ADVERTISEMENT

ಮಹಿಳಾ ಪ್ರೀಮಿಯರ್ ಲೀಗ್ ಇಂದಿನಿಂದ; ಹರ್ಮನ್‌ಪ್ರೀತ್ –ಸ್ಮೃತಿ ಮುಖಾಮುಖಿ

ಪಿಟಿಐ
Published 8 ಜನವರಿ 2026, 23:56 IST
Last Updated 8 ಜನವರಿ 2026, 23:56 IST
<div class="paragraphs"><p>ಹರ್ಮನ್‌ಪ್ರೀತ್ ಕೌರ್ ಮತ್ತು  ಸ್ಮೃತಿ ಮಂದಾನ&nbsp;</p></div>

ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಾನ 

   

ನವೀ ಮುಂಬೈ: ಹರ್ಮನ್‌ಪ್ರೀತ್ ಕೌರ್ ಅವರಿಗೆ 2025ನೇ ಇಸವಿಯು ಅವಿಸ್ಮರಣೀಯ.

ಏಕೆಂದರೆ; ಹೋದ ವರ್ಷ ಅವರು ಮಹಿಳೆಯರ ಏಕದಿನ ವಿಶ್ವಕಪ್ ಜಯದತ್ತ ಭಾರತ ತಂಡವನ್ನು ಮುನ್ನಡೆಸಿದರು. ಅದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಕಿರೀಟ ಧರಿಸಲೂ ಅವರ ನಾಯಕತ್ವ ಕಾರಣವಾಗಿತ್ತು. 

ADVERTISEMENT

ಇದೀಗ ಅವರು ಆ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಛಲದೊಂದಿಗೆ ಕಣಕ್ಕಿಳಿಯುತ್ತಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯ ನಡೆದ ಡಿವೈ ಪಾಟೀಲ ಕ್ರೀಡಾಂಗಣದಲ್ಲಿಯೇ ಡಬ್ಲ್ಯುಪಿಎಲ್ ಆರಂಭವಾಗಲಿದೆ.

ಶುಕ್ರವಾರದಿಂದ ಆರಂಭವಾಗಲಿರುವ ಡಬ್ಲ್ಯುಪಿಎಲ್‌ ನಾಲ್ಕನೇ ಆವೃತ್ತಿಯಲ್ಲಿ ಹರ್ಮನ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಸ್ಮೃತಿ ಮಂದಾನ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಗವನ್ನು ಎದುರಿಸಲು ಸಿದ್ಧವಾಗಿದೆ. ವಿಶ್ವಕಪ್ ವಿಜೇತ ತಂಡದ ಉಪನಾಯಕಿಯಾಗಿದ್ದ ಸ್ಮೃತಿ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಲಯದಲ್ಲಿದ್ದಾರೆ. ಪ್ರಮುಖ ಆಟಗಾರ್ತಿ ಎಲಿಸ್ ಪೆರಿ ಅವರ ಗೈರಿನಲ್ಲಿ ತಂಡವು ಆಡಲಿದೆ. ನದೀನ್ ಡಿ ಕ್ಕಲರ್, ಆಲ್‌ರೌಂಡರ್ ಪೂಜಾ ವಸ್ತ್ರಕರ್, ಜಾರ್ಜಿಯಾ ವೋಲ್, ಶ್ರೇಯಾಂಕಾ ಪಾಟೀಲ, ವಿಕೆಟ್‌ಕೀಪರ್ ರಿಚಾ ಘೋಷ್ ಮತ್ತು ಮಧ್ಯಮವೇಗಿ ರಾಧಾ ಯಾದವ್ ಅವರ ಮೇಲೆ ನಿರೀಕ್ಷೆಯ ಭಾರ ಇದೆ. ವೇಗಿ ಅರುಂಧತಿ ರೆಡ್ಡಿ  ಮತ್ತು ಇಂಗ್ಲೆಂಡ್‌ನ ಲಾರೆನ್ ಬೆಲ್ ಅವರ ಪಾತ್ರವೂ ಮಹತ್ವದ್ದಾಗಿದೆ.  

ಕರ್ನಾಟಕದ ಆಲ್‌ರೌಂಡರ್ ಶ್ರೇಯಾಂಕಾ ಅವರು 13 ತಿಂಗಳುಗಳ ವಿಶ್ರಾಂತಿ ನಂತರ ಕಣಕ್ಕೆ ಮರಳುತ್ತಿದ್ದಾರೆ. ಗಾಯದ ಸಮಸ್ಯೆಯಿಂದ ಅವರು ದೀರ್ಘ ಸಮಯದಿಂದ ಕ್ರಿಕೆಟ್‌ನಿಂದ ದೂರ ಇದ್ದರು. ಅದರಿಂದಾಗಿ ಹೋದ ವರ್ಷ  ಅವರಿಗೆ ವಿಶ್ವಕಪ್ ಟೂರ್ನಿಯಲ್ಲಿಯೂ ಆಡುವ ಅವಕಾಶ ಕೈತಪ್ಪಿತ್ತು. 

ಆದರೆ ಮುಂಬೈ ತಂಡವು ಎಲ್ಲ ರೀತಿಯಿಂದಲೂ ಬಲಾಢ್ಯವಾಗಿದೆ. ಹರ್ಮನ್ ಅವರಿಗೆ ಆಲ್‌ರೌಂಡರ್‌ಗಳಾದ ನಟಾಲಿಯಾ ಶಿವರ್, ಹೆಯಲಿ ಮ್ಯಾಥ್ಯೂಸ್, ಅಮೆಲಿಯಾ ಕೆರ್ ಮತ್ತು ಶಬ್ನಿಮ್ ಇಸ್ಮಾಯಿಲ್ ಅವರ ಬಲ ಇದೆ. ಉಳಿದ ಆಟಗಾರ್ತಿಯರು ತಮ್ಮ ಸಾಮರ್ಥ್ಯ ಮೆರೆಯುವ ಹುಮ್ಮಸ್ಸಿನಲ್ಲಿದ್ದಾರೆ.

ಜೂನ್–ಜುಲೈನಲ್ಲಿ ಮಹಿಳೆಯರ ಟಿ20 ಕ್ರಿಕೆಟ್ ಟೂರ್ನಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಆಟಗಾರ್ತಿಯರಿಗೂ ಈ ಡಬ್ಲ್ಯುಪಿಎಲ್ ಟೂರ್ನಿಯು ಪೂರ್ವಭಾವಿ ಸಿದ್ಧತೆಯ ವೇದಿಕೆಯಾಗಲಿದೆ. 

ಕಳೆದ ಮೂರು ಆವೃತ್ತಿಗಳಲ್ಲಿ ಮುಂಬೈ ಎರಡು, ಆರ್‌ಸಿಬಿ ಒಂದು ಬಾರಿ ಪ್ರಶಸ್ತಿ ಗೆದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೂರು ಬಾರಿಯೂ ರನ್ನರ್ಸ್ ಅಪ್ ಆಗಿತ್ತು.

ಪಂದ್ಯ ಆರಂಭ: ರಾತ್ರಿ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.