ADVERTISEMENT

ಮಹಿಳಾ ಪ್ರೀಮಿಯರ್ ಲೀಗ್‌: ಆರ್‌ಸಿಬಿಗೆ ತಪ್ಪದ ಸೋಲು, ಡೆಲ್ಲಿ ಜಯಭೇರಿ

ಪಿಟಿಐ
Published 13 ಮಾರ್ಚ್ 2023, 23:38 IST
Last Updated 13 ಮಾರ್ಚ್ 2023, 23:38 IST
ಪಂದ್ಯ ಗೆದ್ದು ಸಂಭ್ರಮಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೆಸ್‌ ಜೊನಾಸೆನ್‌ (ಬಲ) ಮತ್ತು ಮರಿಜಾನ್ ಕಾಪ್‌– ಎಎಫ್‌ಪಿ ಚಿತ್ರ
ಪಂದ್ಯ ಗೆದ್ದು ಸಂಭ್ರಮಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೆಸ್‌ ಜೊನಾಸೆನ್‌ (ಬಲ) ಮತ್ತು ಮರಿಜಾನ್ ಕಾಪ್‌– ಎಎಫ್‌ಪಿ ಚಿತ್ರ   

ನವಿ ಮುಂಬೈ: ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಜವಾಬ್ದಾರಿಯುತ ಆಟದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್‌ (ಡಬ್ಲ್ಯುಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಜಯ ಗಳಿಸಿತು.

ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಆರು ವಿಕೆಟ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಸೋಲುಣಿಸಿತು. ಇದರೊಂದಿಗೆ ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿ ಸತತ ಐದನೇ ಸೋಲು ಅನುಭವಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ನಿಗದಿತ ಓವರ್‌ ಗಳಲ್ಲಿ 4 ವಿಕೆಟ್‌ಗಳಿಗೆ 150 ರನ್‌ ಗಳಿಸಿತು. ಡೆಲ್ಲಿ ತಂಡವು ಎರಡು ಎಸೆತ ಬಾಕಿ ಇರುವಂತೆಯೇ ನಾಲ್ಕು ವಿಕೆಟ್‌ ಕಳೆದುಕೊಂಡು 154 ರನ್‌ ಗಳಿಸಿತು.

ADVERTISEMENT

ಗುರಿ ಬೆನ್ನತ್ತಿದ ಡೆಲ್ಲಿ ತಂಡವು ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (0) ವಿಕೆಟ್‌ಅನ್ನು ಬೇಗ ಕಳೆದುಕೊಂಡಿತು. ಮೆಗ್‌ ಲ್ಯಾನಿಂಗ್ (15) ಕೂಡ ಅಲ್ಪ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರು. ಬಳಿಕ ಅಲಿಸ್‌ ಕ್ಯಾಪ್ಸಿ (38), ಜೆಮಿಮಾ ರಾಡ್ರಿಸಗ್‌ (32), ಮರಿಜಾನ್ ಕಾಪ್‌ (ಔಟಾಗದೆ 32) ಮತ್ತು ಜೆಸ್‌ ಜೊನಾಸೆನ್‌ (ಔಟಾಗದೆ 29) ತಂಡವನ್ನು ಜಯದ ದಡ ಸೇರಿಸಿದರು.

ಆರ್‌ಸಿಬಿ ಪರ ಶೋಭನಾ ಆಶಾ (27ಕ್ಕೆ 2) ಬೌಲಿಂಗ್‌ನಲ್ಲಿ ಮಿಂಚಿದರು.

ಆರ್‌ಸಿಬಿ ಸವಾಲಿನ ಮೊತ್ತ: ಎಲೀಸ್‌ ಪೆರಿ (ಔಟಾಗದೆ 67) ಅವರ ಅಜೇಯ ಅರ್ಧಶತಕ ಮತ್ತು ರಿಚಾ ಘೋಷ್‌ ಅಬ್ಬರದ ಆಟದ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸವಾಲಿನ ಮೊತ್ತ ಗಳಿಸಿತ್ತು.

ಪೆರಿ ಅವರು ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್‌ಗಳ ನೆರವಿನಿಂದ 52 ಎಸೆತಗಳಲ್ಲಿ 67 ರನ್‌ ಗಳಿಸಿದರು. ರಿಚಾ 16 ಎಸೆತಗಳಿಂದ 37 ರನ್‌ ಕಲೆಹಾಕಿದರು. ತಲಾ ಮೂರು ಸಿಕ್ಸರ್‌ ಮತ್ತು ಬೌಂಡರಿ ಮೂಲಕ ರನ್‌ರೇಟ್‌ ಹೆಚ್ಚಿಸಿದರು.

ಆರ್‌ಸಿಬಿ ತಂಡಕ್ಕೆ ಈ ಪಂದ್ಯದಲ್ಲೂ ಸ್ಫೋಟಕ ಆರಂಭ ದೊರೆಯಲಿಲ್ಲ. ನಾಯಕಿ ಸ್ಮೃತಿ (8 ರನ್‌, 15 ಎ.) ಅವರ ವೈಫಲ್ಯ ಮುಂದುವರಿಯಿತು. ಸೋಫಿ ಡಿವೈನ್‌ ಮತ್ತು ಹೆಥರ್‌ ನೈಟ್‌ ಅವರಿಗೂ ಅಬ್ಬರಿಸಲು ಎದುರಾಳಿ ಬೌಲರ್‌ಗಳು ಅವಕಾಶ ನೀಡಲಿಲ್ಲ.

14 ಓವರ್‌ಗಳು ಕೊನೆಗೊಂಡಾಗ ಬೆಂಗಳೂರಿನ ತಂಡದ ಮೊತ್ತ 68 ಆಗಿತ್ತು. ಆ ಬಳಿಕ ಪೆರಿ ಮತ್ತು ರಿಚಾ ಅಬ್ಬರಿಸತೊಡಗಿದರು. ಕೊನೆಯ ಆರು ಓವರ್‌ಗಳಲ್ಲಿ 82 ರನ್‌ಗಳು ಬಂದವು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 34 ಎಸೆತಗಳಲ್ಲಿ 74 ರನ್‌ ಸೇರಿಸಿದರು. ಇದರಿಂದ ತಂಡದ ಮೊತ್ತ 150ರ ಗಡಿ ತಲುಪಿತು. ಡೆಲ್ಲಿ ತಂಡದ ಶಿಖಾ ಪಾಂಡೆ 23 ರನ್‌ಗಳಿಗೆ ಮೂರು ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್‌
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 150 (ಸ್ಮೃತಿ ಮಂದಾನ 8, ಸೋಫಿ ಡಿವೈನ್‌ 21, ಎಲೀಸ್‌ ಪೆರಿ ಔಟಾಗದೆ 67, ಹೆಥರ್‌ ನೈಟ್‌ 11, ರಿಚಾ ಘೋಷ್‌ 37, ಶಿಖಾ ಪಾಂಡೆ 23ಕ್ಕೆ 3).

ಡೆಲ್ಲಿ ಕ್ಯಾಪಿಟಲ್ಸ್: 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 154 (ಅಲಿಸ್ ಕ್ಯಾಪ್ಸಿ 38, ಜೆಮಿಮಾ ರಾಡ್ರಿಸಗ್‌ 32, ಮರಿಜಾನ್ ಕಾಪ್‌ ಔಟಾಗದೆ 32, ಜೆಸ್‌ ಜೊನಾಸೆನ್‌ ಔಟಾಗದೆ 29; ಮೇಗನ್ ಶುಟ್‌ 24ಕ್ಕೆ 1, ಪ್ರೀತಿ ಬೋಸ್‌ 12ಕ್ಕೆ 1, ಶೋಭನಾ ಆಶಾ 27ಕ್ಕೆ 2).

ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್‌ಗೆ 6 ವಿಕೆಟ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.