ADVERTISEMENT

ವಿಶ್ವಕಪ್ 1999: ಕರ್ನಾಟಕದ ಬೌಲರ್‌ಗಳಿಗೇ ಪಾಕ್‌ನ ಎಲ್ಲ ವಿಕೆಟ್!

ವಿಶ್ವಕಪ್‌ ಹೆಜ್ಜೆಗುರುತು

​ಪ್ರಜಾವಾಣಿ ವಾರ್ತೆ
Published 27 ಮೇ 2019, 3:06 IST
Last Updated 27 ಮೇ 2019, 3:06 IST
ವೆಂಕಟೇಶ್ ಪ್ರಸಾದ್
ವೆಂಕಟೇಶ್ ಪ್ರಸಾದ್   

ಭಾರತ ಹಾಗೂ ಪಾಕಿಸ್ತಾನ ನಡುವೆ ಸೇನಾ ಬೇಗುದಿ ಇದ್ದಂಥ ಸಂದರ್ಭ 1999. ವಿಶ್ವಕಪ್ ಕ್ರಿಕೆಟ್‌ನಲ್ಲಿ ಇಂಥದ್ದೊಂದು ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ. ಹೀಗಾಗಿ ಎರಡೂ ತಂಡಗಳ ಮುಖಾಮುಖಿ ಕ್ರಿಕೆಟಿಗರಿಗಷ್ಟೇ ಅಲ್ಲದೆ ಕ್ರೀಡಾಪ್ರೇಮಿಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಜೂನ್ 8, 1999. ವಿಶ್ವಕಪ್‌ಗೆ ಪರಿಚಯಿಸಲಾಗಿದ್ದ ‘ಸೂಪರ್ ಸಿಕ್ಸ್’ ಹಂತದ ನಾಲ್ಕನೇ ಪಂದ್ಯ.
ಸ್ಥಳ: ಮ್ಯಾಂಚೆಸ್ಟರ್. ಟಾಸ್ ಗೆದ್ದು, ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ಮುಂದಿನದ್ದು ಕುತೂಹಲ...

* ಗುಂಪು ಹಂತದಲ್ಲಿ ಆಸ್ಟ್ರೇಲಿಯಾ, ವೆಸ್ಟ್ಇಂಡೀಸ್ ತರಹದ ಬಲಾಢ್ಯ ತಂಡಗಳನ್ನು ಸೋಲಿಸಿದ್ದ ಪಾಕಿಸ್ತಾನ, ಬಾಂಗ್ಲಾ ಎದುರು ಸೋಲುಂಡಿತ್ತು. ಆದರೆ, ಇಂಜಮಾಮ್ ಉಲ್ ಹಕ್, ಅಜರ್ ಮಹಮೂದ್ ಹಾಗೂ ವಾಸಿಂ ಅಕ್ರಂ ಅದ್ಭುತ ಫಾರ್ಮ್‌ನಲ್ಲಿದ್ದರು.

* ‘ಸೂಪರ್ ಸಿಕ್ಸ್’ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಪಾಕಿಸ್ತಾನ ಸಹಜವಾಗಿಯೇ ಈ ಪಂದ್ಯದಲ್ಲೂ ಫೇವರಿಟ್ ಎನಿಸಿತ್ತು.

ADVERTISEMENT

* ತಂಡದ ಮೊತ್ತ 37 ಆಗುವಷ್ಟ ರಲ್ಲಿ ಸಡಗೋಪನ್ ರಮೇಶ್ ಔಟಾದರೂ ಇನ್ನೊಂದೆಡೆ ಸಚಿನ್ ತೆಂಡೂಲ್ಕರ್ ಸಂಯಮ ಹಾಗೂ ಆಕ್ರಮಣ ಬೆರೆಸಿದ ತಮ್ಮದೇ ಶೈಲಿಯ ಆಟ ಮುಂದುವರಿಸಿದರು. 5 ಬೌಂಡರಿಗಳಿದ್ದ ಅವರ 45 ರನ್‌ಗಳ ಇನಿಂಗ್ಸ್ ಭಾರತದ ಮೊತ್ತ 20 ಓವರ್‌ಗಳಲ್ಲಿ 95 ಆಗಲು ಕಾರಣ.

* ಸಚಿನ್ ನಿರ್ಗಮನದ ನಂತರ ರಾಹುಲ್ ದ್ರಾವಿಡ್ ತಾಳ್ಮೆಯ ಆಟ ಚೆಂಡು ಹೆಚ್ಚು ಸ್ವಿಂಗ್ ಆಗುತ್ತಿದ್ದ ಪಿಚ್‌ನಲ್ಲಿ ಅನಿವಾರ್ಯವಾಗಿತ್ತು. 89 ಎಸೆತಗಳಲ್ಲಿ 61 ರನ್ ಕಲೆಹಾಕಿದ ಅವರು ಗಳಿಸಿದ್ದು ಕೇವಲ 4 ಬೌಂಡರಿ. 40ನೇ ಓವರ್‌ ವರೆಗೆ ಅವರು ಲಂಗರು ಹಾಕದೇ ಇದ್ದರೆ ಭಾರತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಲು ಸಾಧ್ಯವಿರಲಿಲ್ಲ.

* ಮೊಹಮ್ಮದ್ ಅಜರುದ್ದೀನ್ ಕೊನೆಯಲ್ಲಿ ಆಡಿದ ಮಹತ್ವದ ಆಟದಿಂದ 59 ರನ್‌ಗಳು (1 ಸಿಕ್ಸರ್, 3 ಬೌಂಡರಿ) ಹರಿದುಬಂದವು.

* ವಸೀಂ ಅಕ್ರಂ ಕೇವಲ 27 ರನ್ ನೀಡಿ 2 ವಿಕೆಟ್ ಪಡೆದರೆ, ಅಜರ್ ಮಹಮೂದ್ ಅಷ್ಟೇ ವಿಕೆಟ್‌ಗಳನ್ನು ಪಡೆಯಲು 37 ರನ್ನಿತ್ತರು.

* ಈ ವಿಶ್ವಕಪ್ನಲ್ಲಿ ಮೊದಲ ಬಾರಿ ಬಳಕೆಯಾದ ‘ಡ್ಯೂಕ್’ ಬಿಳಿ ಚೆಂಡು ಕರ್ನಾಟಕದ ಬೌಲರ್‌ಗಳಿಗೆ ಹಬ್ಬವನ್ನೇ ಕೊಟ್ಟಿತು. ಜಾವಗಲ್ ಶ್ರೀನಾಥ್ ಮೂರು ವಿಕೆಟ್ ಪಡೆದು, ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ವೆಂಕಟೇಶ ಪ್ರಸಾದ್ ಅಂತೂ ತಮ್ಮ ಲೆಗ್ ಕಟರ್‌ಗಳ ಮೊನಚಿನ ಪ್ರಾತ್ಯಕ್ಷಿಕೆಯನ್ನೇ ನೀಡಿದರು. 9.3 ಓವರ್‌ಗಳಲ್ಲಿ 27 ರನ್ ಅಷ್ಟೇ ನೀಡಿ 5 ವಿಕೆಟ್ ಗಳಿಸಿದ ಅವರಿಗೆ ‘ಪಂದ್ಯ ಪುರುಷೋತ್ತಮ’ ಗೌರವ. ಕುಂಬ್ಳೆ ಕೂಡ 2 ವಿಕೆಟ್ ಬುಟ್ಟಿಗೆ ಹಾಕಿಕೊಂಡರು. ಹೀಗಾಗಿ ಆ ಪಂದ್ಯದ ಎಲ್ಲಾ ವಿಕೆಟ್‌ಗಳೂ ಕರ್ನಾಟಕದ ಬೌಲರ್‌ಗಳಿಗೇ ಸಂದಿತೆನ್ನುವುದು ವಿಶೇಷ.

* 46ನೇ ಓವರ್‌ಗೆ 180 ರನ್‌ಗಳನ್ನಷ್ಟೇ ಗಳಿಸಿ ಎಲ್ಲ ವಿಕೆಟ್‌ಗಳನ್ನು ಒಪ್ಪಿಸಿದ ಪಾಕ್ ಈ ಪಂದ್ಯವನ್ನು ಸೋತಿತಾದರೂ ಇಂಜಮಮ್ ತಮ್ಮ ಪರಮ ಸಂಯಮದ ಆಟದ ಮೂಲಕ ನೆನಪು ಉಳಿಸಿದರು. 41 ರನ್‌ಗಳಲ್ಲಿ ಒಂದೇ ಬೌಂಡರಿ ಗಳಿಸಿದ ಅವರು ವಿಕೆಟ್ ಕಾಪಾಡಿಕೊಳ್ಳಲು ಕೊನೆವರೆಗೆ ಹೋರಾಡಿದರು. ತಂಡ 175 ರನ್ ಗಳಿಸಿದ್ದಾಗ 8ನೆಯವರಾಗಿ ಅವರು ಔಟಾದದ್ದು. ಸಯೀದ್ ಅನ್ವರ್ 36 (6 ಬೌಂಡರಿ) ಒದಗಿಸಿದ ಆರಂಭ ಹಾಗೂ ಮೊಯಿನ್ ಖಾನ್ ಕೊನೆಯಲ್ಲಿ ಪಟಪಟನೆ ಗಳಿಸಿದ 34 (37 ಎಸೆತ, 2 ಬೌಂಡರಿ, 1 ಸಿಕ್ಸರ್) ಗೆಲುವಿಗೆ ಸಾಕಾಗಲಿಲ್ಲ. ತಂಡಕ್ಕೆ 47 ರನ್‌ಗಳ ಸೋಲು.

* ಭಾರತ ಗೆಲ್ಲುತ್ತಿದ್ದಂತೆ ಪೊಲೀಸ್ ಭದ್ರತೆಯ ಗೋಡೆಯನ್ನೂ ಭೇದಿಸಿ ಮೈದಾನಕ್ಕೆ ಜನ ನುಗ್ಗಿದರು. ರಕ್ಷಣೆಗೆಂದು ಸಿಬ್ಬಂದಿ ಹಿಡಿದಿದ್ದ ಹಗ್ಗ ಜಿಗಿಯಲು ಹೋಗಿ ಅಜಯ್ ಜಡೇಜಾ ಮಕಾಡೆ ಬಿದ್ದಿದ್ದು ಆಗ ಸುದ್ದಿಯಾಗಿತ್ತು. ಭಾರತದ ಸಂಭ್ರಮಕ್ಕೆ ಆ ದಿನ ಪಾರವೇ ಇರಲಿಲ್ಲ. ಆದರೆ, ಪಾಕಿಸ್ತಾನ 1999ರಲ್ಲಿ ಫೈನಲ್ಸ್ ಪ್ರವೇಶಿಸಿದರೆ, ಭಾರತ ‘ಸೂಪರ್ ಸಿಕ್ಸ್’ ಹಂತದ ನಂತರವೇ ಟೂರ್ನಿಯಿಂದ ನಿರ್ಗಮಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.