
ಆರ್‌ಸಿಬಿ ತಂಡದ ಸ್ಮೃತಿ ಮಂದಾನ ಮತ್ತು ಶ್ರೇಯಾಂಕಾ ಪಾಟೀಲ
ಎಎಫ್‌ಪಿ ಚಿತ್ರ
ವಡೋದರ: ಸತತ ಐದು ಗೆಲುವುಗಳ ನಂತರ ಒಂದು ಪಂದ್ಯ ಸೋತಿರುವ ರಾಯಲ್ ಚಾಲೆಂಜರ್ಸ್ ಬಳಗವು ಸೋಮವಾರ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಎದುರು ಗೆಲುವಿನ ಹಳಿಗೆ ಮರಳುವ ಛಲದಲ್ಲಿದೆ.
ಟೂರ್ನಿಯ ಅಂಕಪಟ್ಟಿಯಲ್ಲಿ ಪ್ರಸ್ತುತ ಆರ್‌ಸಿಬಿಯು 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅಲ್ಲದೇ ಪ್ಲೇ ಆಫ್ ಕೂಡ ಪ್ರವೇಶಿಸಿದೆ. ಆದರೆ ಮುಂಬೈ ಸ್ಥಿತಿ ಚೆನ್ನಾಗಿಲ್ಲ. ಕೇವಲ 4 ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ. ಆದ್ದರಿಂದ ಮುಂಬೈ ತಂಡಕ್ಕೆ ಈ ಪಂದ್ಯದ ಜಯ ಮುಖ್ಯವಾಗಿದೆ.
ಆದರೆ ಆರ್‌ಸಿಬಿಯು ಮೈಮರೆಯುವಂತಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಸೋಲಿನಿಂದ ಬಹಳಷ್ಟು ಪಾಠಗಳನ್ನು ಕಲಿಯಬೇಕಿದೆ. ಪ್ರಮುಖವಾಗಿ ಬ್ಯಾಟಿಂಗ್ ವೈಫಲ್ಯದಿಂದ ಹೊರಬರಬೇಕಿದೆ. ಕೋತಂಬಿ ಕ್ರೀಡಾಂಗಣದ ಪಿಚ್ ಬೌಲರ್‌ಗಳಿಗೆ ಹೆಚ್ಚು ನೆರವು ಕೊಡುತ್ತಿರುವುದರಿಂದ ಆರ್‌ಸಿಬಿ ಬ್ಯಾಟರ್‌ಗಳು ತಮ್ಮ ಕೌಶಲಗಳಿಗೆ ಸಾಣೆ ಹಿಡಿಯಬೇಕಿದೆ.
ನಾಯಕಿ ಸ್ಮೃತಿ ಮಂದಾನ ಮತ್ತು ಆಲ್‌ರೌಂಡರ್ ನದೀನ್ ಡೀ ಕ್ಲರ್ಕ್ ಅವರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ರಾಧಾ ಯಾದವ್ ಮತ್ತು ರಿಚಾ ಘೋಷ್ ಅವರು ಮಧ್ಯಮ ಕ್ರಮಾಂಕದಲ್ಲಿ ಇನ್ನಷ್ಟು ಉತ್ತಮವಾಗಿ ಆಡಿದರೆ ತಂಡಕ್ಕೆ ಹೆಚ್ಚಿನ ಬಲ ಬರಲಿದೆ.
ಬೌಲಿಂಗ್‌ನಲ್ಲಿ ಲಾರೆನ್ ಬೆಲ್, ಸ್ಪಿನ್ನರ್ ಶ್ರೇಯಾಂಕಾ ಪಾಟೀಲ ಮತ್ತು ಅರುಂಧತಿ ರೆಡ್ಡಿ ಅವರು ತಮ್ಮ ದಾಳಿಯನ್ನು ಮತ್ತಷ್ಟು ಚುರುಕುಗೊಳಿಸುವ ಅಗತ್ಯವೂ ಇದೆ.
ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ತಂಡವು ಆಲ್‌ರೌಂಡರ್ ನ್ಯಾಟ್ ಶಿವರ್ ಬ್ರಂಟ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅಮನ್ಮೋತ್ ಕೌರ್, ಅಮೆಲಿಯಾ ಕೆರ್, ಸಜನಾ ಸಜೀವನ್, ಹೆಯಲಿ ಮ್ಯಾಥ್ಯೂಸ್ ಹಾಗೂ ಜಿ. ಕಮಲಿನಿ ಅವರು ತಮ್ಮ ಲಯಕ್ಕೆ ಮರಳಿದರೆ ಹರ್ಮನ್ ಬಳಗವು ಗೆಲುವಿನತ್ತ ಮುಖ ಮಾಡಲು ಸಾಧ್ಯವಾಗಬಹುದು.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.