ADVERTISEMENT

ಸರಣಿ ಜಯದ ಮೇಲೆ ಆತಿಥೇಯರ ಕಣ್ಣು

ಮಹಿಳಾ ಏಕದಿನ ಕ್ರಿಕೆಟ್‌: ಇಂದು ಇಂಗ್ಲೆಂಡ್‌ ಎದುರು ಎರಡನೇ ಏಕದಿನ ಪಂದ್ಯ

ಪಿಟಿಐ
Published 24 ಫೆಬ್ರುವರಿ 2019, 17:21 IST
Last Updated 24 ಫೆಬ್ರುವರಿ 2019, 17:21 IST
ಭಾರತದ ದೀಪ್ತಿ ಶರ್ಮಾ ಮತ್ತು ಹರ್ಲೀನ್‌ ಡಿಯೊಲ್‌ (ಹಿಂದಿರುವವರು) ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು –ಪಿಟಿಐ ಚಿತ್ರ
ಭಾರತದ ದೀಪ್ತಿ ಶರ್ಮಾ ಮತ್ತು ಹರ್ಲೀನ್‌ ಡಿಯೊಲ್‌ (ಹಿಂದಿರುವವರು) ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು –ಪಿಟಿಐ ಚಿತ್ರ   

ಮುಂಬೈ: ಮೊದಲ ಪಂದ್ಯದಲ್ಲಿ ಗೆದ್ದು ಬೀಗಿರುವ ಭಾರತ ಮಹಿಳಾ ತಂಡ ಈಗ ಸರಣಿ ಜಯದ ಮೇಲೆ ಕಣ್ಣಿಟ್ಟಿದೆ.

ಸೋಮವಾರ ನಡೆಯುವ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಮಿಥಾಲಿ ರಾಜ್‌ ಪಡೆ, ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ತಂಡದ ಸವಾಲು ಎದುರಿಸಲಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ಲಭಿಸಿದ 66ರನ್‌ಗಳ ಗೆಲುವು ಆತಿಥೇಯ ಆಟಗಾರ್ತಿಯರ ಮನೋಬಲ ಹೆಚ್ಚುವಂತೆ ಮಾಡಿದೆ.

ADVERTISEMENT

2021ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಗಳಿಸುವ ಗುರಿ ಇಟ್ಟುಕೊಂಡಿರುವ ಭಾರತ, ಆಂಗ್ಲರ ನಾಡಿನ ಎದುರು ಸರಣಿ ಗೆದ್ದು ಈ ಹಾದಿಯನ್ನು ಸುಗಮ ಮಾಡಿಕೊಳ್ಳುವ ಆಲೋಚನೆ ಹೊಂದಿದೆ.

ಜೆಮಿಮಾ ರಾಡ್ರಿಗಸ್‌ ಮತ್ತು ಸ್ಮೃತಿ ಮಂದಾನ ಅವರು ತಂಡಕ್ಕೆ ಉತ್ತಮ ಆರಂಭ ನೀಡುವ ವಿಶ್ವಾಸದಲ್ಲಿದ್ದಾರೆ. ಇವರು ಹಾಕಿಕೊಡುವ ಬುನಾದಿಯ ಮೇಲೆ ರನ್‌ ಗೋಪುರ ಕಟ್ಟಲು ಮಿಥಾಲಿ, ದೀಪ್ತಿ ಶರ್ಮಾ, ಮೋನಾ ಮೆಷ್ರಮ್‌ ಮತ್ತು ಹರ್ಲೀನ್‌ ಡಿಯೊಲ್‌ ಸಜ್ಜಾಗಿದ್ದಾರೆ. ತಾನಿಯಾ ಭಾಟಿಯಾ ಮತ್ತು ಜೂಲನ್ ಗೋಸ್ವಾಮಿ ಕೂಡಾ ಇಂಗ್ಲೆಂಡ್‌ ಬೌಲರ್‌ಗಳನ್ನು ಕಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಬೌಲಿಂಗ್‌ನಲ್ಲಿ ಭಾರತ ತಂಡ ಬಲಿಷ್ಠವಾಗಿದೆ. ಲೆಗ್‌ ಸ್ಪಿನ್ನರ್‌ ಪೂನಮ್‌ ಯಾದವ್‌, ಆಫ್‌ ಸ್ಪಿನ್ನರ್‌ ದೀಪ್ತಿ ಶರ್ಮಾ ಮತ್ತು ಎಡಗೈ ಸ್ಪಿನ್ನರ್‌ ಏಕ್ತಾ ಬಿಷ್ಠ್‌ ಅವರು ಮತ್ತೊಮ್ಮೆ ಮೋಡಿ ಮಾಡಲು ಕಾಯುತ್ತಿದ್ದಾರೆ.

ಹಿಂದಿನ ಪಂದ್ಯದಲ್ಲಿ ಏಕ್ತಾ ನಾಲ್ಕು ವಿಕೆಟ್‌ ಉರುಳಿಸಿದ್ದರು. ದೀಪ್ತಿ ಮೂರು ವಿಕೆಟ್‌ ಕಬಳಿಸಿ ಎದುರಾಳಿ ತಂಡದ ಬ್ಯಾಟಿಂಗ್ ಶಕ್ತಿಗೆ ಪೆಟ್ಟು ನೀಡಿದ್ದರು. ವೇಗದ ಬೌಲರ್‌ಗಳಾದ ಜೂಲನ್ ಗೋಸ್ವಾಮಿ ಮತ್ತು ಶಿಖಾ ಪಾಂಡೆ ಕೂಡಾ ವಿಕೆಟ್‌ ಪಡೆದು ಗಮನ ಸೆಳೆದಿದ್ದರು.

ಮೊದಲ ಪಂದ್ಯದಲ್ಲಿ ಸೋತು ಗಾಯಗೊಂಡ ಹುಲಿಯಂತಾಗಿರುವ ಇಂಗ್ಲೆಂಡ್‌ ತಂಡ ಎರಡನೇ ಹಣಾಹಣಿಯಲ್ಲಿ ತಿರುಗೇಟು ನೀಡಲು ಸನ್ನದ್ಧವಾಗಿದೆ. ಸರಣಿ ಸಮಬಲ ಸಾಧಿಸುವ ಈ ತಂಡದ ಕನಸು ಸಾಕಾರವಾಗಬೇಕಾದರೆ ಹೀದರ್‌ ನೈಟ್‌ ಬಳಗ ಸೋಮವಾರದ ಪಂದ್ಯದಲ್ಲಿ ಪರಿಣಾಮಕಾರಿ ಬ್ಯಾಟಿಂಗ್‌ ನಡೆಸುವುದು ಅಗತ್ಯ.

ಪಂದ್ಯದ ಆರಂಭ: ಬೆಳಿಗ್ಗೆ 9.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.