ADVERTISEMENT

ಮುಂಬೈಗೆ ಗೆಲುವಿನ ಕಾಣಿಕೆ ಕೊಟ್ಟ ಯುವ ವೇಗಿ: ಯಾರು ಈ ಆಕಾಶ್‌ ಮಧ್ವಾಲ್‌?  

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮೇ 2023, 12:51 IST
Last Updated 25 ಮೇ 2023, 12:51 IST
 ಆಕಾಶ್‌ ಮಧ್ವಾಲ್‌ –ಪಿಟಿಐ ಚಿತ್ರ
ಆಕಾಶ್‌ ಮಧ್ವಾಲ್‌ –ಪಿಟಿಐ ಚಿತ್ರ   

ಬೆಂಗಳೂರು: ಐಪಿಎಲ್ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬಲಗೈ ಮಧ್ಯಮವೇಗಿ ಆಕಾಶ್ ಮಧ್ವಾಲ್‌ ಅವರ ಬೌಲಿಂಗ್ ದಾಳಿಯ ಮುಂದೆ ಲಖನೌ ಸೂಪರ್ ಜೈಂಟ್ಸ್ ತಂಡ ದೂಳಿಪಟವಾಯಿತು.

ಆಕಾಶ್‌ ಬೌಲಿಂಗ್‌ ದಾಳಿಯಿಂದ ಮುಂಬೈ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದು ಕ್ವಾಲಿಫೈಯರ್‌–2 ಹಂತಕ್ಕೆ ಪ್ರವೇಶ ಪಡೆಯಿತು. 3.3 ಓವರ್ ಬೌಲ್ ಮಾಡಿ ಐದು ವಿಕೆಟ್‌ ಕಬಳಿಸಿ, ಕೇವಲ ಐದು ರನ್ ನೀಡಿದರು.

ಕ್ರಿಕೆಟ್‌ ಅಭಿಮಾನಿಗಳ ಚಿತ್ತ ಇದೀಗ ಈ ಯುವ ಬೌಲರ್‌ ಮೇಲೆ ನೆಟ್ಟಿದೆ. ಯಾರು ಈ ಆಕಾಶ್‌ ಮಧ್ವಾಲ್‌ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.

ADVERTISEMENT
ಯಾರು ಈ ಆಕಾಶ್‌ ಮಧ್ವಾಲ್‌? 

ಆಕಾಶ್‌ ಮಧ್ವಾಲ್‌ ಉತ್ತರಾಖಂಡ ರಾಜ್ಯದವರು. ಓದಿದ್ದು ಎಂಜಿನಿರಂಗ್‌ ಪದವಿ ಆದರೂ ಕ್ರಿಕೆಟ್‌ ಮೇಲಿನ ಆಸಕ್ತಿ ಅವರನ್ನು ಐಪಿಎಲ್ ಟೂರ್ನಿವರೆಗೂ ಕರೆತಂದಿದೆ. ಆಕಾಶ್‌ ನಾಲ್ಕು ವರ್ಷಗಳ ಹಿಂದೆ ಟೆನಿಸ್‌ ಬಾಲ್‌ ಕ್ರಿಕೆಟ್‌ ಮಾತ್ರ ಆಡುತ್ತಿದ್ದರು. ಕ್ರಿಕೆಟ್‌ ಮೇಲಿನ ಆಸಕ್ತಿ ಫಲವಾಗಿ ಉತ್ತರಾಖಂಡ ಕ್ರಿಕೆಟ್‌ ತಂಡಕ್ಕೆ ಸೇರಲು ಮುಂದಾದರು. 

ಈ ವೇಳೆ ಉತ್ತರಾಖಂಡ ಕೋಚ್‌ ವಾಸೀಂ ಜಾಫರ್‌ ಕಣ್ಣಿಗೆ ಬಿದ್ದರು. ಅವರ ಮಾರಕ ಯಾರ್ಕರ್‌, ವೇಗದ ಬೌಲಿಂಗ್‌ ಶೈಲಿ ನೋಡಿದ ಜಾಫರ್‌, ಮುಷ್ತಾಕ್‌ ಅಲಿ ಟೂರ್ನಿಗೆ ನೇರವಾಗಿ ಆಯ್ಕೆ ಮಾಡಿದರು. ಅಲ್ಲಿಂದ ಆಕಾಶ್‌ ಕ್ರಿಕೆಟ್‌ ಅಭಿಯಾನ ಆರಂಭವಾಯಿತು. ಸದ್ಯ ಅವರು ದೇಶಿ ಕ್ರಿಕೆಟ್‌ನಲ್ಲಿ ಉತ್ತರಾಖಂಡ ಪರ ಆಡುತ್ತಿದ್ದಾರೆ.

ಆಕಾಶ್‌ 2021ರಲ್ಲಿ ನೆಟ್‌ ಬೌಲರ್‌ ಆಗಿ ಆರ್‌ಸಿಬಿ ತಂಡವನ್ನು ಸೇರಿದರು. 2022ರಲ್ಲಿ ಅವರನ್ನು ಯಾರು ಖರೀದಿಸಲಿಲ್ಲ. ಈ ವೇಳೆ ಸೂರ್ಯ ಕುಮಾರ್‌ ಯಾದವ್‌ ಗಾಯಗೊಂಡು ಟೂರ್ನಿಯಿಂದ ಹೊರ ಬಿದ್ದರು. ಆ ಸ್ಥಾನಕ್ಕೆ ಆಕಾಶ್‌ ಅವರನ್ನು ಮುಂಬೈ ಇಂಡಿಯನ್ಸ್‌ ₹ 20 ಲಕ್ಷ ನೀಡಿ ಖರೀದಿ ಮಾಡಿತು. 

ಈ ಟೂರ್ನಿಯ ಆರಂಭದಲ್ಲಿ ಆಕಾಶ್‌ ಗಮನ ಸೆಳೆಯಲಿಲ್ಲ. ನಂತರ ಬೌಲಿಂಗ್‌ನಲ್ಲಿ ತಮ್ಮ ಛಾಪು ತೋರಿಸಿದರು. ಮಹತ್ವದ ಪಂದ್ಯದಲ್ಲಿ ಮುಂಬೈಗೆ ಗೆಲುವಿನ ಉಡುಗೊರೆ ನೀಡಿದ ಆಕಾಶ್‌ ಬಗ್ಗೆ ಕ್ರಿಕೆಟ್‌ ದಿಗ್ಗಜರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಆಕಾಶ್‌, ಕ್ರಿಕೆಟಿಗ ರಿಷಭ್‌ ಪಂತ್‌ ಪಕ್ಕದ ಮನೆಯವರು ಎಂಬುದು ವಿಶೇಷ. ಬಾಲ್ಯದಲ್ಲಿ ಇವರು ಒಟ್ಟಿಗೆ ಆಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.