗಳೂರು: ಆಟಗಾರರು ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಸಕಾರಾತ್ಮಕವಾಗಿ ಯೋಚನೆ ಮಾಡುವುದು ಅಗತ್ಯ. ಈ ಕ್ಲಿಷ್ಟಕರ ಸಮಯದಲ್ಲಿಯೂ ಆಡುವ ಅವಕಾಶ ಸಿಗುತ್ತಿದೆಯೆನ್ನುವುದನ್ನು ಪರಿಗಣಿಸಿ ಕಣಕ್ಕಿಳಿದರೆ ಉತ್ತಮವಾಗಿ ಆಡಲು ಸಾಧ್ಯವಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ವೆಂಕಟಪತಿರಾಜು ಅಭಿಪ್ರಾಯಪಟ್ಟರು.

ಗುರುವಾರ ಆರಂಭವಾಗಲಿರುವ ಭಾರತ–ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ‘ಪ್ರಜಾವಾಣಿ’ ಯೊಂದಿಗೆ ರಾಜು ಮಾತನಾಡಿದರು.

‘ಬಯೋಬಬಲ್ ಎಂಬುದು ಇನ್ನೂ ಹಲವು ವರ್ಷಗಳವರೆಗೆ ನಾವು ಪಾಲಿಸಬೇಕಾದ ನಿಯಮವಾಗಿದೆ. ಅದಕ್ಕೆ ನಾವು ಹೊಂದಿಕೊಂಡು ಬಿಡಬೇಕು. ನವವಾಸ್ತವವನ್ನು ಒಪ್ಪಿಕೊಂಡು, ಆಟದತ್ತ ಗಮನ ಹರಿಸಬೇಕು. ಈ ಸ್ಥಿತಿಯನ್ನು ಒತ್ತಡ ಎಂದುಕೊಳ್ಳದೇ ಅವಕಾಶವೆಂದು ಪರಿಗಣಿಸಬೇಕು. ಮನೆಯಲ್ಲಿ ಕೂರುವ ಬದಲು ಆಡುವ ಅವಕಾಶಗಳನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಚೇತೇಶ್ವರ್ ಪೂಜಾರ ಮತ್ತು ಇನ್ನೂ ಕೆಲವು ಬ್ಯಾಟ್ಸ್‌ಮನ್‌ಗಳಿಗೆ ಬಯೋಬಬಲ್‌ನಿಂದಾಗಿ ಹೆಚ್ಚು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಅವರ ಸ್ಥಿರತೆ ಸ್ವಲ್ಪ ಏರುಪೇರಾಗಿದೆ. ಅವರು ಒಂದೊಮ್ಮೆ ಲಯಕ್ಕೆ ಮರಳಿದರೆ ತಂಡದ ಬ್ಯಾಟಿಂಗ್ ಬಲಿಷ್ಠವಾಗುತ್ತದೆ‘ ಎಂದು ಮಾಜಿ ಎಡಗೈ ಸ್ಪಿನ್ನರ್ ರಾಜು ಹೇಳಿದರು.

‘ರವೀಂದ್ರ ಜಡೇಜ ತಂಡದಲ್ಲಿ ಸ್ಥಾನ ಪಡೆದಿರುವುದು ಎಡಗೈ ಸ್ಪಿನ್ನರ್ ಆಗಿ. ಆದರೆ, ತಮ್ಮ ಬ್ಯಾಟಿಂಗ್ ಮೂಲಕ ಅವರು ತಂಡಕ್ಕೆ ಬಹಳ ಮಹತ್ವದ ಕಾಣಿಕೆ ಕೊಡುತ್ತಿದ್ದಾರೆ. ಏಳು ಮತ್ತು ಎಂಟನೇ ಕ್ರಮಾಂಕದಲ್ಲಿ ಬಂದು ರನ್‌ಗಳ ಕಾಣಿಕೆ ಕೊಡುವುದು ಸುಲಭವಲ್ಲ. ಇದು ಭಾರತಕ್ಕೆ ಬೋನಸ್‌. ಸ್ವದೇಶದಲ್ಲಿ ಆಡುವಾಗ ಸ್ಪಿನ್ನರ್‌ಗಳಿಗೆ ಪಿಚ್ ನೆರವು ಹೆಚ್ಚಾಗಿ ಸಿಗುತ್ತದೆ. ಆದ್ದರಿಂದ ಇಬ್ಬರು, ಮೂವರು ಸ್ಪಿನ್ನರ್‌ಗಳು ಆಡುತ್ತಾರೆ. ಆದರೆ, ಇಂಗ್ಲೆಂಡ್‌ನಲ್ಲಿ ಮಧ್ಯಮವೇಗಿಗಳಿಗೆ ಹೆಚ್ಚು ನೆರವು ನೀಡುವ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳು ವಿಕೆಟ್ ಗಳಿಸುವುದು ಕಷ್ಟ. ಆದರೆ, ವೇಗಿಗಳಿಗೆ ಮಧ್ಯದಲ್ಲಿ ನೆರವು ನೀಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ’ ಎಂದರು.

‘ಮೊದಲ ಪಂದ್ಯದಲ್ಲಿ ಮಳೆಯಿಂದಾಗಿ ನಮಗೆ ಫಲಿತಾಂಶ ಸಿಗಲಿಲ್ಲ. ಆದರೆ ಆ ಪಂದ್ಯದಲ್ಲಿ ಭಾರತವು ಎಲ್ಲ ಸೆಷನ್‌ಗಳಲ್ಲಿಯೂ ಉತ್ತಮವಾಗಿ ಆಡಿತ್ತು. ಕೊನೆಯಲ್ಲಿ ಜಯದ ಅವಕಾಶವೂ ಇತ್ತು. ಜಸ್‌ಪ್ರೀತ್ ಬೂಮ್ರಾ ತಮ್ಮ ಗಾಯದಿಂದ ಚೇತರಿಸಿಕೊಂಡು ಲಯಕ್ಕೆ ಮರಳಿರುವುದು ಬಹಳ ಸಂತಸದ ಸಂಗತಿ’ ಎಂದರು.

‘ಐಸಿಸಿಯ ವಾರ್ಷಿಕ ಕ್ಯಾಲೆಂಡರ್ ದಟ್ಟಣೆಯಿಂದ ಕೂಡಿದೆ. ಆದ್ದರಿಂದ ಎಲ್ಲ ಟೆಸ್ಟ್‌ ಪಂದ್ಯಗಳಿಗೆ ಕಾಯ್ದಿಟ್ಟ ದಿನ (ಆರನೇ ದಿನ) ನೀಡಲು ಸಾಧ್ಯವಾಗುವುದಿಲ್ಲ. ಡಬ್ಲ್ಯುಟಿಸಿ ಫೈನಲ್‌ನಂತಹ ಪಂದ್ಯದಲ್ಲಿ ಮೀಸಲು ದಿನ ಇರುವುದು ಸೂಕ್ತ’ ಎಂದು ರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.