ADVERTISEMENT

ಎಐಎಫ್‌ಎಫ್‌ ಚುನಾವಣೆ: ಸುಬ್ರತಾ, ಮಿಂಗ್ ನಾಮಪತ್ರ ತಿರಸ್ಕಾರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 14:31 IST
Last Updated 14 ಆಗಸ್ಟ್ 2022, 14:31 IST
-
-   

ನವದೆಹಲಿ(ಪಿಟಿಐ): ಭಾರತ ಫುಟ್‌ಬಾಲ್‌ ಕ್ಷೇತ್ರದ ಅನುಭವಿ ಆಡಳಿತಗಾರರಾದ ಸುಬ್ರತಾ ದತ್ತಾ ಹಾಗೂ ಲಾರ್ಸಿಂಗ್ ಮಿಂಗ್ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ಚುನಾವಣೆಗೆ ಸ್ಪರ್ಧಿಸಲು ಸಲ್ಲಿಸಿದ ನಾಮಪತ್ರಗಳನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದಾರೆ.

‘ಇಂಡಿಯನ್ ಫುಟ್‌ಬಾಲ್ ಅಸೋಷಿಯೇಷನ್ (ಐಎಫ್‌ಎ) ಹಾಗೂ ಮೆಘಾಲಯ ಫುಟ್‌ಬಾಲ್ ಸಂಸ್ಥೆಯಿಂದ ಅವರ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. ಅಗತ್ಯವಿರುವ ಅರ್ಹತಾ ಮಾನದಂಡಗಳನ್ನು ಅವರು ಪೂರೈಸಿಲ್ಲ’ ಎಂದು ಎಐಎಫ್‌ಎಫ್‌ ಮೂಲಗಳು ತಿಳಿಸಿವೆ.

ಸುಬ್ರತಾ ಹಾಗೂ ಲಾರ್ಸಿಂಗ್ ಅವರು ಈ ಮೊದಲು ಇದ್ದ ಆಡಳಿತ ಸಮಿತಿಗೆ ಮೂರು ಅವಧಿ ಕಾರ್ಯನಿರ್ವಹಿಸಿದ್ದಾರೆ. ಅದರಿಂದಾಗಿ ಅವರು ಅನರ್ಹಗೊಂಡಿದ್ದಾರೆ. ರಾಷ್ಟ್ರೀಯ ಕ್ರೀಡಾ ನೀತಿ(ಎನ್‌ಎಸ್‌ಸಿ) ಅನ್ವಯ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.

ADVERTISEMENT

ಐಎಫ್‌ಎ ಮುಖ್ಯಸ್ಥರಾಗಿರುವ ದತ್ತಾ, ಈ ಹಿಂದೆ ಪ್ರಫುಲ್‌ ಪಟೇಲ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿದ್ದರು. ಮೆಘಾಲಯದ ಮಿಂಗ್ ಅವರೂ ಅನರ್ಹರಾಗಿದ್ದಾರೆ. ಅವರನ್ನೂ ಮೇಘಾಲಯ ರಾಜ್ಯ ಸಂಸ್ಥೆಯು ಶಿಫಾರಸು ಮಾಡಿತ್ತು.

ಚುನಾವಣೆಗಾಗಿ ಮತದಾರರ ಪಟ್ಟಿಯನ್ನು ಶೀಘ್ರದಲ್ಲಿಯೇ ಚುನಾವಣಾಧಿಕಾರಿಗಳು ಸಿದ್ಧಗೊಳಿಸಲಿದ್ದಾರೆ. 36 ರಾಜ್ಯ ಸಂಸ್ಥೆಗಳ ಪ್ರತಿನಿಧಿಗಳು, 36 ಖ್ಯಾತನಾಮ ಫುಟ್‌ಬಾಲ್ ಆಟಗಾರರು ಇದರಲ್ಲಿ ಇರಲಿದ್ದಾರೆ. ಅದರಲ್ಲಿ 24 ಪುರುಷ ಹಾಗೂ 12 ಮಹಿಳೆಯರು ಇರಲಿದ್ದಾರೆ.

ಅಭ್ಯರ್ಥಿಗಳು ಆ. 17 ರಿಂದ 19ರವರೆಗೆ ನಾಮಪತ್ರಗಳನ್ನು ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.