ADVERTISEMENT

ಮಹಿಳಾ ಏಕದಿನ ವಿಶ್ವಕಪ್–2025 ವೇಳಾಪಟ್ಟಿ ಪ್ರಕಟ: ಅ.5 ರಂದು ಭಾರತ–ಪಾಕ್ ಮುಖಾಮುಖಿ

ಪಿಟಿಐ
Published 16 ಜೂನ್ 2025, 11:39 IST
Last Updated 16 ಜೂನ್ 2025, 11:39 IST
   

ದುಬೈ: ಮಹಿಳಾ ಏಕದಿನ ವಿಶ್ವಕಪ್‌ನ ಪ್ರಮುಖ ಆಕರ್ಷಣೆಯಾದ ಭಾರತ– ಪಾಕಿಸ್ತಾನ ನಡುವಣ ಪಂದ್ಯ ತಟಸ್ಥ ತಾಣವಾದ ಕೊಲಂಬೊದ ಆರ್‌.ಪ್ರೇಮದಾಸ ಕ್ರೀಡಾಂಗಣದಲ್ಲಿ ಅಕ್ಟೋಬರ್ 5ರಂದು ನಡೆಯಲಿದೆ.

ಎಂಟು ತಂಡಗಳು ಭಾಗವಹಿಸುವ ಟೂರ್ನಿಯ ವೇಳಾಪಟ್ಟಿಯನ್ನು ಎಂದು ಐಸಿಸಿ ಸೋಮವಾರ ಪ್ರಕಟಿಸಿದೆ.

ಈ ವರ್ಷದ ಆರಂಭದಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ವೇಳೆ ಭಾರತ ತಂಡ, ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿತ್ತು. ಈ ವೇಳೆ ಪುರುಷರ ಮತ್ತು ಮಹಿಳಾ ವಿಭಾಗದ ಪ್ರಮುಖ ಟೂರ್ನಿಗಳಿಗೆ ಹೈಬ್ರಿಡ್‌ ಮಾದರಿ ಅನುಸರಿಸಲು ಉಭಯ ತಂಡಗಳು ಒಪ್ಪಿಕೊಂಡಿದ್ದು, ಇದರ ಅನ್ವಯ ಭಾರತ ಆತಿಥ್ಯ ವಹಿಸಿರುವ ಈ ಟೂರ್ನಿಗೆ ಕೊಲಂಬೊವನ್ನು ತಟಸ್ಥ ತಾಣವಾಗಿ ಆಯ್ಕೆ ಮಾಡಲಾಗಿದೆ. ಪಾಕಿಸ್ತಾನ ತನ್ನ ಎಲ್ಲ ಪಂದ್ಯಗಳನ್ನು ಇಲ್ಲಿ ಆಡಲಿದೆ.

ADVERTISEMENT

ಪಹಲ್ಗಾಮ್‌ನಲ್ಲಿ ಏಪ್ರಿಲ್‌ ಕೊನೆಯಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದ ನಂತರ ಈ ಎರಡು ತಂಡಗಳು ಪರಸ್ಪರ ಆಡುವ ಬಗ್ಗೆ ಅನುಮಾನ ಉಂಟಾಗಿತ್ತು. ಆ ದಾಳಿಯಲ್ಲಿ 26 ಮಂದಿ ಹತ್ಯೆಗೀಡಾಗಿದ್ದು, ಗಡಿಯಲ್ಲಿ ಸೇನಾ ಸಂಘರ್ಷವೂ ನಡೆದಿತ್ತು. ಆದರೆ ಸೋಮವಾರದ ವೇಳಾಪಟ್ಟಿ ಈ ಕುರಿತ ಊಹಾಪೋಹಗಳಿಗೆ ತೆರೆಯೆಳೆದಿದೆ. ಆ ದಾಳಿಯಲ್ಲಿ 26 ಮಂದಿ ಹತ್ಯೆಗೀಡಾಗಿದ್ದರು.

ಭಾರತ ತಂಡ ಸೆ. 30ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಉದ್ಘಾಟನಾ ಪಂದ್ಯ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಇತ್ತೀಚೆಗೆ ಆರ್‌ಸಿಬಿ ತಂಡ ಐಪಿಎಲ್‌ ಕಪ್‌ ಗೆದ್ದ ವಿಜಯೋತ್ಸವ ವೇಳೆ ಕಾಲ್ತುಳಿತ ಸಂಭವಿಸಿದ ಕಾರಣ ಬೆಂಗಳೂರು ವಿಶ್ವಕಪ್ ಪಂದ್ಯಗಳ ಆತಿಥ್ಯ ಕಳೆದುಕೊಳ್ಳಬಹುದು ಎಂದು ಸಂದೇಹಗಳಿಗೂ ವಿರಾಮ ಬಿದ್ದಿದೆ.

ಭಾರತ ತನ್ನ ಎರಡು ಪಂದ್ಯಗಳನ್ನು ವಿಶಾಖಪಟ್ಟಣದಲ್ಲಿ ಆಡಲಿದೆ. ಅಕ್ಟೋಬರ್ 9ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು 12ರಂದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಅಲ್ಲಿ ಆಡಲಿದೆ.

‘ಮಹಿಳಾ ಕ್ರಿಕೆಟ್‌ನ ಎಂಟು ಅತ್ಯುತ್ತಮ ತಂಡಗಳು ಭಾರತಕ್ಕೆ ಬಂದು ಅತ್ಯುತ್ತಮ ತಾಣಗಳಲ್ಲಿ  ದಾಖಲೆ ಸಂಖ್ಯೆ ಪ್ರೇಕ್ಷಕರ ಮುಂದೆ ಆಡುವ ಭರವಸೆ ಇದೆ. ಸ್ಮರಣೀಐ ಟೂರ್ನಿಯನ್ನು ಕಾತರದಿಂದ ಎದುರುನೋಡುತ್ತಿದ್ದೇವೆ’ ಎಂದು ಐಸಿಸಿ ಅಧ್ಯಕ್ಷ ಜಯ್‌ ಶಾ ಹೇಳಿಕೆಯತಲ್ಲಿ ತಿಳಿಸಿದ್ದಾರೆ.

ಆದರೆ ಈ ದೊಡ್ಡ ಟೂರ್ನಿಯ ಸಾಂಗವಾಗಿ ನಡೆಯುವಂತೆ ನೋಡಿಕೊಳ್ಳುವ ಸ್ಥಳೀಯ ಆಯೋಜನಾ ಸಮಿತಿಯನ್ನು (ಎಲ್‌ಒಸಿ) ಆದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇನ್ನೂ ರಚಿಸಿಲ್ಲ.

ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯವನ್ನು ಅ. 1ರಂದು ನ್ಯೂಜಿಲೆಂಡ್ ವಿರುದ್ಧ ಇಂದೋರ್‌ನಲ್ಲಿ ಆಡಲಿದೆ. ಕಳೆದ ವರ್ಷ ಫೈನಲ್‌ನಲ್ಲಿ ಎದುರಾಗಿದ್ದ ಆಸ್ಟ್ರೇಲಿಯಾ– ಇಂಗ್ಲೆಂಡ್‌ ನಡುವಣ ಪಂದ್ಯ ಅ. 22ರಂದು ಇಂದೋರ್‌ನಲ್ಲಿ ನಿಗದಿಯಾಗಿದೆ.

ಮೊದಲ ಸೆಮಿಫೈನಲ್ ಪಂದ್ಯ ಅ. 29ರಂದು ಗುವಾಹಟಿಯಲ್ಲಿ ಮತ್ತು ಎರಡನೇ ಸೆಮಿಫೈನಲ್ ಪಂದ್ಯ ಅ. 30ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಫೈನಲ್ ಪಂದ್ಯ ನವೆಂಬರ್‌ 2ರಂದು ಬೆಂಗಳೂರಿನಲ್ಲಿ (ಪಾಕಿಸ್ತಾನ ತಂಡವು ಫೈನಲ್‌ಗೆ ಅರ್ಹತೆ ಪಡೆದಲ್ಲಿ ಕೊಲಂಬೊದಲ್ಲಿ) ನಿಗದಿಯಾಗಿದೆ.

2013ರ ನಂತರ ಭಾರತ ಇದೇ ಮೊದಲ ಬಾರಿ ಈ ಟೂರ್ನಿಯ ಆತಿಥ್ಯ ವಹಿಸಿದೆ. ಪಂದ್ಯಗಳು ರೌಂಡ್‌ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ನಲ್ಲಿ ಆಡುವ ಅರ್ಹತೆ ಪಡೆಯಲಿವೆ.

ಆತಿಥೇಯ ಭಾರತದ ಜೊತೆ ಈ ವಿಶ್ವಕಪ್‌ ಟೂರ್ನಿಗೆ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ನೇರ ಅರ್ಹತೆ ಪಡೆದಿದ್ದವು. ಈ ವರ್ಷದ ಆರಂಭದಲ್ಲಿ ಲಾಹೋರ್‌ನಲ್ಲಿ ನಡೆದ ಕ್ವಾಲಿಫೈರ್ಸ್‌ ಮೂಲಕ ಪಾಕಿಸ್ತಾನ ಮತ್ತು ಬಾಂಗ್ಡಾದೇಶ ತಂಡಗಳು ಅರ್ಹತೆ ಪಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.