ADVERTISEMENT

ಟಿ20: ವಿಂಡೀಸ್‌ಗೆ ಮಣಿದ ಆಸ್ಟ್ರೇಲಿಯಾ

ಏಜೆನ್ಸೀಸ್
Published 10 ಜುಲೈ 2021, 14:41 IST
Last Updated 10 ಜುಲೈ 2021, 14:41 IST
ಆ್ಯಂಡ್ರೆ ರಸೆಲ್‌– ಎಎಫ್‌ಪಿ ಚಿತ್ರ
ಆ್ಯಂಡ್ರೆ ರಸೆಲ್‌– ಎಎಫ್‌ಪಿ ಚಿತ್ರ   

ಗ್ರಾಸ್‌ ಐಲೆಟ್‌, ಸೇಂಟ್ ಲೂಸಿಯಾ: ಬ್ಯಾಟಿಂಗ್‌ನಲ್ಲಿ ದಿಢೀರ್ ವೈಫಲ್ಯ ಅನುಭವಿಸಿದ ಆಸ್ಟ್ರೇಲಿಯಾ ತಂಡವು ವೆಸ್ಟ್ ಇಂಡೀಸ್‌ ಎದುರಿನ ಮೊದಲ ಟ್ವೆಂಟಿ ಪಂದ್ಯದಲ್ಲಿ 18 ರನ್‌ಗಳಿಂದ ಸೋತಿತು.

ಶುಕ್ರವಾರ ಇಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಹಣಾಹಣಿಯಲ್ಲಿ ಮೊದಲು ಬ್ಯಾಟ್‌ ಮಾಡಿದ ಆತಿಥೇಯ ವಿಂಡೀಸ್ ಆರು ವಿಕೆಟ್‌ಗೆ 145 ರನ್ ಕಲೆಹಾಕಿತು. ಆ್ಯಂಡ್ರೆ ರಸೆಲ್‌ (51, 28 ಎಸೆತ) ಹಾಗೂ ಲೆಂಡ್ಲ್ ಸಿಮನ್ಸ್ (27) ಅವರು ತಂಡವು ಸವಾಲಿನ ಮೊತ್ತ ಗಳಿಸಲು ಕಾರಣರಾದರು.

ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 3 ವಿಕೆಟ್‌ಗೆ 70 ರನ್‌ ಗಳಿಸಿ ಜಯದ ಹಾದಿಯಲ್ಲಿತ್ತು. ಬಳಿಕ 19 ರನ್‌ಗಳಿಗೆ ಆರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಂತಿಮವಾಗಿ 16 ಓವರ್‌ಗಳಲ್ಲಿ 127 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ವೆಸ್ಟ್ ಇಂಡೀಸ್ ತಂಡದ ಒಬೆದ್‌ ಮೆಕಾಯ್‌ (26ಕ್ಕೆ 4) ಹಾಗೂ ಹೇಡನ್ ವಾಲ್ಷ್‌ (23ಕ್ಕೆ 3) ಪ್ರವಾಸಿ ತಂಡದ ಕುಸಿತಕ್ಕೆ ಕಾರಣರಾದರು.

ADVERTISEMENT

ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಷ್‌ ದಾಖಲಿಸಿದ ಅರ್ಧಶತಕ (51) ವ್ಯರ್ಥವಾಯಿತು.

ಈ ಪಂದ್ಯ ಆರಂಭಕ್ಕೂ ಮೊದಲು ಎರಡೂ ತಂಡಗಳ ಆಟಗಾರರು, ಜನಾಂಗೀಯ ನಿಂದನೆ ಮತ್ತು ತಾರತಮ್ಯ ವಿರೋಧಿ ಅಭಿಯಾನಕ್ಕೆ ಮೊಣಕಾಲೂರಿ ನಿಲ್ಲುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್ ಇಂಡೀಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 145 (ಆ್ಯಂಡ್ರೆ ರಸೆಲ್‌ 51, ಲೆಂಡ್ಲ್ ಸಿಮನ್ಸ್ 27, ಶಿಮ್ರಾನ್ ಹೆಟ್ಮೆಯರ್‌ 20; ಜೋಶ್ ಹ್ಯಾಜಲ್‌ವುಡ್‌ 12ಕ್ಕೆ 3, ಮಿಚೆಲ್ ಮಾರ್ಷ್‌ 26ಕ್ಕೆ 2) ಆಸ್ಟ್ರೇಲಿಯಾ: 16 ಓವರ್‌ಗಳಲ್ಲಿ 127 (ಮಿಚೆಲ್ ಮಾರ್ಷ್‌ 51, ಮ್ಯಾಥ್ಯು ವೇಡ್‌ 33; ಒಬೆದ್‌ ಮೆಕಾಯ್‌ 26ಕ್ಕೆ 4, ಹೇಡನ್ ವಾಲ್ಷ್‌ 23ಕ್ಕೆ 3, ಫ್ಯಾಬಿಯೆನ್ ಅಲೆನ್‌ 24ಕ್ಕೆ 2). ಫಲಿತಾಂಶ: ವೆಸ್ಟ್ ಇಂಡೀಸ್ ತಂಡಕ್ಕೆ 18 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.