ADVERTISEMENT

ಡಬ್ಲ್ಯುಪಿಎಲ್‌ ಟಿ20 ಟೂರ್ನಿ: ವಿದೇಶಿ ಆಟಗಾರ್ತಿಯರ ಪಾರಮ್ಯ

ಡಬ್ಲ್ಯುಪಿಎಲ್‌ ಟಿ20 ಟೂರ್ನಿ: ಬೆಳಕಿಗೆ ಬರದ ಹೊಸ ಪ್ರತಿಭೆಗಳು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 18:44 IST
Last Updated 27 ಮಾರ್ಚ್ 2023, 18:44 IST
ಮೆಗ್‌ ಲ್ಯಾನಿಂಗ್‌
ಮೆಗ್‌ ಲ್ಯಾನಿಂಗ್‌   

ಮುಂಬೈ (ಪಿಟಿಐ): ಭಾರತದ ಮಹಿಳಾ ಕ್ರಿಕೆಟ್‌ಗೆ ಹೊಸ ದಿಶೆ ತೋರಿರುವ ಚೊಚ್ಚಲ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಟಿ20 ಟೂರ್ನಿ ಯಶಸ್ವಿಯಾಗಿ ಕೊನೆಗೊಂಡಿದೆ. ಐಪಿಎಲ್‌ನಂತೆ ಈ ಟೂರ್ನಿಯ ಭವಿಷ್ಯ ಕೂಡಾ ಉಜ್ವಲವಾಗಿದೆ ಎಂಬ ಭರವಸೆ ಮೂಡಿದೆ.

ಆದರೆ ಭಾನುವಾರ ಕೊನೆಗೊಂಡ ಟೂರ್ನಿಯಲ್ಲಿ ವಿದೇಶಿ ಆಟಗಾರ್ತಿಯರ ಪ್ರದರ್ಶನದ ಮುಂದೆ ಭಾರತದ ಆಟಗಾರ್ತಿಯರು ಅಲ್ಪ ಮಂಕಾಗಿ ಕಂಡುಬಂದರು. ಒಂದಿಬ್ಬರನ್ನು ಹೊರತುಪಡಿಸಿದರೆ, ಸ್ಥಳೀಯ ಪ್ರತಿಭೆಗಳು ತಮ್ಮ ಛಾಪು ಮೂಡಿಸಲು ವಿಫಲರಾದರು.

ಈ ಬಾರಿಯ ಎಲ್ಲ ಪಂದ್ಯಗಳೂ ಮುಂಬೈನ ಎರಡು ತಾಣಗಳಲ್ಲಿ ಆಯೋಜನೆಗೊಂಡವು. ಇಂಗ್ಲೆಂಡ್‌, ಆಸ್ಟ್ರೇಲಿಯಾ ಮತ್ತು ವೆಸ್ಟ್‌ ಇಂಡೀಸ್‌ನ ಆಟಗಾರ್ತಿಯರು ಅಮೋಘ ಪ್ರದರ್ಶನದ ಮೂಲಕ ಮಿಂಚು ಹರಿಸಿದರು.

ADVERTISEMENT

ಅತ್ಯಧಿಕ ರನ್‌ ಗಳಿಸಿದ ಅಗ್ರ ಐವರು ಬ್ಯಾಟರ್‌ಗಳಲ್ಲಿ ಭಾರತದ ಒಬ್ಬರು ಮಾತ್ರ ಇದ್ದಾರೆ. 281 ರನ್‌ಗಳನ್ನು ಕಲೆಹಾಕಿದ ಹರ್ಮನ್‌ಪ್ರೀತ್‌ ಕೌರ್‌ ನಾಲ್ಕನೇ ಸ್ಥಾನದಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕಿ ಮೆಗ್‌ ಲ್ಯಾನಿಂಗ್‌ ಅವರು 345 ರನ್‌ಗಳೊಂದಿಗೆ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ತಮ್ಮದಾಗಿಸಿಕೊಂಡರು.

ಮುಂಬೈ ಇಂಡಿಯನ್ಸ್‌ ತಂಡದ ಹೆಯಲಿ ಮ್ಯಾಥ್ಯೂಸ್‌ ಅವರು ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಮಿಂಚಿ ಈ ಟೂರ್ನಿಯನ್ನು ಸ್ಮರಣೀಯವನ್ನಾಗಿಸಿಕೊಂಡರು. ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಒಟ್ಟು 16 ವಿಕೆಟ್‌ಗಳನ್ನು ಪಡೆದರು. ಈ ಆರಂಭಿಕ ಆಟಗಾರ್ತಿ ಬ್ಯಾಟಿಂಗ್‌ನಲ್ಲೂ ಸಾಮರ್ಥ್ಯ ತೋರಿದ್ದಾರೆ.

ಭಾರತದ ಆಟಗಾರ್ತಿಯರಲ್ಲಿ ನಿರೀಕ್ಷೆ ಮೂಡಿಸಿದ್ದ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಉಪನಾಯಕಿ ಜೆಮಿಮಾ ರಾಡ್ರಿಗಸ್‌ ಈ ಟೂರ್ನಿಯಲ್ಲಿ ಮಿಂಚಲು ವಿಫಲರಾದರು. ಅದೇ ರೀತಿ ರಾಷ್ಟ್ರೀಯ ತಂಡದಲ್ಲಿರುವ ಬೌಲರ್‌ಗಳೂ ನಿರಾಶೆ ಮೂಡಿಸಿದರು.

ಗಮನ ಸೆಳೆದ ಸೈಕಾ ಇಶಾಕ್: ದೇಸಿ ಕ್ರಿಕೆಟ್‌ನಲ್ಲಿ ಆಡುವ ಭಾರತದ ಆಟಗಾರ್ತಿಯರಲ್ಲಿ ಗಮನ ಸೆಳೆದದ್ದು ಸೈಕಾ ಇಶಾಕ್‌ ಮಾತ್ರ. ಮುಂಬೈ ಇಂಡಿಯನ್ಸ್‌ ತಂಡದ ಈ ಎಡಗೈ ಸ್ಪಿನ್ನರ್‌ ಒಟ್ಟು 15 ವಿಕೆಟ್‌ಗಳನ್ನು ಪಡೆದಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಶ್ರೇಯಾಂಕಾ ಪಾಟೀಲ್‌ ಮತ್ತು ಕನಿಕಾ ಅಹುಜಾ ಅವರು ಒಂದೆರಡು ಪಂದ್ಯಗಳಲ್ಲಿ ಗಮನ ಸೆಳೆದರು.

ಕಾಯುವಿಕೆ ಕೊನೆಗೊಂಡಿದೆ: ಹರ್ಮನ್‌

‘ಒಬ್ಬಳು ನಾಯಕಿಯಾಗಿ ತಂಡಕ್ಕೆ ಟ್ರೋಫಿ ಗೆದ್ದುಕೊಡಬೇಕೆಂದು ಸುದೀರ್ಘ ಅವಧಿಯಿಂದ ಕಾಯುತ್ತಿದ್ದೆ. ನನ್ನ ಕಾಯುವಿಕೆ ಕೊನೆಗೊಂಡಿದೆ. ಈ ಗೆಲುವು ವೈಯಕ್ತಿಕವಾಗಿಯೂ ವಿಶೇಷ ಅನುಭವ ನೀಡಿದೆ’ ಎಂದು ಚೊಚ್ಚಲ ಡಬ್ಲ್ಯುಪಿಎಲ್‌ ಗೆದ್ದ ಮುಂಬೈ ಇಂಡಿಯನ್ಸ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹೇಳಿದ್ದಾರೆ.

ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಏಳು ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿತ್ತು. ಹರ್ಮನ್‌ಪ್ರೀತ್‌ ಅವರಿಗೆ ಭಾರತ ತಂಡದ ನಾಯಕಿಯಾಗಿ ಪ್ರಮುಖ ಟ್ರೋಫಿ ಗೆದ್ದುಕೊಡಲು ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.