ADVERTISEMENT

ಡಬ್ಲ್ಯುಸಿಎಲ್‌ | ಭವಿಷ್ಯದಲ್ಲಿ ತಂಡದ ಸ್ಪರ್ಧೆಗೆ ಪಿಸಿಬಿ ನಿಷೇಧ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 14:13 IST
Last Updated 3 ಆಗಸ್ಟ್ 2025, 14:13 IST
ಪಿಸಿಬಿ
ಪಿಸಿಬಿ   

ಲಾಹೋರ್‌: ಭವಿಷ್ಯದಲ್ಲಿ ವಿಶ್ವ ಲೆಜೆಂಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಸಿಎಲ್‌) ತನ್ನ ಆಟಗಾರರು ಭಾಗವಹಿಸುವುದಕ್ಕೆ ಸಂಪೂರ್ಣ ನಿಷೇಧ ಹೇರುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾನುವಾರ ಪ್ರಕಟಿಸಿದೆ. ಆಯೋಜಕರು ಪೂರ್ವಗ್ರಹಪೀಡಿತರಾಗಿದ್ದು,  ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ ಎಂದು ದೂರಿದೆ.

ಇಂಗ್ಲೆಂಡ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ನಡೆದ ಘಟನಾವಳಿಗಳ ನಂತರ ಈ ನಿರ್ಧಾರಕ್ಕೆ ಬಂದಿದೆ. ಪಾಕಿಸ್ತಾನ ತಂಡವ ವಿರುದ್ಧ ಗುಂಪು ಹಂತದ ಮತ್ತು ಸೆಮಿಫೈನಲ್‌ ಪಂದ್ಯವನ್ನು ಆಡಲು ಭಾರತ ತಂಡವು ನಿರಾಕರಿಸಿತ್ತು. ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ನಡೆದ ನಂತರ ದ್ವಿಪಕ್ಷೀಯ ಕ್ರೀಡಾ ಸಂಬಂಧದಲ್ಲಿ ದೇಶದ ನಿಲುವನ್ನು ಬೆಂಬಲಿಸಿ ಭಾರತ ತಂಡ ಆಡಲು ನಿರಾಕರಿಸಿತ್ತು. 

ಭವಿಷ್ಯದಲ್ಲಿ ವಿಶ್ವ ಲೆಜೆಂಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ತನ್ನ ತಂಡ ಭಾಗವಹಿಸುವುದಕ್ಕೆ ನಿಷೇಧ ಹೇರುವುದಾಗಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಹೇಳಿಕೆಯಲ್ಲಿ ತಿಳಿಸಿದೆ. ಮೊಹ್ಸಿನ್ ನಕ್ವಿ ಅಧ್ಯಕ್ಷತೆಯಲ್ಲಿ ವರ್ಚುವಲ್ ಆಗಿ ನಡೆದ ಮಂಡಳಿಯ ಆಡಳಿತ ನಿರ್ದೇಶಕರ ಸಭೆಯ ನಂತರ ಈ ಹೇಳಿಕೆ ನೀಡಿದೆ.

ADVERTISEMENT

ಗುಂಪು ಹಂತದಲ್ಲಿ ತಮ್ಮ ತಂಡದ ವಿರುದ್ಧ ಪಂದ್ಯ ಆಡಲು ನಿರಾಕರಿಸಿದರೂ ಭಾರತಕ್ಕೆ ಅಂಕ ನೀಡುವ ಡಬ್ಲ್ಯುಸಿಎಲ್‌ ನಿರ್ಧಾರಕ್ಕೆ ಪಿಸಿಬಿ ಬಲವಾದ ಆಕ್ಷೇಪ ವ್ಯಕ್ತಪಡಿಸಿದೆ. ಆಯೋಜಕರ  ನಿರ್ಧಾರ ಬೂಟಾಟಿಕೆ ಮತ್ತು ಪಕ್ಷಪಾತದಿಂದ ಕೂಡಿದೆ ಎಂದು ಟೀಕಿಸಿದೆ.

ಗುಂಪು ಹಂತದಲ್ಲಿ ಪಾಕ್ ವಿರುದ್ಧ ಆಡುವುದಕ್ಕೆ ಶಿಖರ್ ಧವನ್, ಯುವರಾಜ್ ಸಿಂಗ್, ಇರ್ಫಾನ್‌ ಪಠಾನ್‌, ಸುರೇಶ್ ರೈನಾ, ಹರಭಜನ್ ಸಿಂಗ್ ಅವರನ್ನು ಒಳಗೊಂಡ ತಂಡ ನಿರಾಕರಿಸಿತ್ತು. ಪಹಲ್ಗಾಮ್ ಹತ್ಯಾಕಾಂಡ ಮತ್ತು ಸಿಂಧೂರ ಕಾರ್ಯಾಚರಣೆ ನಂತರ ದೇಶದ ಭಾವನೆಗಳನ್ನು ಗೌರವಿಸಿ ಪಾಕ್ ವಿರುದ್ಧ ಆಡದಿರಲು ನಿರ್ಧರಿಸಿರುವುದಾಗಿ ಆಟಗಾರರು ತಿಳಿಸಿದ್ದರು.

ಸೆಮಿಫೈನಲ್‌ನಲ್ಲಿ ಭಾರತ ಹಿಂದೆಸರಿದ ನಂತರ ಪಾಕಿಸ್ತಾನ ನೇರವಾಗಿ ಫೈನಲ್ ತಲುಪಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.