ADVERTISEMENT

‘ಕೊಹ್ಲಿ ನನ್ನ ‘ಆಕ್ರಮಣದ’ ಶಕ್ತಿ’: ಕುಲದೀಪ್ ಯಾದವ್ ಹೇಳಿಕೆ

ಭಾರತ ತಂಡದ ನಾಯಕ ನೀಡಿದ ಸ್ವಾತಂತ್ರ್ಯಕ್ಕೆ ಸಂತಸ ವ್ಯಕ್ತಪಡಿಸಿದ ಸ್ಪಿನ್ನರ್

​ಪ್ರಜಾವಾಣಿ ವಾರ್ತೆ
Published 17 ಮೇ 2019, 2:31 IST
Last Updated 17 ಮೇ 2019, 2:31 IST
ವಿರಾಟ್ ಕೊಹ್ಲಿ (ಎಡ) ಮತ್ತು ಕುಲದೀಪ್ ಯಾದವ್
ವಿರಾಟ್ ಕೊಹ್ಲಿ (ಎಡ) ಮತ್ತು ಕುಲದೀಪ್ ಯಾದವ್   

ಕೋಲ್ಕತ್ತ (ಪಿಟಿಐ): ‘ಆಕ್ರಮಣಕಾರಿ ಆಟವಾಡಲು ನಾಯಕ ವಿರಾಟ್ ಕೊಹ್ಲಿ ಮುಕ್ತ ಅವಕಾಶ ನೀಡಿದ್ದೇ ವಿಶ್ವ ಮಟ್ಟದಲ್ಲಿ ಬೆಳೆಯಲು ಕಾರಣ’ ಎಂದು ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.

‘ಆಟಗಾರರಿಗೆ ಪೂರ್ಣ ಸ್ವಾತಂತ್ರ್ಯ ನೀಡುವ ಮತ್ತು ಬೆಂಬಲಿಸುವ ನಾಯಕ ತಂಡದಲ್ಲಿ ಇದ್ದರೆ ಬೆಳೆಯಲು ಸಾಧ್ಯವಾಗುತ್ತದೆ. ನಮ್ಮ ತಂಡದಲ್ಲಿ ಕೊಹ್ಲಿ ಸ್ವಾತಂತ್ರ್ಯ ನೀಡದಿದ್ದರೆ ಆಟಗಾರರು ಇಷ್ಟು ಬೆಳೆಯಲು ಸಾಧ್ಯವಿತ್ತೇ’ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕುಲದೀಪ್ ಪ್ರಶ್ನಿಸಿದರು.

ಐಪಿಎಲ್‌ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪರ ಆಡಿದ್ದ ಕುಲದೀಪ್ ಒಂಬತ್ತು ಪಂದ್ಯಗಳನ್ನು ಆಡಿದ್ದರು. ಕೇವಲ ನಾಲ್ಕು ವಿಕೆಟ್‌ಗಳನ್ನು ಮಾತ್ರ ಗಳಿಸಿದ್ದರು. ಕೊನೆಯ ಕೆಲವು ‍ಪಂದ್ಯಗಳಲ್ಲಿ ಅವರಿಗೆ ಅವಕಾಶವೇ ಲಭಿಸಿರಲಿಲ್ಲ.

ADVERTISEMENT

ಐಪಿಎಲ್‌ನಲ್ಲಿ ಅನುಭವಿಸಿದ ನಿರಾಸೆಯನ್ನು ಮರೆಯುವ ಸಾಮರ್ಥ್ಯವನ್ನು ವಿಶ್ವಕಪ್ ಟೂರ್ನಿಯಲ್ಲಿ ತೋರಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.

‘ಐಪಿಎಲ್‌ಗೂ ವಿಶ್ವಕಪ್‌ಗೂ ಅಜಗಜಾಂತರವಿದೆ. ಐಪಿಎಲ್‌ನಲ್ಲಿ ಉತ್ತಮ ಸಾಧನೆ ಮಾಡಿದವರೆಲ್ಲರೂ ವಿಶ್ವಕಪ್‌ನಲ್ಲಿ ಆಡಲು ಅವಕಾಶ ಸಿಗಲಿಲ್ಲ. ಇತ್ತೀಚೆಗೆ ನಾನು ತುಂಬ ಪ್ರಬುದ್ಧನಾಗಿದ್ದು ವಿಶ್ವಕಪ್‌ನಲ್ಲಿ ಅದು ಪ್ರತಿಫಲಿಸಲಿದೆ. ಟ್ವೆಂಟಿ–20 ಮಾದರಿಯಲ್ಲಿ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದ ದಿನ ಬೌಲರ್‌ಗಳು ಬೇಸರಗೊಳ್ಳುತ್ತಾರೆ. ಐಪಿಎಲ್‌ನಲ್ಲಿ ನನಗೂ ಇಂಥ ಅನುಭವ ಆಗಿದೆ. ಹೆಚ್ಚು ವಿಕೆಟ್‌ ಯಾಕೆ ಗಳಿಸಲಿಲ್ಲ ಎಂದು ಯಾರಾದರೂ ಕೇಳಿದರೆ ಏನು ಹೇಳಲಿ? ನಾನೇನು ಜಾದೂಗಾರನೇ. ವಿಕೆಟ್ ಸಿಗಳಿಲ್ಲ ಎಂಬ ಕಾರಣಕ್ಕೆ ಉತ್ತಮ ಬೌಲಿಂಗ್ ಮಾಡಲಿಲ್ಲ ಎಂದು ಅರ್ಥವಲ್ಲ’ ಎಂದು
ಕುಲದೀಪ್ ಪ್ರಶ್ನಿಸಿದರು.

ಧೋನಿ ಅವರನ್ನು ಟೀಕಿಸು ವುದುಂಟೇ: ಮಹೇಂದ್ರ ಸಿಂಗ್ ಧೋನಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಫಲ ನೀಡುವುದಿಲ್ಲ ಎಂದು ಕುಲದೀಪ್ ಹೇಳಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹಬ್ಬಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಧೋನಿ ಅವರಂಥ ಹಿರಿಯ ಆಟಗಾರನ ಬಗ್ಗೆ ನನ್ನಂಥ ಕಿರಿಯ ಹಾಗೆ ಹೇಳುವುದುಂಟೇ? ಎಂದು ಅವರು ಕೇಳಿದರು.

4ನೇ ಕ್ರಮಾಂಕಕ್ಕೆ ರಾಹುಲ್‌ ಸೂಕ್ತ

ನವದೆಹಲಿ (ಪಿಟಿಐ): ವಿಶ್ವಕಪ್‌ ಟೂರ್ನಿಯಲ್ಲಿ ಕೆ.ಎಲ್‌.ರಾಹುಲ್ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸುವುದು ಸೂಕ್ತ ಎಂದು ಹಿರಿಯ ಕ್ರಿಕೆಟಿಗ ದಿಲೀಪ್‌ ವೆಂಗ್‌ಸರ್ಕಾರ್ ಅಭಿಪ್ರಾಯಪಟ್ಟರು.

‘ಇಂಗ್ಲೆಂಡ್‌ನ ಪಿಚ್‌ಗಳ ಮರ್ಮವನ್ನು ತಿಳಿದಿರುವ ರಾಹುಲ್‌ಗೆ ಅಲ್ಲಿನ ಸ್ಥಿತಿಗತಿಗಳಿಗೆ ಒಗ್ಗಿಕೊಂಡು ಆಡುವ ಕಲೆ ಗೊತ್ತಿದೆ’ ಎಂದು ಹೇಳಿದ ದಿಲೀಪ್‌, ಸೆಮಿಫೈನಲ್‌ ವರೆಗೆಭಾರತ ತಂಡದ ಹಾದಿ ಸುಗಮವಾಗಲಿದ್ದು ಛಲದಿಂದ ಆಡಿದರೆ ಮುಂದಿನ ಹಾದಿಯಲ್ಲೂ ಹೆಜ್ಜೆ ಹಾಕಲು ಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.