ADVERTISEMENT

ಜೂನ್‌ 7ರಿಂದ ಡಬ್ಲ್ಯುಟಿಸಿ ಫೈನಲ್‌

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 15:20 IST
Last Updated 8 ಫೆಬ್ರುವರಿ 2023, 15:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದುಬೈ: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ (ಡಬ್ಲ್ಯುಟಿಸಿ) ಫೈನಲ್‌ ಪಂದ್ಯ ಇಂಗ್ಲೆಂಡ್‌ನ ದಿ ಓವಲ್‌ ಮೈದಾನದಲ್ಲಿ ಜೂನ್‌ 7 ರಿಂದ 11ರ ವರೆಗೆ ನಡೆಯಲಿದೆ. ಜೂನ್‌ 12 ರಿಸರ್ವ್‌ ದಿನವಾಗಿ ಮೀಸಲಿಡಲಾಗಿದೆ ಎಂದು ಐಸಿಸಿ ಹೇಳಿದೆ.

ಐಸಿಸಿ ವಿಶ್ವ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಮೊದಲ ಎರಡು ಸ್ಥಾನಗಳಲ್ಲಿರುವ ತಂಡಗಳು ಡಬ್ಲ್ಯುಟಿಸಿ ಫೈನಲ್‌ನಲ್ಲಿ ಆಡಲಿವೆ. ಇದೀಗ ಆಸ್ಟ್ರೇಲಿಯಾ ಮತ್ತು ಭಾರತ ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿವೆ. ಆದರೆ ಜೂನ್‌ಗೆ ಮುನ್ನ ಇನ್ನೂ ಕೆಲವು ಟೆಸ್ಟ್‌ ಸರಣಿಗಳು ನಡೆಯಲಿರುವುದರಿಂದ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಏರುಪೇರು ಉಂಟಾಗಬಹುದು.

ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ನಾಲ್ಕು ಪಂದ್ಯಗಳ ‘ಬಾರ್ಡರ್‌–ಗಾವಸ್ಕರ್‌’ ಟ್ರೋಫಿ ಸರಣಿಯಲ್ಲಿ ಎದುರಾಗಲಿವೆ. ಭಾರತ ಮತ್ತು ಆಸ್ಟ್ರೇಲಿಯಾ ಒಳಗೊಂಡಂತೆ ಒಟ್ಟು ಆರು ತಂಡಗಳಿಗೆ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಲು ಅವಕಾಶವಿದೆ.

ADVERTISEMENT

ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನಗಳಲ್ಲಿವೆ. ಇವೆರಡು ತಂಡಗಳು ಎರಡು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಕ್ರಮವಾಗಿ ನ್ಯೂಜಿಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಎದುರಿಸಲಿವೆ. ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಈ ಸರಣಿಯಲ್ಲಿ ಗೆಲುವು ಪಡೆದರೆ ಫೈನಲ್‌ಗೆ ಅರ್ಹತೆ ಪಡೆಯಲು ಅವಕಾಶವಿದೆ.

ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ‘ಬಾರ್ಡರ್‌–ಗಾವಸ್ಕರ್‌’ ಟ್ರೋಫಿ ಸರಣಿ ಮಹತ್ವದ್ದಾಗಿವೆ. ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ಗುರುವಾರ ಆರಂಭವಾಗಲಿದೆ.

2021 ರಲ್ಲಿ ನಡೆದಿದ್ದ ಚೊಚ್ಚಲ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾರತ ತಂಡವನ್ನು ಮಣಿಸಿದ್ದ ನ್ಯೂಜಿಲೆಂಡ್‌ ಚಾಂಪಿಯನ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.