ADVERTISEMENT

ಕೊರೊನಾ ರೂಪಾಂತರ ಪತ್ತೆ: ಭಾರತ ಕ್ರಿಕೆಟ್ ತಂಡದ ಆಫ್ರಿಕಾ ಪ್ರವಾಸದ ಮೇಲೆ ಕರಿನೆರಳು

ರಾಯಿಟರ್ಸ್
Published 26 ನವೆಂಬರ್ 2021, 13:12 IST
Last Updated 26 ನವೆಂಬರ್ 2021, 13:12 IST
ಪ್ರಾತಿನಿಧಿಕ: ರಾಯಿಟರ್ಸ್ ಚಿತ್ರ
ಪ್ರಾತಿನಿಧಿಕ: ರಾಯಿಟರ್ಸ್ ಚಿತ್ರ   

ಮುಂಬೈ: ಕೊರೊನಾ ವೈರಸ್‌ನ ರೂಪಾಂತರ ತಳಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೆ ಕರಿನೆರಳು ಬೀರಿದೆ. ಈ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾರ್ಗಸೂಚಿಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಡಿಸೆಂಬರ್ 17ರಿಂದ ಆರಂಭವಾಗಲಿರುವ ಸುಮಾರು 7 ವಾರಗಳ ಪ್ರವಾಸದಲ್ಲಿ ಭಾರತ ತಂಡವು ಮೂರು ಟೆಸ್ಟ್, ಮೂರು ಏಕದಿನ ಪಂದ್ಯ ಮತ್ತು ನಾಲ್ಕು ಟಿ–20 ಪಂದ್ಯಗಳನ್ನು ಆಡಲಿದೆ. ಜೋಹಾನ್ಸ್ ಬರ್ಗ್, ಸೆಂಚುರಿಯನ್, ಪಾರ್ಲ್ ಮತ್ತು ಕೇಪ್ ಟೌನ್‌ನಲ್ಲಿ ಪಂದ್ಯಗಳು ನಡೆಯಲಿವೆ.

ಟೆಸ್ಟ್ ಪಂದ್ಯಗಳು ನಡೆಯಲಿರುವ ಎರಡು ಸ್ಥಳಗಳಾದ ಜೋಹಾನ್ಸ್ ಬರ್ಗ್ ಮತ್ತು ಪ್ರಿಟೋರಿಯ (ಸೆಂಚುರಿಯನ್ ಸಮೀಪ) ಇರುವ ಉತ್ತರ ಆಫ್ರಿಕಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ, ಕೊರೊನಾದ ಹೊಸ ರೂಪಾಂತರಿ ಹರಡುವ ಆತಂಕ ಎದುರಾಗಿದೆ.

ADVERTISEMENT

‘ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯಿಂದ ಅಲ್ಲಿನ ಪರಿಸ್ಥಿತಿ ಬಗ್ಗೆ ವಿವರವಾದ ಚಿತ್ರಣ ಸಿಗುವವರೆಗೂ ನಾವು ನಮ್ಮ ಮುಂದಿನ ನಡೆ ಬಗ್ಗೆ ನಿರ್ಧರಿಸಲಾಗದು. ಮುಂಬೈನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿ ಮುಕ್ತಾಯವಾಗುತ್ತಿದ್ದಂತೆ ಭಾರತ ತಂಡವು ಡಿಸೆಂಬರ್ 8 ಅಥವಾ 9ರಂದು ಆಫ್ರಿಕಾಗೆ ತೆರಳುವ ಸಾಧ್ಯತೆ ಇದೆ’ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ಧಾರೆ.

ಸದ್ಯ, ಆಫ್ರಿಕಾ ಪ್ರವಾಸದ ಕುರಿತಂತೆ ಯಥಾಸ್ಥಿತಿ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಅಲ್ಲಿ ಪತ್ತೆಯಾಗಿರುವ ಕೊರೊನಾ ರೂಪಾಂತರಿ ತಳಿ (B.1.1.529)ಮತ್ತು ಆ ಬಗ್ಗೆ ವಿಶ್ವದಾದ್ಯಂತ ಹೆಚ್ಚಿರುವ ಆತಂಕದ ಬಗ್ಗೆ ಬಿಸಿಸಿಐ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಜೊತೆ ಚರ್ಚೆ ನಡೆಸಲಿದೆ.

‘ದಕ್ಷಿಣ ಆಫ್ರಿಕಾದಲ್ಲಿ ಭಾರತಕ್ಕೆ ಯಾವುದೇ ಕಠಿಣ ಕ್ವಾರಂಟೈನ್ ಬಗ್ಗೆ ಮಾಹಿತಿ ಬಂದಿಲ್ಲ. ಆಟಗಾರರು ಬಯೋಬಬಲ್‌ನಲ್ಲಿ ಇರಲಿದ್ದಾರೆ. ಆದರೆ, ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಯೂರೋಪಿಯನ್ ಯೂನಿಯನ್ ತಾತ್ಕಾಲಿಕವಾಗಿ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿದೆ. ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ’ ಎಂದು ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.