ADVERTISEMENT

ಏನಾಯಿತು ಶಾಲಾ ಕ್ರಿಕೆಟ್‌ ಟೂರ್ನಿಗೆ?

ಪ್ರಮೋದ ಜಿ.ಕೆ
Published 4 ಡಿಸೆಂಬರ್ 2018, 20:00 IST
Last Updated 4 ಡಿಸೆಂಬರ್ 2018, 20:00 IST
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ 19 ವರ್ಷದ ಒಳಗಿನವರ ಕೂಚ್‌ ಬೆಹಾರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕರ್ನಾಟಕ ಹಾಗೂ ರಾಜಸ್ಥಾನ ತಂಡಗಳ ನಡುವಿನ ಪಂದ್ಯದ ನೋಟ
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ 19 ವರ್ಷದ ಒಳಗಿನವರ ಕೂಚ್‌ ಬೆಹಾರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕರ್ನಾಟಕ ಹಾಗೂ ರಾಜಸ್ಥಾನ ತಂಡಗಳ ನಡುವಿನ ಪಂದ್ಯದ ನೋಟ   

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಧಾರವಾಡ ವಲಯ ಇತ್ತೀಚಿಗೆ 16 ವರ್ಷದ ಒಳಗಿನವರ ಅಂತರ ಶಾಲಾ ಕ್ರಿಕೆಟ್‌ ಟೂರ್ನಿ ಆಯೋಜಿಸಿತ್ತು. ಈ ಟೂರ್ನಿಯ ಎನ್‌.ಕೆ. ಠಕ್ಕರ್‌ ಹಾಗೂ ಜೈನ್‌ ಇಂಟರ್‌ ನ್ಯಾಷನಲ್‌ ತಂಡಗಳ ನಡುವಿನ ಪಂದ್ಯವದು.

ಮೊದಲು ಬ್ಯಾಟ್‌ ಮಾಡಿದ್ದ ಎನ್‌.ಕೆ. ಠಕ್ಕರ್‌ ಶಾಲೆ 458 ರನ್‌ ಗಳಿಸಿತ್ತು. ಎದುರಾಳಿ ಜೈನ್‌ ಇಂಟರ್‌ ನ್ಯಾಷನಲ್‌ ಶಾಲಾ ತಂಡ ಕೇವಲ 11.4 ಓವರ್‌ಗಳಲ್ಲಿ 39 ರನ್‌ ಗಳಿಸಿ ಶರಣಾಗಿತ್ತು.

ಇದು ಒಂದು ಉದಾಹರಣೆಯಷ್ಟೇ. ಕನಿಷ್ಠ ಸ್ಪರ್ಧೆಯೂ ಇಲ್ಲದೇ ಮುಗಿದು ಹೋದ ಇದೇ ರೀತಿಯ ಹಲವಾರು ಪಂದ್ಯಗಳು ಈ ಬಾರಿಯ ಶಾಲಾ ಟೂರ್ನಿಯಲ್ಲಿ ನಡೆದಿವೆ. 14 ವರ್ಷದ ಒಳಗಿನವರ ವಿಭಾಗಕ್ಕೆ ನಡೆದ ಶಾಲಾ ಟೂರ್ನಿಯಲ್ಲಿಯೂ ಇದೇ ಪರಿಸ್ಥಿತಿ. ಬಹುತೇಕ ತಂಡಗಳು 100 ರನ್‌ ಗಳಿಸುವಷ್ಟರಲ್ಲಿ ಆಲೌಟ್ ಆಗಿವೆ.

ADVERTISEMENT

ವಲಯ ಮಟ್ಟ, ರಾಜ್ಯ ಮತ್ತು ರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಗಳಿಸಲು ವಯೋಮಿತಿಯೊಳಗಿನ ಟೂರ್ನಿ ಗಟ್ಟಿ ಬುನಾದಿಯಾಗಬೇಕು. ಆದರೆ, ವರ್ಷಕ್ಕೆ ಒಂದೆರೆಡು ಪಂದ್ಯಗಳಲ್ಲಿ ಮಾತ್ರ ಅವಕಾಶ ಸಿಕ್ಕರೆ ಶಾಲಾ ಹಂತದಲ್ಲಿ ವೃತ್ತಿಪರ ಕ್ರಿಕೆಟ್‌ನ ಅನುಭವ ಲಭಿಸಲು ಹೇಗೆ ಸಾಧ್ಯ?

ಈಗಿನ ಪರಿಸ್ಥಿತಿ ಭಿನ್ನವಾಗಿದೆ. ಶಾಲಾ ಹಂತದ ಟೂರ್ನಿಗಳಲ್ಲಿ ಆಡುವ ಮಕ್ಕಳು ವೃತ್ತಿಪರ ಅಭ್ಯಾಸವಿಲ್ಲದೇ, ಟರ್ಫ್‌ ಮೇಲೆ ಆಡಿದ ಅನುಭವ ಇಲ್ಲದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವರ್ಷಕ್ಕೆ ಒಂದೇ ಸಲ ನಡೆಯುವ ಟೂರ್ನಿಯಲ್ಲಿ ಅಭ್ಯಾಸವಿಲ್ಲದೇ ನೇರವಾಗಿ ಕ್ರೀಡಾಂಗಣಕ್ಕೆ ಬರುತ್ತಾರೆ.

ಕೆಲ ಆಟಗಾರರು ಮಾತ್ರ ವೃತ್ತಿಪರವಾಗಿ ಕ್ಲಬ್‌ಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರ ಮೇಲೆಯೇ ಶಾಲಾ ತಂಡ ಅವಲಂಬಿತವಾಗಿರುತ್ತದೆ. ಆದರೆ, ವೃತ್ತಿಪರ ತರಬೇತಿ ಪಡೆಯದ ಆಟಗಾರರ ಶಾಲಾ ತಂಡಗಳು ಕಳಪೆ ಪ್ರದರ್ಶನ ನೀಡಿವೆ.

ಮೊದಲಿನ ಹಾಗೆ ಈಗ ಸೌಲಭ್ಯಗಳ ಕೊರತೆಯಿಲ್ಲ. ಹುಬ್ಬಳ್ಳಿಯಲ್ಲಿ ಸುಸಜ್ಜಿಯ ಟರ್ಫ್‌ ವಿಕೆಟ್‌ ಮೈದಾನಗಳಿವೆ. ಎಲ್ಲ ಕ್ಲಬ್‌ಗಳು ವೃತ್ತಿಪರತೆ ಮೈಗೂಡಿಸಿಕೊಂಡಿವೆ. ಆಧುನಿಕ ಸೌಲಭ್ಯ ಉಪಯೋಗಿಸಿ ತರಬೇತಿ ನೀಡುತ್ತಿವೆ. ಆದರೆ, ಶಾಲಾ ಹಂತದಲ್ಲಿ ಮಾತ್ರ ಆಟಗಾರರ ಗುಣಮಟ್ಟ ಸುಧಾರಣೆಯಾಗುತ್ತಿಲ್ಲ. 30 ಓವರ್‌ಗಳ ಪಂದ್ಯವಾದರೂ ಕೆಲ ತಂಡಗಳಿಗೆ ಪೂರ್ಣವಾಗಿ ಓವರ್‌ನ ಕೊನೆಯ ಎಸೆತದ ತನಕ ಆಡಲು ಸಾಧ್ಯವಾಗುತ್ತಿಲ್ಲ.

ಶಾಲಾ ಟೂರ್ನಿಗಳ ಪರಿಸ್ಥಿತಿ ಹೀಗಾಗಲು ಕಾರಣವೇನು ಎನ್ನುವ ಪ್ರಶ್ನೆಯನ್ನು ಹಿರಿಯ ಕ್ರಿಕೆಟಿಗ ಹಾಗೂ ತರಬೇತುದಾರ ವಿಜಯ ಕಾಮತ್‌ ಅವರ ಮುಂದಿಟ್ಟಾಗ ‘ಮೊದಲು ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ತರಬೇತಿ ನೀಡಬೇಕು. ಸದಾ ಒಂದಿಲ್ಲೊಂದು ಟೂರ್ನಿಗಳಲ್ಲಿ ಆಡಲು ಅವಕಾಶ ಕೊಡಬೇಕು. ವರ್ಷಕ್ಕೆ ಒಂದೆರೆಡು ಪಂದ್ಯಗಳಲ್ಲಿ ಮಾತ್ರ ಆಡಿದರೆ ಗುಣಮಟ್ಟ ಸುಧಾರಿಸಲು ಸಾಧ್ಯವಾಗುವುದಿಲ್ಲ. ಮ್ಯಾಟಿಂಗ್‌ ವಿಕೆಟ್ ಮೇಲೆ ಅಭ್ಯಾಸ ಮಾಡಿದ ಅನುಭವ ಇಲ್ಲದ ಕಾರಣ ಶಾಲಾ ಟೂರ್ನಿಗಳಲ್ಲಿ ತಂಡಗಳು ಕಳಪೆ ಪ್ರದರ್ಶನ ನೀಡುತ್ತಿವೆ’ ಎಂದು ಅಭಿಪ್ರಾಯಪಟ್ಟರು.

ಅಭ್ಯಾಸ ಮಾಡದೆ ಪರೀಕ್ಷೆ ಬರೆದಂತೆ!

ವರ್ಷಕ್ಕೆ ಒಂದೆರೆಡು ಶಾಲಾ ಟೂರ್ನಿ ನಡೆಯುವುದರಿಂದ ವಿದ್ಯಾರ್ಥಿಗಳು ಕ್ರಿಕೆಟ್‌ ಅಭ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಅವರು ಅಭ್ಯಾಸ ಮಾಡದೇ ನೇರವಾಗಿ ಪಂದ್ಯಗಳನ್ನು ಆಡಲು ಬರುವುದರಿಂದ ಗುಣಮಟ್ಟ ಕುಸಿಯುತ್ತಿದೆ. ಕ್ಲಬ್‌ಗಳಲ್ಲಿ ವೃತ್ತಿಪರ ತರಬೇತಿ ಪಡೆಯುತ್ತಿರುವ ಆಟಗಾರರ ಶಾಲಾ ತಂಡ ಮಾತ್ರ ಉತ್ತಮ ಪ್ರದರ್ಶನ ನೀಡುತ್ತದೆ. ಆದ್ದರಿಂದ ಮೊದಲು ಅಭ್ಯಾಸಕ್ಕೆ ಹೆಚ್ಚು ಮಹತ್ವ ಕೊಡಬೇಕು.

ಬೆಂಗಳೂರಿನಲ್ಲಿ ನಡೆಯುವ ಶಾಲಾ ಟೂರ್ನಿಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಪಂದ್ಯಗಳಲ್ಲಿ ಆಡಲು ಅವಕಾಶ ಸಿಗುತ್ತದೆ. ಕ್ಲಬ್‌ ಟೂರ್ನಿಗಳಲ್ಲಿ ಆಡಲು ವೇದಿಕೆ ಲಭಿಸುತ್ತದೆ. ಶಾಲಾ ಮಕ್ಕಳಿಗೋಸ್ಕರವೇ ಪ್ರತ್ಯೇಕ ಬೇಸಿಗೆ ಶಿಬಿರಗಳು ನಡೆಯುತ್ತವೆ. ನಮ್ಮ ಭಾಗದಲ್ಲಿ ಮಕ್ಕಳು ಅಭ್ಯಾಸ ಮಾಡದೇ ಕ್ರೀಡಾಂಗಣಕ್ಕೆ ಬರುತ್ತಾರೆ. ಇದು ಸರಿಯಾಗಿ ಓದದೇ ಪರೀಕ್ಷೆ ಬರದಂತೆ ಎಂದು ಹಿರಿಯ ಕ್ರಿಕೆಟಿಗ ಹಾಗೂ ಕೋಚ್‌ ಸೋಮಶೇಖರ ಶಿರಗುಪ್ಪಿ ಬೇಸರ ವ್ಯಕ್ತಪಡಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.