ADVERTISEMENT

ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಆಡಲು ಕಾತರದಲ್ಲಿರುವ ಪೂಜಾರ

ಏಜೆನ್ಸೀಸ್
Published 30 ಮೇ 2021, 12:33 IST
Last Updated 30 ಮೇ 2021, 12:33 IST
ಚೇತೇಶ್ವರ ಪೂಜಾರ (ಇನ್‌ಸ್ಟಾಗ್ರಾಮ್‌ ಚಿತ್ರಗಳು)
ಚೇತೇಶ್ವರ ಪೂಜಾರ (ಇನ್‌ಸ್ಟಾಗ್ರಾಮ್‌ ಚಿತ್ರಗಳು)   

ದುಬೈ: ನ್ಯೂಜಿಲೆಂಡ್‌ ವಿರುದ್ಧ ನಿಗದಿಯಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದಲ್ಲಿ ಆಡುವ ಕುರಿತು ಪ್ರತಿಕ್ರಿಯಿಸಿರುವ ಟೀಂ ಇಂಡಿಯಾದ ಅಗ್ರ ಕ್ರಮಾಂಕದ ಆಟಗಾರ ಚೇತೇಶ್ವರ ಪೂಜಾರ, ‘ಮೈದಾನಕ್ಕೆ ಬರಲು ಹೆಚ್ಚು ಹೊತ್ತು ಕಾಯಲು ಸಾಧ್ಯವಿಲ್ಲ’ ಎಂದಿದ್ದಾರೆ.

ಜೂನ್ 18 ರಿಂದ ನಡೆಯಲಿರುವ ಈ ಪಂದ್ಯದಲ್ಲಿ ಟೀಂ ಇಂಡಿಯಾ ರೆಟ್ರೊ ಜರ್ಸಿಯನ್ನು ಧರಿಸಲಿದೆ.

ಈ ಕುರಿತು ಪೂಜಾರ ಅವರು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹೊಸ ಜರ್ಸಿಯೊಂದಿಗಿನ ಫೋಟೊವನ್ನು ಹಂಚಿಕೊಂಡಿದ್ದು, ‘ಹೊಸ ಕಿಟ್ ಇಲ್ಲಿದೆ... ಮೈದಾನಕ್ಕೆ ಬರಲು ಕಾಯಲು ಸಾಧ್ಯವಿಲ್ಲ!’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಇತ್ತೀಚೆಗೆ ಆಲ್‌ರೌಂಡರ್‌ ರವೀಂದ್ರ ಜಡೇಜಾ ಹೊಸ ಜರ್ಸಿ ಧರಿಸುವ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

ಫೈನಲ್ ಪಂದ್ಯಕ್ಕೂ ಮೊದಲು ಭಾರತ ತಂಡದ ಆಟಗಾರರಿಗೆ ‘ವ್ಯವಸ್ಥಿತ ಪ್ರತ್ಯೇಕವಾಸ‘ ಇರಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶನಿವಾರ ತಿಳಿಸಿತ್ತು. ಆದರೆ ಇಂಗ್ಲೆಂಡ್‌ನಲ್ಲಿ ತಂಡಕ್ಕಿರುವ ‘ಕಠಿಣ ಕ್ವಾರಂಟೈನ್‌‘ ಅವಧಿಯನ್ನು ಅದು ಉಲ್ಲೇಖಿಸಿಲ್ಲ.

ಇಂಗ್ಲೆಂಡ್‌ ಎದುರು ದ್ವಿಪಕ್ಷೀಯ ಸರಣಿ ಆಡಲು ನ್ಯೂಜಿಲೆಂಡ್ ಈಗಾಗಲೇ ಇಂಗ್ಲೆಂಡ್‌ಗೆ ಬಂದಿಳಿದಿದೆ. ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡವು ತವರಿನಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ಜೂನ್‌ 3ರಂದು ಇಂಗ್ಲೆಂಡ್‌ ತಲುಪಲಿದೆ.

ಭಾರತದಲ್ಲಿ ಈಗಾಗಲೇ ಮೊದಲ ಡೋಸ್‌ ಲಸಿಕೆ ಪಡೆದಿರುವ ಆಟಗಾರರು ಯುಕೆ ಆರೋಗ್ಯ ಇಲಾಖೆಯ ಮಾರ್ಗಸೂಚಿ ಅನ್ವಯ ಎರಡನೇ ಡೋಸ್ ಲಸಿಕೆಯನ್ನು ಇಂಗ್ಲೆಂಡ್‌ನಲ್ಲಿ ಪಡೆಯಲಿದ್ದಾರೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.