ADVERTISEMENT

ಜೋಫ್ರಾಗೆ ವರ್ಣಭೇದ ನಿಂದನೆ: ಆ್ಯಂಡರ್ನನ್‌ಗೆ ಅಪರಾಧಪ್ರಜ್ಞೆ

ಪಿಟಿಐ
Published 12 ಜೂನ್ 2020, 14:01 IST
Last Updated 12 ಜೂನ್ 2020, 14:01 IST
ಜೇಮ್ಸ್ ಆ್ಯಂಡರ್ಸನ್
ಜೇಮ್ಸ್ ಆ್ಯಂಡರ್ಸನ್   

ಮ್ಯಾಂಚೆಸ್ಟರ್: ಹೋದ ವರ್ಷ ನ್ಯೂಜಿಲೆಂಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ತಮ್ಮ ಸಹ ಆಟಗಾರ ಜೋಫ್ರಾ ಆರ್ಚರ್ ವಿರುದ್ಧ ನಡೆದ ಜನಾಂಗೀಯ ನಿಂದನೆ ಘಟನೆಗೆ ಸಂಬಂಧಿಸಿದಂತೆ ತಮಗೆ ಅಪರಾಧಿ ಭಾವ ಕಾಡುತ್ತಿದೆ ಎಂದು ಇಂಗ್ಲೆಂಡ್ ತಂಡದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಹೇಳಿದ್ದಾರೆ.

ಈಚೆಗೆ ಅಮೆರಿಕದಲ್ಲಿ ಪೊಲೀಸ್‌ ದೌರ್ಜನ್ಯಕ್ಕೆ ಜಾರ್ಜ್ ಫ್ಲಾಯ್ಡ್‌ ಬಲಿಯಾದ ನಂತರ ಜನಾಂಗೀಯ ನಿಂದನೆ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿವೆ. ಈ ಹಿನ್ನೆಲೆಯಲ್ಲಿ ಜೋಫ್ರಾ ಆರ್ಚರ್ ತಾವು ಅನುಭವಿಸಿದ್ದ ಅವಮಾನದ ಕುರಿತು ಮಾತನಾಡಿದ್ದರು.

ಈ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿರುವ ಜೇಮ್ಸ್, ‘ಇತ್ತೀಚಿನ ಈ ಘಟನೆಗಳು ಮತ್ತು ಅದರ ಸುತ್ತಲಿನ ಚರ್ಚೆಗಳು ನನ್ನ ಯೋಚನೆಗಳನ್ನು ಪ್ರಚೋದಿಸುತ್ತಿವೆ. ಜೋಫ್ರಾ ನಿಂದನೆ ಪ್ರಕರಣ ನಡೆದ ಸರಣಿಯಲ್ಲಿ ನಾನು ಇರಲಿಲ್ಲ. ಆದರೆ ಆ ಘಟನೆ ಗೊತ್ತಾದ ನಂತರವೂ ನಾನು ನಿರ್ಲಕ್ಷ್ಯ ತೋರಿಸಿಬಿಟ್ಟೆನಲ್ಲ ಎಂಬ ಕೀಳರಿಮೆ ಕಾಡುತ್ತಿದೆ’ ಎಂದಿದ್ದಾರೆ.

ADVERTISEMENT

‘ನಾನು ಯಾವಾಗಲಾದರೂ ಕ್ರಿಕೆಟ್ ಮೈದಾನದಲ್ಲಿ ಇಂತಹ ನಿಂದನೆಗೆ ಗುರಿಯಾಗಿದ್ದೇನೆಯೇ? ಎಂಬ ಯೋಚನೆಯೂ ನನ್ನನ್ನು ಕಾಡಿತು. ಆದರೆ ಅಂತಹ ಯಾವುದೇ ಘಟನೆಗಳೂ ನೆನಪಿಗೆ ಬರಲಿಲ್ಲ’ ಎಂದಿದ್ದಾರೆ.

‘ಕ್ರಿಕೆಟ್‌ನ ಆಡಳಿತಗಾರರು ಈ ಕ್ರೀಡೆಯನ್ನು ಮತ್ತಷ್ಟು ಸೌಹಾರ್ದಯುತವಾಗುವಂತೆ ನೋಡಿಕೊಳ್ಳಬೇಕು. ಜನಾಂಗೀಯ ನಿಂದನೆಯಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಅದರಿಂದ ಆಟದ ಸೌಂದರ್ಯ ಮತ್ತು ಮೌಲ್ಯಗಳು ಹಾಳಾಗುತ್ತವೆ’ ಎಂದು ಮನವಿ ಮಾಡಿದ್ದಾರೆ.

ಅಮೆರಿಕದ ಘಟನೆಯ ನಂತರ ಬೇರೆ ಬೇರೆ ತಂಡಗಳಲ್ಲಿರುವ ಆಫ್ರಿಕಾ ಮೂಲದ ಆಟಗಾರರು ತಮ್ಮೊಂದಿಗೆ ನಡೆದ ಅಹಿತಕರ ಘಟನೆಗಳನ್ನು ಬಹಿರಂಗಪಡಿಸುತ್ತಿದ್ದಾರೆ.ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮನ್ನು ನಿಂದನೆಗೆ ಗುರಿಪಡಿಸಲಾಗಿತ್ತು ಎಂದು ವೆಸ್ಟ್ ಇಂಡೀಸ್‌ನ ಡರೆನ್ ಸಾಮಿ ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.